ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಸಂಘದಿಂದ 7000 ರೈತರಿಗೆ ಬೆಳೆ ಸಾಲ  

Last Updated 25 ಜೂನ್ 2021, 16:16 IST
ಅಕ್ಷರ ಗಾತ್ರ

ಕೊಡೇಕಲ್ಲ (ಹುಣಸಗಿ): ‘ಕಲಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಪ್ರಸಕ್ತ ಸಾಲಿನಲ್ಲಿ ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ 7 ಸಾವಿರ ರೈತರಿಗೆ ಕೃಷಿ, ವ್ಯವಹಾರ ಹಾಗೂ ಜೀವನೋಪಾಯಕ್ಕೆ ಸಾಲ ನೀಡುತ್ತಿದ್ದು ಬ್ಯಾಂಕಿನ ಷೇರುದಾರರು ಇದರ ಸದ್ಭಳಕೆ ಮಾಡಿಕೊಳ್ಳಬೇಕು‘ ಎಂದು ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಈ ಕುರಿತು ಸಹಕಾರಿ ಸಂಘಗಳ ಷೇರುದಾರರಿಂದ ಸಾಲಕ್ಕೆ ಅರ್ಜಿಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯ ರೈತರಿಗೂ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ನೀಡಲಾಗುವುದು‘ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರು ಅವರ ನೇತೃತ್ವದಲ್ಲಿ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದ್ದು, ಕಳೆದ ಐದು ವರ್ಷಗಳಿಂದಲೂ ವಿವಿಧ ಕಾರಣ ಮುಂದಿಟ್ಟುಕೊಂಡು ರೈತರಿಗೆ ಸಾಲ ನೀಡುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನಲ್ಲಿ ಸರ್ಕಾರವು 200 ಕೋಟಿ ಮಂಜೂರು ಮಾಡಿದ್ದು ಕಲಬುರ್ಗಿ-ಯಾದಗಿರಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಡಿಯಲ್ಲಿನ ಪಿಕೆಪಿಎಸ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್‌ಗಳ ಮೂಲಕ ಸಣ್ಣ ರೈತರಿಗೆ ತಲಾ ₹ 25 ಸಾವಿರ ಕೊಡಲಾಗುತ್ತಿದೆ ಎಂದರು.

‘ಸುರಪುರ ಶಾಸಕರಾದ ರಾಜೂಗೌಡ ಹಾಗೂ ವೆಂಕಟರೆಡ್ಡಿ ಮುದ್ನಾಳ ಮತ್ತಿತರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಕಾರಣ ಕಲಬುರ್ಗಿ-ಯಾದಗಿರಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಸೇರಿ ಹಲವು ಜಿಲ್ಲೆಗಳಲ್ಲಿನ ಸ್ವಂತ ಕಟ್ಟಡಕ್ಕಾಗಿ ₹ 10 ಕೋಟಿ ಮಂಜೂರು ಮಾಡಲು ಈಗಾಗಲೇ ಅಫೆಕ್ಸ್ ಮತ್ತು ನಬಾರ್ಡ್ ಬ್ಯಾಂಕಿಗೆ ಆದೇಶ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿಗಳಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಲಾಗುವುದು‘ ಎಂದರು.

‘ಡಿಸಿಸಿ ಬ್ಯಾಂಕ್ ವತಿಯಿಂದ ಸದ್ಯದಲ್ಲಿ ಅತೀ ಸಣ್ಣ, ಸಣ್ಣ ಹಾಗೂ ದೊಡ್ಡ ರೈತರ ಹಿತದೃಷ್ಟಿಯಿಂದ ಮೂರು ಕಂತುಗಳಲ್ಲಿ ಸಾಲ ನೀಡುತ್ತಿದ್ದು ಆರಂಭದಲ್ಲಿ ಕಲಬುರ್ಗಿ– ಯಾದಗಿರಿ ಜಿಲ್ಲೆಯ 7000 ರೈತರಿಗೆ ತಲಾ ₹ 25 ಸಾವಿರ ಸಾಲ ನೀಡುತ್ತಿದೆ. ಅಲ್ಲದೇ ದೊಡ್ಡ ರೈತರಿಗೆ ಬಡ್ಡಿ ರಹಿತ ₹ 3 ಲಕ್ಷ ಹಾಗೂ ₹ 10 ಲಕ್ಷದವರೆಗೂ ಶೇ 3ರ ಬಡ್ಡಿಯಂತೆ ಸಾಲ ನೀಡಲಾಗುತ್ತಿದೆ‘ ಎಂದರು.

ಕೋವಿಡ್‌ನಿಂದ ಮೃತ ಪಟ್ಟ ವ್ಯವಸಾಯ ಸೇವಾ ಸಂಘದ ಸದಸ್ಯರು ಹಾಗೂ ರೈತರಿಗೆ ಪರಿಹಾರ ನೀಡುವ ಕುರಿತು ಸಹ ಚರ್ಚೆ ನಡೆಸಲಾಗುತ್ತಿದೆ ಎಂದರು.

ವಿಜಯಕುಮಾರ ಬಂಡೊಳ್ಳಿ, ರವೀಂದ್ರ ಅಂಗಡಿ, ಜಗದೀಶ ಪಾಟೀಲ್, ಡಿ.ಸಿ.ಪಾಟೀಲ್ ಕೆಂಭಾವಿ, ಸುಗೂರೇಶ ವಾರದ, ನಂದಯ್ಯಸ್ವಾಮಿ, ಪ್ರಕಾಶ ಕುಂಬಾರ ಕಕ್ಕೇರಾ, ಮಲ್ಲಿಕಾರ್ಜುನ, ಮಂಜುನಾಥ ಗುಳಗಿ, ಶರಣು ಕಳ್ಳಿಮನಿ, ಬಸವರಾಜ, ಶಂಕರಗೌಡ ಬೂದಿಹಾಳ, ಶಿವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT