ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ’

Published 27 ಏಪ್ರಿಲ್ 2024, 15:33 IST
Last Updated 27 ಏಪ್ರಿಲ್ 2024, 15:33 IST
ಅಕ್ಷರ ಗಾತ್ರ

ಸುರಪುರ: ‘ಜನಪರವಾದ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಬಹುಸಂಖ್ಯಾತ ಭಾರತೀಯರಿಗೆ ಈಗ ಒಳ್ಳೆಯ ಅವಕಾಶವಿದೆ. ಮತದಾರರು ಇದನ್ನು ಸದುಪಯೋಗ ಪಡಿಸಿಕೊಂಡು ಸಂವಿಧಾನ ವಿರೋಧಿ ಮತ್ತು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಚಾಲಕ ಡಿ.ಜಿ. ಸಾಗರ ಕರೆ ನೀಡಿದರು.

ನಗರದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ದಸಂಸ ಸಮಿತಿ ಏರ್ಪಡಿಸಿದ್ದ ಮತದಾರರ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ಯಾವುದೇ ಒತ್ತು ನೀಡುತ್ತಿಲ್ಲ. ಕೇವಲ ಧರ್ಮದ ಆಧಾರಿತವಾಗಿ ಆಡಳಿತ ನಡೆಸುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸಿ ಮನುವಾದಿ ಸಂವಿಧಾನ ಜಾರಿಗೊಳಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

‘ಆರ್‌ಎಸ್‍ಎಸ್ ಮುಖವಾಣಿಯಂತೆ ಕೆಲಸ ಮಾಡುತ್ತಿರುವ ಬಿಜೆಪಿ ಕಳೆದ 10 ವರ್ಷಗಳಲ್ಲಿ ದಲಿತ ಪರ, ಶೋಷಿತ ವರ್ಗಗಳ ಪರವಾದ ಯಾವುದೇ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಗಳಲ್ಲಿ ಒಂದನ್ನು ಈಡೇರಿಸಲಿಲ್ಲ. ಕಪ್ಪು ಹಣ ಭಾರತಕ್ಕೆ ತರಲಿಲ್ಲ. ಯವಕರಿಗೆ ಉದ್ಯೋಗ ಕೊಡಲಿಲ್ಲ, ಭ್ರಷ್ಟಾಚಾರ ನಿಗ್ರಹಿಸಿಲ್ಲ, ದರೋಡೆ ಕೋರತನ ತಡೆಯಲಿಲ್ಲ’ ಎಂದು ಜರಿದರು.

‘ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸೇರಿದಂತೆ ದೇಶದ ಬಹುಸಂಖ್ಯಾತ ಭಾರತೀಯರು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಮಿತಿ ರಾಜ್ಯದಾದ್ಯಂತ ಮತದಾರರ ಅಭಿಯಾನ ನಡೆಸುತ್ತಿದೆ. ಮನುವಾದಿ ಪಕ್ಷವನ್ನು ಸೋಲಿಸಲು ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಸಮಿತಿ ಅಧ್ಯಕ್ಷ ರಾಜಾ ಕುಮಾರ ನಾಯಕ, ಸಮಿತಿಯ ರಾಜ್ಯ ಸಮಿತಿ ಖಜಾಂಚಿ ಬಿ.ಸಿ.ವಾಲಿ, ಜಿಲ್ಲಾ ಸಮಿತಿ ಸಂಚಾಲಕ ಶಿವುಪುತ್ರ ಜವಳಿ, ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ, ಶಿವಕುಮಾರ ತಳವಾರ, ಚಂದಪ್ಪ ಮುನೆಪ್ಪನೋರ್, ಎಸ್.ಪಿ.ಸುಳ್ಳದ್, ಎಚ್.ಶಂಕರ, ವಾಸು, ಎಂ.ಪಟೇಲ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT