ಭಾನುವಾರ, ಮೇ 22, 2022
28 °C
ಫೆ.20 ರಂದು ಗ್ರಾಮದಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ; ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿ

ಡಿ.ಸಿ ನಡೆ ಖಾನಾಪುರ ಎಸ್.ಎಚ್ ಕಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲಾಧಿಕಾರಿ ನಡೆ, ಹಳ್ಳಿಕಡೆ’ ಎಂಬ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲೆಯಲ್ಲಿ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವಂತೆ ಸರ್ಕಾರ ಸೂಚಿಸಿದ್ದು, ಫೆಬ್ರುವರಿ 20 ರಂದು ಸುರಪುರ ತಾಲ್ಲೂಕಿನ ಖಾನಾಪುರ ಎಸ್.ಎಚ್.ನಲ್ಲಿ ಗ್ರಾಮ ವಾಸ್ತವ್ಯ ಮಾಡುವುದಾಗಿ' ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ತಿಳಿಸಿದರು.

‘ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಗ್ರಾಮ ವಾಸ್ತವ್ಯ ನಡೆಸಲಿದ್ದು, ಪ್ರಮುಖವಾಗಿ ಕಂದಾಯ ಇಲಾಖೆಯ ಸಮಸ್ಯೆ ಪರಿಹರಿಸಲಾಗುವುದು’ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಖಾನಾಪುರ ಎಸ್. ಎಚ್. ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು, ಅದೇ ದಿನ ಇನ್ನುಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದರು.

ಎಲ್ಲೆಲ್ಲಿ ಗ್ರಾಮ ವಾಸ್ತವ್ಯ?: ಹುಣಸಗಿ ತಾಲ್ಲೂಕಿನ ಹಗರಟಗಿ, ಯಾದಗಿರಿ ತಾಲ್ಲೂಕಿನ ಲಿಂಗೇರಿ, ಗುರುಮಠಕಲ್ ತಾಲ್ಲೂಕಿನ ಮಿನಾಸಪುರ, ಶಹಾಪುರ ತಾಲ್ಲೂಕಿನ ಶಿರವಾಳ ಹಾಗೂ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ಮಾಹಿತಿ’ ನೀಡಿದರು.

ಅರ್ಜಿ ಸ್ವೀಕಾರ: ‘ಸ್ಥಳದಲ್ಲಿಯೇ ಕೌಂಟರ್ ತೆರೆದು ಆನ್‍ಲೈನ್ ತಂತ್ರಾಂಶದ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಕಂದಾಯ ಇಲಾಖೆಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಯತ್ನಿಸಲಾಗುವುದು. ಇತರೆ ಇಲಾಖೆಗಳ ಅರ್ಜಿಗಳನ್ನು ಆಯಾ ಇಲಾಖೆಗೆ ರವಾನಿಸಲಾಗುವುದು’ ಎಂದು ತಿಳಿಸಿದರು.

‘ಕಂದಾಯ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪಂಚಾಯತ್ ಇಲಾಖೆ, ಪಶು ಸಂಗೋಪನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳಿಂದ ಗ್ರಾಮ ವಾಸ್ತವ್ಯ ದಿನದಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಮಳಿಗೆ (ಸ್ಟಾಲ್)ಗಳನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ರೈತರ ಗುರುತಿನ ಸಂಖ್ಯೆ: ‘ರೈತರು ಕೃಷಿ ಮತ್ತು ಸಂಬಂಧಿಸಿದ ಇತರೆ ಇಲಾಖೆಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ ಪತ್ರಿಕೆ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಒಂದು ಫೋಟೋ ಹಾಗೂ ಬ್ಯಾಂಕ್ ಪಾಸ್ ಬುಕ್ ಈ ಎಲ್ಲಾ ದಾಖಲೆಗಳನ್ನು ಪದೇ ಪದೆ ನೀಡುವುದನ್ನು ತಪ್ಪಿಸಲು ಕೇಂದ್ರೀಕೃತ FRUITS ತಂತ್ರಾಂಶದಲ್ಲಿ ದಾಖಲಿಸಿ, ರೈತರ ಗುರುತಿನ ಸಂಖ್ಯೆಯನ್ನು ನೀಡಲು ಇ- ಆಡಳಿತ ವತಿಯಿಂದ ರೈತರ ಗುರುತಿನ ಸಂಖ್ಯೆ (FRUITS ID) ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕೆಂದು' ಕೋರಿದರು.

‘ಗ್ರಾಮ ವಾಸ್ತವ್ಯ ನಡೆಯುವ ಗ್ರಾಮಗಳ ಜೊತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 2-3 ಹಳ್ಳಿಗಳ ಸಮಸ್ಯೆ ಪರಿಹರಿಸಲು ಶ್ರಮಿಸಲಾ ಗುವುದು ಎಂದ ಅವರು, ಅಂದು ಸಂಬಂಧಪಟ್ಟ ಹಳ್ಳಿಗಳ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಅವರು ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ ಇದ್ದರು.

***

ಗ್ರಾಮ ವಾಸ್ತವ್ಯದಲ್ಲಿನ ಸೇವೆಗಳು

‘ಪಹಣಿಯಲ್ಲಿನ ಲೋಪದೋಷಗಳ ಸರಿಪಡಿಸುವಿಕೆ, ಆಕಾರ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಪೌತಿ ಖಾತೆಯಲ್ಲಿ ನೈಜ ವಾರಸುದಾರರ ಹೆಸರು ಸೇರ್ಪಡೆ, ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ, ಸ್ಮಶಾನ ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುವುದು. ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನಿನ ಕಾಯ್ದಿರಿಸಲು ಕ್ರಮವಹಿಸುವುದು. ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವುಗೊಳಿಸುವುದು, ಆಧಾರ್‌ ಕಾರ್ಡ್‌ನ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಅರ್ಹ ಅಂಗವಿಕಲ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ತಿಳಿಸಿದರು.

‘ಹದ್ದುಬಸ್ತು, ಪೋಡಿ, ಪೋಡಿಮುಕ್ತ ಗ್ರಾಮ, ದರಕಾಸ್ತು ಪೋಡಿ ಕಂದಾಯ ಗ್ರಾಮಗಳ ರಚನೆ ಮುಂತಾದ ಕಂದಾಯ ಇಲಾಖೆಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಲಾಗುವುದು’ ಎಂದರು.

***

ಗ್ರಾಮ ವಾಸ್ತವ್ಯದ ವೇಳೆ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಶಿಬಿರ ಏರ್ಪಡಿಸಿ, ಗ್ರಾಮದ ಜನರ ಆರೋಗ್ಯ ತಪಾಸಣೆ ನಡೆಸಲಾಗುವುದು

ಡಾ.ರಾಗಪ್ರಿಯಾ ಆರ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು