ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಿಡಿಲಿನ ಮಾಹಿತಿ ನೀಡುವ ‘ದಾಮಿನಿ’

30 ರಿಂದ 45 ನಿಮಿಷಗಳ ಮುಂಚೆ ಎಚ್ಚರಿಕೆ ಸಂದೇಶ ರವಾನಿಸುವ ಆ್ಯಪ್‌
Last Updated 13 ಜುಲೈ 2020, 15:36 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಆಗಾಗ ಗುಡುಗು ಸಿಡಿಲಿನೊಂದಿಗೆ ಮಳೆಯಾಗುತ್ತಿದೆ. ರೈತರಿಗೆ, ಸಾರ್ವಜನಿಕರಿಗೆ ಸಿಡಿಲಿನ ಕುರಿತು ಮಾಹಿತಿ ನೀಡಲು ಸರ್ಕಾರದ ‘ದಾಮಿನಿ’ ಆ್ಯಪ್‌ ನೆರವಿಗೆ ಬರಲಿದೆ. ನೋಂದಾಯಿತ ಬಳಕೆದಾರರು ಆಯಾ ಪ್ರದೇಶದ ಸಿಡಿಲಿನ ಮುನ್ಸೂಚನೆ ಮತ್ತು ಎಚ್ಚರಿಕೆಯ ಮಾಹಿತಿ ಪಡೆಯಬಹುದು.

ಈ ಆ್ಯಪ್‌ಪ್ರಸ್ತುತ ಸಿಡಿಲಿನ ಹೊಡೆತಗಳ ನಿಖರವಾದ ಸ್ಥಳಗಳನ್ನು ಗುರುತಿಸುತ್ತದೆ. ನಮ್ಮ ಸುತ್ತಮುತ್ತಲಿನ 20 ರಿಂದ 40 ಚದರ ಕಿ.ಮೀವರೆಗೆ ಸಂಭವನೀಯ ಗುಡುಗು ಸಹಿತ ಮಿಂಚಿನ ಚಲನೆಯ ಬಗ್ಗೆ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲು ಎಚ್ಚರಿಕೆ ನೀಡುತ್ತದೆ. ಸದ್ಯಕ್ಕೆ ಎಚ್ಚರಿಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ.

ಎಲ್ಲೆಲ್ಲಿ ಮಳೆ, ಗುಡುಗು, ಸಿಡಿಲು ಬಡಿಯಲಿದೆ ಎನ್ನುವ ಸೂಚನೆಯನ್ನು ಈ ಆ್ಯಪ್‌ ನೀಡಲಿದೆ. ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ನೋಂದಣಿ ಮಾಡಿಸಿಕೊಂಡರೆ ಮಳೆ, ಬಿತ್ತನೆ, ರಾಶಿ, ಸಿಡಿಲು ಕುರಿತಾದ ಸಂದೇಶಗಳು ಬರುತ್ತವೆ ಎನ್ನುತ್ತಾರೆ ಸುರಪುರದ ಕವಡಿಮಟ್ಟಿ ಕೃಷಿ ಕೇಂದ್ರದ ವಿಜ್ಞಾನಿಗಳು.

‘ಹೊಲದಲ್ಲಿ ಉಳುಮೆ ಮಾಡುವ ರೈತರು, ದನಕರುಗಳು ಮತ್ತು ಕುರಿಗಾರರು ಸಿಡಿಲಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ರೈತರು ಈ ಆ್ಯಪ್‌ ಬಳಸಬೇಕು. ಮೊದಲೇ ಮುನ್ಸೂಚನೆ ಸಿಗುವುದರಿಂದ ಅಲ್ಲಿಂದ ಬೇರೆ ಕಡೆ ತೆರಳಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಮರೇಶ ವೈ.ಎಸ್. ಅವರು.

‘ನೈಸರ್ಗಿಕ ಕಾರಣಗಳಿಂದ ಉಂಟಾಗುವ ಆಕಸ್ಮಿಕ ಸಾವುಗಳಲ್ಲಿ ಶೇ 25 ರಷ್ಟು ಅಸಾಮಾನ್ಯ ಹವಾಮಾನ ಘಟನೆಗಳಾದ ಶಾಖದ ಅಲೆಗಳು, ಶೀತದ ಅಲೆಗಳು, ವಿಪರೀತ ಮಳೆ, ಸಿಡಿಲು ಮತ್ತು ಚಂಡಮಾರುತಗಳಿಂದ ಸಾವನ್ನಪ್ಪುತ್ತಿದ್ದಾರೆ. ಇವುಗಳಲ್ಲಿ ಸಿಡಿಲಿನ ಹೊಡೆತದಿಂದಾಗಿ ದೇಶದಾದ್ಯಂತ ಅಪಾರ ಪ್ರಮಾಣದ ಸಾವು ನೋವು ಮತ್ತು ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಕಡವಡಿಮಟ್ಟಿಯ ಕೃಷಿ ಹವಾಮಾನ ತಜ್ಞ ಡಾ.ಶಂತವೀರಯ್ಯ.

‘1967 ರಿಂದ 2015ರ ವರೆಗೆ ದೇಶದಲ್ಲಿ ನೈಸರ್ಗಿಕ ವಿಪತ್ತುಗಳಿಂದ ಸಂಭವಿಸಿದ ಸಾವು ನೋವುಗಳಲ್ಲಿ ಶೇ 39 ರಷ್ಟು ಸಿಡಿಲಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲೂ ಸಿಡಿಲಿನಿಂದ ಹೆಚ್ಚಿನ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ದಾಖಲೆಗಳ ಪ್ರಕಾರ 2009 ರಿಂದ 2018ರ ವರೆಗೆ ಕರ್ನಾಟಕದಲ್ಲಿ ಸಿಡಿಲಿನ ಹೊಡೆತದಿಂದ ಸುಮಾರು 765 ಜನರು ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಾವು ನೋವಿನ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲೂ ಕಲಬುರ್ಗಿಯಲ್ಲಿ ಅತಿ ಹೆಚ್ಚು ಸಾವುಗಳು ಈ ಸಿಡಿಲಿನಿಂದ ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಯಾದಗಿರಿ, ವಿಜಯಪುರ, ಗದಗ ಮತ್ತು ಬೆಳಗಾವಿ ಎಂದು ಗುರುತಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

***

ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ‘ದಾಮಿನಿ’ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದೆ

-ಡಾ. ಅಮರೇಶ ವೈ.ಎಸ್, ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ, ಕವಡಿಮಟ್ಟಿ

***

ರೈತರು, ನಗರವಾಸಿಗಳು ಸಿಡಿಲು ಅಥವಾ ಮಿಂಚಿನ ಮುನ್ಸೂಚನೆ ತಿಳಿದುಕೊಂಡು ಅಪಾಯದಿಂದ ಪಾರಾಗಲು ಈ ಆ್ಯಪ್‌ ಅನುಕೂಲವಾಗಲಿದೆ

-ಡಾ.ಶಾಂತವೀರಯ್ಯ, ವಿಷಯ ತಜ್ಞ, ಕೃಷಿ ಹವಾಮಾನ ಶಾಸ್ತ್ರ, ಕವಡಿಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT