ಬುಧವಾರ, ಫೆಬ್ರವರಿ 1, 2023
16 °C
ಗುರುಮಠಕಲ್‌ ತಹಶೀಲ್ದಾರ್‌ ಕಚೇರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಭೇಟಿ

ಕಚೇರಿಗಳಲ್ಲಿ ಜನರ ಕೆಲಸಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ವಿನಾಕಾರಣ ಜನರನ್ನು ಅಲೆದಾಡಿಸದೆ ಅವರ ಕೆಲಸ, ನಿಗದಿತ ಸೇವೆಗಳನ್ನು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಸೂಚನೆ ನೀಡಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಯಲ್ಲಿ ಬುಧವಾರ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕರಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸಿದ ಕುರಿತು ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈವರೆಗೂ ಕ್ರಮವಾಗಿಲ್ಲ. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಕ್ರಮವಹಿಸಿ’ ಎಂದು ಕರ್ನಾಟಕ ಗರುಡ ಸಂಸ್ಥೆ ಸಂಜು ಅಳೆಗಾರ ಆಗ್ರಹಿಸಿದರು.

‘ಅರಕೇರಾ ಕೆ. ಗ್ರಾಮದಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಕಾರ್ಯನಿರ್ವಹಿಸುತ್ತಿದೆ. ಪಟ್ಟಣ ವಾಣಿಜ್ಯ ಮಳಿಗೆಗಳು ಅವಧಿ ಮುಗಿದರೂ ಟೆಂಡರ್ ನಡೆಸುತ್ತಿಲ್ಲ ಕೂಡಲೆ ಕ್ರಮ ವಹಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ನಾಗೇಶ ಗದ್ದಿಗೆ ಒತ್ತಾಯಿಸಿದರು.

ಡಿ.ಎಸ್.ಎಸ್.ಲಾಲಪ್ಪ ತಲಾರಿ ಮಾತನಾಡಿ, ತಾಲ್ಲೂಕಿನ ಹಲವು ಸಮಸ್ಯೆಗಳನ್ನು ಬಗೆಹರಿಸಲು ಈವರೆಗೆ ಹಲವು ಬಾರಿ ಮನವಿ ನೀಡಿದ್ದೇವೆ. ಆದರೆ, ಈವರೆಗೆ ಒಂದೂ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು.

ಆಸ್ಪತ್ರೆ ಮೇಲ್ದರ್ಜೆಗೇರಿಸಿ, ಈಗಿರುವ ಹಳೇ ಸಿಬ್ಬಂದಿಯನ್ನು ವರ್ಗಾಯಿಸಿ ಹೊಸ ಸಿಬ್ಬಂದಿ ನಿಯೋಜಿಸಿ ಮತ್ತು ಅಗತ್ಯ ವೈದ್ಯರ ನೇಮಕ್ಕೆ ಕ್ರಮ ವಹಿಸಲು ಸಾರ್ವಜನಿಕರು ಕೋರಿದರು.

ನಿಮ್ಮ ದೂರುಗಳು ಹಾಗೂ ಸಮಸ್ಯೆಗಳ ಕುರಿತು ಪರಿಶೀಲಿಸಿ ಶೀಘ್ರವೇ ಸೂಕ್ತ ಕ್ರಮ ವಹಿಸಲು ಸಂಬಂಧಿತರಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ನಂತರ ಪಟ್ಟಣದ ಇಂದ್ರಾನಗರ ಬಡಾವಣೆಯ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಶಾಲೆಗೆ ಶಿಕ್ಷಕರು ಸಕಾಲಕ್ಕೆ ಬರುತ್ತಿಲ್ಲ ಎನ್ನುವ ದೂರುಗಳಿದ್ದು, ಸರಿಯಾದ ಸಮಯಕ್ಕೆ ಹಾಜರಾಗಬೇಕು. ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳೂ ಶಾಲೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು. ಶಾಲೆ, ಅಂಗನವಾಡಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶಾ ಆಲಂ ಹುಸೇನೆ, ತಹಶೀಲ್ದಾರ್ ಶರಣಬಸವ ರಾಣಪ್ಪ, ಗ್ರೇಡ್‌–2 ತಹಶೀಲ್ದಾರ್ ನರಸಿಂಹಸ್ವಾಮಿ, ಪುರಸಭೆ ಮುಖ್ಯಾಧಿ ಕಾರಿ ಭಾರತಿ ಸಿ.ದಂಡೋತಿ, ಅಧ್ಯಕ್ಷ ಪಾಪಣ್ಣ ಮನ್ನೆ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು