ಮಂಗಳವಾರ, ಜೂನ್ 15, 2021
25 °C
ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಟೀಕೆ

‘ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಕಿಡಿ ಕಾರಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಆದರೆ, ಜಿಲ್ಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂಬುದಕ್ಕೆ ಮುದ್ನಾಳ ಬಳಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ಆಕ್ಸಿಜನ್ ಕೊರತೆಯಿಂದ ವ್ಯಕ್ತಿ ಮೃತಪಟ್ಟಿರುವುದು ತಾಜಾ ಉದಾಹರಣೆಯಾಗಿದೆ. ಸತತ ಮೂರು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವಿದ್ಯುತ್ ಸ್ಥಗಿತಗೊಂಡರೆ ಎಷ್ಟು ಜನರ ಪ್ರಾಣ ಹೋಗಿರಬಹುದು ಎಂಬ ಅನುಮಾನ ಕಾಡದೆ ಇರದು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ಸೋಂಕಿತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ಪದೇಪದೇ ಹೇಳಿಕೆ ನೀಡುತ್ತಿದೆ. ಆದರೆ, ನಿತ್ಯ ಇಂಥ ಘಟನೆಗಳು ನಡೆಯುತ್ತಿದ್ದು, ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದ್ದಾರೆ.

ಜಿಲ್ಲಾ ಮಟ್ಟದಲ್ಲಿನ ಆಸ್ಪತ್ರೆಗಳು, ಮಿನಿವಿಧಾನಸೌಧ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಂಸ್ಥೆಗಳಲ್ಲಿ ವಿದ್ಯುತ್ ಎಕ್ಸ್‌ಪ್ರೆಸ್ ವೇ ವ್ಯವಸ್ಥೆ ಇರುತ್ತದೆ. ಆದರೆ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲ. ಅಲ್ಲದೆ ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ 15 ಕೆಜಿ ಆಕ್ಸಿಜನ್ ಸಿಲಿಂಡರ್‌ಗಳಿದ್ದು, ಕೊರೊನಾ ಸೋಂಕಿತರಿಗೆ ಬೇಕಾಗುವ 60 ಕೆಜಿ ಸಿಲಿಂಡರ್ ಕೇವಲ 19 ಇವೆ. ಇದರಲ್ಲಿ 5 ಕೆಟ್ಟು ನಿಂತಿವೆ. ಈ ಪರಿಸ್ಥಿತಿಯಲ್ಲಿ ನಾವು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಸರ್ಕಾರ ಜಿಲ್ಲೆಗೆ ಕಳಿಸಿದ ವೈದ್ಯಕೀಯ ಉಪಕರಣಗಳು ಬಿಟ್ಟರೆ, ಈ ವರ್ಷ ಹೊಸ ಉಪಕರಣಗಳನ್ನು ಕಳಿಸಿಲ್ಲ. ಅಲ್ಲದೆ ಆರ್‌ಟಿಪಿಸಿಆರ್ ಟೆಸ್ಟ್‌ನ ವರದಿಗಳು 5 ದಿನದ ನಂತರ ನೀಡಲಾಗುತ್ತಿದೆ. ಅಷ್ಟರೊಳಗೆ ಪಾಸಿಟಿವ್ ಆದ ವ್ಯಕ್ತಿ ಎಷ್ಟು ಜನರ ಸಂಪರ್ಕಕ್ಕೆ ಬಂದಿರುತ್ತಾನೆ. ಇನ್ನೂ ಪರೀಕ್ಷೆಗಳ ಸಂಖ್ಯೆಯೂ ಜಿಲ್ಲೆಯಲ್ಲಿ ಕುಸಿಯುತ್ತಿದ್ದು, ಜನತೆ ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಅಂಕಿ-ಸಂಖ್ಯೆಯನ್ನು ಜಿಲ್ಲಾಡಳಿತ ಮುಚ್ಚಿಡುತ್ತಿರುವುದು ಬಹಿರಂಗ ಸತ್ಯ ಎಂದು ಆರೋಪಿಸಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಜಿಲ್ಲಾ ಉಸ್ತುವಾರಿ ಸಚುವ ಪ್ರಭು ಚವಾಣ್‌ ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಅವರು ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾದರೆ ಜನರ ಶಾಪ ಹಾಗೂ ಸೋಂಕಿನಿಂತ ಮೃತಪಟ್ಟವರ ಕುಟುಂಬದವರ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು