ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹೆಸರಿಗೆ ಮಾತ್ರ ‘ಅಂಚೆ ವಿಭಾಗೀಯ ಕಚೇರಿ’

ಅರ್ಧಕ್ಕದ ಸಿಬ್ಬಂದಿ ಕೊರತೆ; ಸೂಕ್ತ ಕಟ್ಟಡವೂ ಇಲ್ಲ
Published 19 ಜುಲೈ 2023, 6:22 IST
Last Updated 19 ಜುಲೈ 2023, 6:22 IST
ಅಕ್ಷರ ಗಾತ್ರ

ಯಾದಗಿರಿ: 2022 ಫೆ.21ರಂದು ಜಿಲ್ಲೆಗೆ ಪ್ರತ್ಯೇಕ ಅಂಚೆ ವಿಭಾಗೀಯ ಕಚೇರಿ ಮಂಜೂರಾಗಿದ್ದು, ಅರ್ಧಕ್ಕರ್ಧ ಸಿಬ್ಬಂದಿ ಕೊರತೆ ಇದೆ. ವಿಭಾಗೀಯ ಅಂಚೆ ಕಚೇರಿಗೆ ಸಂಬಂಧಿಸಿದಂತೆ ಸೂಕ್ತ ಕಟ್ಟಡವೂ ಇಲ್ಲ. ಪ್ರಧಾನ ಅಂಚೆ ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಹಲವು ಕೆಲಸಗಳು ತಡವಾಗುತ್ತಿವೆ.

ಜಿಲ್ಲೆಯಾಗಿ 11 ವರ್ಷಗಳೂ ಕಳೆದರೂ ಅಂಚೆ ವಿಭಾಗ ಕಲಬುರಗಿಯಿಂದಲೇ ಕಾರ್ಯ ನಿರ್ವಹಣೆ ಮಾಡಲಾಗುತ್ತಿತ್ತು. ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಅವರ ಕಾಳಜಿಯಿಂದ ಕಳೆದ ವರ್ಷ ಜಿಲ್ಲೆಗೆ ಪ್ರತ್ಯೇಕ ಅಂಚೆ ಕಚೇರಿ ಆರಂಭವಾಗಿದ್ದರೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಕೆಲಸಗಳಿಗಾಗಿ ಪರದಾಡುವಂತಾಗಿದೆ.

ಅಂಚೆ ವಿಭಾಗ ಇಲ್ಲದಿದ್ದಾಗ ಜಿಲ್ಲೆಗೆ ಸಂಬಂಧಪಟ್ಟ ಅಂಚೆ ಇಲಾಖೆಯ ಎಲ್ಲಾ ಕೆಲಸಗಳು ಕಲಬುರಗಿ ವಿಭಾಗದ ಅಂಚೆ ವರಿಷ್ಠಾಧಿಕಾರಿಯವರಿಂದಲೇ ಸಹಿ, ಮಂಜೂರಾತಿ ಸಿಕ್ಕ ಬಳಿಕವೇ ಬರಬೇಕಾಗಿತ್ತು. ಇದರಿಂದ ಸಾಕಷ್ಟು ವಿಳಂಬವಾಗುತ್ತದೆ. ಅಂಚೆ ಕಚೇರಿಯ ಗ್ರಾಹಕರ ಸಮಯವೂ ಇದರಿಂದ ವ್ಯರ್ಥವಾಗುತ್ತಿತ್ತು. ಈಗ ಕಚೇರಿ ಮಂಜೂರಾದರೂ ಮತ್ತೊಂದು ಗೋಳು ತಪ್ಪುತ್ತಿಲ್ಲ.

ವಿಭಾಗೀಯ ಕಚೇರಿಗೆ ಬೇಕು 90 ಸಿಬ್ಬಂದಿ: ಯಾದಗಿರಿ ಅಂಚೆ ವಿಭಾಗೀಯ ಕಚೇರಿಗೆ ಬರೋಬ್ಬರಿ 90 ಸಿಬ್ಬಂದಿ ಬೇಕು. ಆದರೆ, ಅರ್ಧ ಮಾತ್ರ ಭರ್ತಿಯಾಗಿದ್ದು, ಇನ್ನುಳಿದ ಸಿಬ್ಬಂದಿ ಖಾಲಿ ಇದೆ. ಆಯಾ ಪೋಸ್ಟ್‌ ಆಫೀಸ್‌ಗಳಲ್ಲಿ ಪೋಸ್ಟ್‌ ಮಾಸ್ಟರ್‌ಗಳಿದ್ದು, ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಇದರಿಂದ ಕೆಲಸಗಳು ವಿಭಾಗದಂತೆ ಕಾರ್ಯನಿರ್ವಹಣೆ ಆಗುತ್ತಿಲ್ಲ.

‘ಸಿಬ್ಬಂದಿ ಭರ್ತಿಗಾಗಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕಚೇರಿ ತರಬೇತಿ ಮುಗಿದ ನಂತರ ನೇಮಕ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಯಾದಗಿರಿ ಅಂಚೆ ವಿಭಾಗವೂ 33 ಉಪ ಅಂಚೆ ಕಚೇರಿ ಸೇರಿ 263 ಕಚೇರಿಗಳನ್ನು ಹೊಂದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ ವ್ಯಾಪ್ತಿಯನ್ನು ಹೊಂದಿದೆ. ನಗರದ ಅಂಚೆ ಕಚೇರಿಯಲ್ಲಿ ಅಂದಾಜು 35 ಸಾವಿರ ಉಳಿತಾಯ ಖಾತೆಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಗ್ರಾಹಕರ ಖಾತೆಗಳಿವೆ. ಕಚೇರಿ ಸಿಬ್ಬಂದಿ, ರಜೆ, ಟಿಎ, ಡಿಎ, ಆರ್ಥಿಕ ಚಟುವಟಿಕೆಗಳೆಲ್ಲವೂ ಕಲಬುರಗಿಯಿಂದಲೇ ಮೊದಲು ಅನುಮೋದನೆಗೊಂಡು ಬರಬೇಕಿತ್ತು. ವಿಭಾಗೀಯ ಅಂಚೆ ಕಚೇರಿಯಾಗಿದ್ದರಿಂದ ಇದಕ್ಕೆಲ್ಲ ತೆರಬಿದ್ದಿದೆ. ಪ್ರಧಾನ ಅಂಚೆ ಕಚೇರಿಯಲ್ಲೂ ಮಂಜೂರು ಹುದ್ದೆಗಳಲ್ಲಿ ಕೆಲವು ಖಾಲಿ ಬಿದ್ದಿವೆ.

'ಈ ಹಿಂದೆ ನಮ್ಮ ಎಐಪಿಇಯು ಅಂಚೆ ನೌಕರರ ಸಂಘವು ಯಾದಗಿರಿ ವಿಭಾಗೀಯ ಕಚೇರಿ ಆಗಬೇಕು ಎಂದು ಪ್ರಯತ್ನ ಮಾಡಿತ್ತು. ವರ್ಗಾವಣೆ ಸರಳೀಕರಣದಿಂದ ಸಿಬ್ಬಂದಿಯ ಕೊರತೆ ಎದುರಾಗಿ ಸಾಕಷ್ಟು ಸಮಸ್ಯೆಗಳು ತಲೆದೋರುತ್ತಿವೆ. ಸರಿಯಾಗಿ ಕೆಲಸಗಳು ಆಗುತ್ತಿಲ್ಲ‘ ಎನ್ನುತ್ತಾರೆ ಎಐಪಿಇಯು ಪಿ-3 ಸಂಘ ಯಾದಗಿರಿ ಅಂಚೆ ವಿಭಾಗ ಅಧ್ಯಕ್ಷ ಕುಪೇಂದ್ರ ವಠಾರ್.

ಸಚಿವರು, ಶಾಸಕರು ಗಮನ ಹರಿಸಲಿ: ಜಿಲ್ಲೆಯವರಾದ ಶರಣಬಸಪ್ಪ ದರ್ಶನಾಪುರ ಅವರು ಉಸ್ತುವಾರಿ ಸಚಿವರಾಗಿದ್ದರಿಂದ ಸಂಸದ, ಜಿಲ್ಲೆಯ ಶಾಸಕರ ಜೊತೆಗೂಡಿ ಕೇಂದ್ರ ಸರ್ಕಾರದ ಜೊತೆ ಮಾತನಾಡಿ, ಸರ್ಕಾರದ ಮೇಲೆ ಒತ್ತಡ ಹಾಕಿ ವಿಭಾಗೀಯ ಅಂಚೆ ಕಚೇರಿಗೆ ಸೂಕ್ತ ಕಟ್ಟಡ, ಸಿಬ್ಬಂದಿ ಭರ್ತಿ ಮಾಡುವ ಮೂಲಕ ಮತ್ತಷ್ಟು ಅಂಚೆ ಕಚೇರಿ ಜನರಿಗೆ ತಲುಪವುವಂತೆ ಮಾಡಬೇಕಿದೆ ಎನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ. 

ರಾಜಾ ಅಮರೇಶ್ವರ ನಾಯಕ
ರಾಜಾ ಅಮರೇಶ್ವರ ನಾಯಕ
ಕುಪೇಂದ್ರ ವಠಾರ್
ಕುಪೇಂದ್ರ ವಠಾರ್

ಅಂಚೆ ವಿಭಾಗೀಯ ಕಾರ್ಯಾಲಯದಲ್ಲಿ ಹಂತಹಂತವಾಗಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಬೇರೆ ಜಿಲ್ಲೆಗೆ ಇರಲಾದ ವಿಭಾಗವನ್ನು ಜಿಲ್ಲೆಗೆ ಮಂಜೂರು ಮಾಡಿಸಿಕೊಂಡು ಬರಲಾಗಿದೆ. ಆದರೆ ಅಲ್ಲಿನ ಸಿಬ್ಬಂದಿ ವಿಭಾಗೀಯ ಕಚೇರಿ ಬಂದಾಗ ಸರಿಯಾದ ಕಾರ್ಯಕ್ರಮವನ್ನು ಮಾಡಿಲ್ಲ. ಅಲ್ಲದೇ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಈ ಬಗ್ಗೆ ಆಸಕ್ತಿ ವಹಿಸಬೇಕು

-ರಾಜಾ ಅಮರೇಶ್ವರ ನಾಯಕ  ರಾಯಚೂರು ಸಂಸದ

ಜಿಲ್ಲೆಗೆ ಅಂಚೆ ವಿಭಾಗೀಯ ಕಚೇರಿ ಆಗಿದೆ. ಆದರೆ ಸಿಬ್ಬಂದಿ ಇಲ್ಲ. ರೂಲ್-38 ವರ್ಗಾವಣೆ ಮೇಲೆ ಯಾದಗಿರಿ ಡಿವಿಷನ್ ಬಿಟ್ಟು ಬೇರೆ ಡಿವಿಷನ್‌ಗೆ ತೆರಳುವವರ ಸಂಖ್ಯೆಯೇ ಹೆಚ್ಚಿದೆ. ಇಲ್ಲಿಗೆ ಬರುವವರು ಯಾರೂ ಇಲ್ಲ. ಆದ್ದರಿಂದ ಯಾದಗಿರಿ ಡಿವಿಷನ್‌ಗೆ ಅವಶ್ಯಕ ಸಿಬ್ಬಂದಿ ವ್ಯವಸ್ಥೆ ಮಾಡಿ. ಇಲ್ಲವೇ ಈ ಡಿವಿಷನ್ ಮುಚ್ಚಿ ಬಿಡಿ. ಸಿಬ್ಬಂದಿ ಕೊರತೆಯಿಂದ ಸಹೋದ್ಯೋಗಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ

- ಕುಪೇಂದ್ರ ವಠಾರ್ ಅಧ್ಯಕ್ಷ ಎಐಪಿಇಯು ಪಿ-3 ಸಂಘ ಯಾದಗಿರಿ ಅಂಚೆ ವಿಭಾಗ

ಎಲ್ಲೆಲ್ಲಿ ಉಪ ಅಂಚೆ ಕಚೇರಿಗಳಿವೆ?

ಯಾದಗಿರಿ ಅಂಚೆ ವಿಭಾಗವು ಭೀಮರಾಯನಗುಡಿ ಬಿಜಾಸಪುರ ಸಿ.ಎಫ್‌.ಕುರಕುಂಟಾ ಚಿತ್ತಾಪುರ ಗೋಗಿ ಗುರುಮಠಕಲ್‌ ಹುಣಸಗಿ ಕೆಂಭಾವಿ ಕೋಡೆಕಲ್‌ ಕುಂಬಾರಪೇಟ ಮಾಧ್ವಾರ ಮಳಖೇಡ ಮಳಖೇಡ ರಸ್ತೆ ಮೂಧೋಳ ನಾಯ್ಕಲ್‌ ನಾಲವಾರ ನಾರಾಯಣಪುರ ನಿಡಗುಂದ ರಾಜನಕೊಳೂರ ರಾಮಸಮುದ್ರ ರಂಗಂಪೇಟ ಸಗರ ಸೈದಾಪುರ ಸೇಡಂ ಶಹಾಪುರ ಶಹಾಪುರ ನಗರ ಸುರಪುರ ಸುರಪುರ ನಗರ ವಡಗೇರಾ ವಾಡಿ ಯಾದಗಿರಿ ಸ್ಟೇಷನ್‌ ಯಾದಗಿರಿ ನಗರ ಯಾದಗಿರಿ ಉಪ ಅಂಚೆ ಕಚೇರಿಗಳ ವ್ಯಾಪ್ತಿ ಹೊಂದಿದೆ. ‘ಪ್ರಜಾವಾಣಿ’ ವರದಿ ಮಾಡಿತ್ತು: 2021ರ ಜುಲೈ 8ರಂದು ‘ಅಂಚೆ ವಿಭಾಗ’ ವಂಚಿತ ಜಿಲ್ಲೆ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಪ್ರತ್ಯೇಕ ಅಂಚೆ ವಿಭಾಗದ ಇಲ್ಲದ ಕಾರಣ ಸಿಬ್ಬಂದಿ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. 2022 ಫೆ.21ರಂದು ಅಂಚೆ ವಿಭಾಗೀಯ ಕಚೇರಿ ಮಂಜೂರಾಗಿತ್ತು.  ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ ಪೋಸ್ಟಲ್ ಇಲಾಖೆ ನವದೆಹಲಿಯ ಪೋಸ್ಟಲ್ ವಿಭಾಗದ ಸಹಾಯಕ ಮಹಾನಿರ್ದೇಶಕ ಅವರು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ ಬೆಂಗಳೂರಿಗೆ ಪತ್ರ ಬರೆದು ಸಮಗ್ರ ಹಣಕಾಸು ವಿಭಾಗದ ಒಪ್ಪಿಗೆಯೊಂದಿಗೆ ಯಾದಗಿರಿ ಪೋಸ್ಟಲ್ ಡಿವಿಷನ್‌ಗೆ ಹೊಸ ವಿಭಾಗೀಯ ಮುಖ್ಯಸ್ಥರನ್ನು ನಿಯೋಜನೆ ಮಾಡಿ ಆದೇಶ ಮಾಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT