ಸೋಮವಾರ, ಜುಲೈ 4, 2022
22 °C

ನವ ನಾಗರಿಕತೆಯಿಂದ ಜಾನಪದ ಕಲೆ ನಾಶ-ವಿನಂತಿ ಹರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಜಾನಪದ ಕಲೆ ಸವಾಲು ಎದುರಿಸುವಂತಾಗಿದೆ ಎಂದು ನೃತ್ಯ ಕಲಾವಿದೆ ವಿನಂತಿ ಹರೀಶ್ ವಿಷಾದಿಸಿದರು. 

ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಕಲಾ ಸಂಕುಲದಲ್ಲಿ ಜ್ಞಾನಜ್ಯೋತಿ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಈಚೆಗೆ ಅಯೋಜಿಸಿದ್ದ ಶಿಲ್ಪಕಲಾ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲಾವಣಿ, ಗೀಗಿಪದ, ಸೋಬಾನೆ ಪದ, ತತ್ವಪದ, ರಂಗಗೀತೆ, ಸಣ್ಣಾಟ, ದೊಡ್ಡಾಟ, ಜಾನಪದ ಕಲಾ ಪ್ರಕಾರಗಳಾದ ಡೊಳ್ಳುಕುಣಿತ, ವೀರಗಾಸೆ, ತಮಟೆ, ಕೋಲಾಟ ಇನ್ನೂ ಮುಂತಾದ ಕಲೆಗಳು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ಗ್ರಾಮೀಣ ಸೊಗಡಿನಲ್ಲಿ ಹಾಸುಹೊಕ್ಕಾಗಿರುವ ಕಲಾ ಪ್ರಕಾರಗಳು, ಆಚಾರಗಳು, ಉಡುಗೆ ತೊಡುಗೆ, ನಂಬಿಕೆಗಳು ಇಂದು ನಗರೀಕರಣದಿಂದಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಜಾನಪದ ಕಲೆಗಳಿಗೆ ಹೊಸ ಸ್ಪರ್ಶ ನೀಡುವ ಅವಶ್ಯಕತೆ ಇದೆ ಎಂದರು.

ಗಾಯಕ ಜಯಸಿಂಹ ಮಾತನಾಡಿ, ನವ ನಾಗರಿಕತೆ ಬೆಳೆದಂತೆ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ಕಲೆಗಳನ್ನು ಉತ್ಕೃಷ್ಟಗೊಳಿಸಲು ಸರ್ಕಾರ ಹಲವು ಹೊಸ ಯೋಜನೆಗಳನ್ನು ರೂಪಿಸಬೇಕು. ಜಾನಪದ ತರಬೇತಿ ಕೇಂದ್ರಗಳನ್ನು ಪ್ರಾದೇಶಿಕವಾರು ತೆರೆಯಬೇಕು. ಆಗ ಮಾತ್ರ ನೆಲಮೂಲ ಸಂಸ್ಕೃತಿ ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.

ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಚಕ್ಕಲೂರು ಚೌಡಯ್ಯ ಮಾತನಾಡಿ, ಮಕ್ಕಳಿಗೆ ವಾಸ್ತುಶಿಲ್ಪ ಕುರಿತ ವಿಷಯಗಳನ್ನು ತಿಳಿಸಿಕೊಡುವ ಮೂಲಕ ಬಾಲ್ಯದಿಂದಲೇ ಅವರಿಗೆ ಜಾನಪದದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಟ್ರಸ್ಟ್ ಕಾರ್ಯದರ್ಶಿ ಅಪ್ಪಗೆರೆ ಶ್ರೀನಿವಾಸಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಮುಖಂಡ ಅಪ್ಪಗೆರೆ ಪ್ರದೀಪ್ ಕುಮಾರ್, ಗಾಯಕರಾದ ರಾಂಪುರ ಸಿದ್ದರಾಜು, ಮಹೇಶ್ ಮೌರ್ಯ ಉಪಸ್ಥಿತರಿದ್ದರು.  ಬಲ್ಲಾಪಟ್ಟಣದ ರಾಮಕೃಷ್ಣ ಮತ್ತು ತಂಡ ತಮಟೆ ಪ್ರದರ್ಶನ ನೀಡಿತು. ಹೊಂಗನೂರು ಸಣ್ಣಮ್ಮ ಮತ್ತು ತಂಡ, ಸಂತೆಮೊಗೇನಹಳ್ಳಿ ಗೌರಮ್ಮ ಮತ್ತು ತಂಡ, ಸುಣ್ಣಘಟ್ಟದ ಕೆಂಚಮ್ಮ ಮತ್ತು ತಂಡ ಸೋಬಾನೆ ಪದಗಳನ್ನು ಹಾಡಿದರು. ಗಾಯಕರಾದ ಹೊನ್ನಿಗನಹಳ್ಳಿ ಸಿದ್ದರಾಜಯ್ಯ, ನಮನ ಶಿವಕುಮಾರ್, ಸುಣ್ಣಘಟ್ಟ ಗಂಗಾಧರ್, ಚಕ್ಕರೆ ಸಿದ್ದರಾಜು ಗಾಯನ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು