ಮಂಗಳವಾರ, ಮೇ 11, 2021
26 °C
ಹುಣಸಗಿ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಮೂಲಸೌಲಭ್ಯ ಕೊರತೆ

ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಬೇಡಿಕೆ

ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೇಸಿಗೆ ಬಿರು ಬಿಸಿಲು ಏರತೊಡಗಿದೆ. ಆದರೆ ಪಟ್ಟಣದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆಗಳಿವೆ.

2020ರ ಫೆಬ್ರುವರಿ ತಿಂಗಳಲ್ಲಿ ಹುಣಸಗಿ ಪಟ್ಟಣವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಪಟ್ಟಣ ಪಂಚಾಯಿತಿಯಾದ ಬಳಿಕವೂ ಇಲ್ಲಿಯವರೆಗೂ ಯಾವುದೇ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಿಲ್ಲ. ಇದರಿಂದಾಗಿ ಲಭ್ಯವಿರುವ ಜಲ ಮೂಲಗಳಿಂದಲೇ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.

2011 ರ ಜನಗಣತಿಯಂತೆ ಹುಣಸಗಿಯಲ್ಲಿ 15,243 ಜನಸಂಖ್ಯೆ ಇತ್ತು. ಆದರೆ ಒಂದು ದಶಕದಲ್ಲಿ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಅಂದಾಜು 6 ಸಾವಿರ ಮನೆಗಳಿದ್ದು, 2 ಸಾವಿರ ನಲ್ಲಿಗಳ ಮೂಲಕ ಪಟ್ಟಣದಲ್ಲಿ ದಿನ ಬಿಟ್ಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಆರಂಭವಾಗಿದ್ದು ಹೆಚ್ಚಿನ ಪ್ರಮಾಣದ ನೀರಿನ ಬೇಡಿಕೆ ಇದ್ದು, ನಲ್ಲಿಗಳಿಗಾಗಿ ಅರ್ಜಿ ಬರುತ್ತಿವೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅರುಣಕುಮಾರ ಚವ್ವಾಣ ಹೇಳುತ್ತಾರೆ.

ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿನ ಹಾಗೂ ಎಪಿಎಂಸಿ ಬಳಿಯ ಶೆಡ್‌ಗಳಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಇವರಿಗೆ ಇದುವರೆಗೂ ಕುಡಿಯುವ ನೀರನ್ನು ಒದಗಿಸಿರುವದಿಲ್ಲ. ಇದರಿಂದಾಗಿ ನಿತ್ಯವೂ ಹಣಕೊಟ್ಟು ಟ್ಯಾಂಕರ್ ನೀರು ಪಡೆದುಕೊಳ್ಳುತ್ತೇವೆ ಎಂದು ಅಲ್ಲಿನ ನಿವಾಸಿ ರಸೂಲಸಾಬ ಹೇಳಿದರು.

ದೇವಪುರ ( ಜೆ) ಬುಗ್ಗೆ ಆಸರೆ: ಕಳೆದ ಒಂದು ದಶಕದ ಹಿಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಪುರ (ಜೆ) ಗ್ರಾಮದಲ್ಲಿನ ಜಲ ಬುಗ್ಗೆಯಿಂದ ಜಲ ನಿರ್ಮಲ ಯೋಜನೆ ಅಡಿಯಲ್ಲಿ ನೀರು ಸರಬರಾಜಿಗೆ ಆದ್ಯತೆ ನೀಡಲಾಗಿದೆ. ಆದರೆ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಿದ ಬಳಿಕ ಇಲ್ಲಿನ ಜಲಮೂಲದ ಬುಗ್ಗೆಗಳು ಬತ್ತುತ್ತಿವೆ. ದಶಕದ ಹಿಂದೆ ಈ ನೀರು ಪಟ್ಟಣಕ್ಕೆ ಸಾಕಾಗುತ್ತಿತ್ತು. ಆದರೆ ಜನಸಂಖ್ಯೆ ಹಾಗೂ ಮನೆಗಳು ಏರುಗತಿಯಲ್ಲಿ ಇದ್ದುದರಿಂದಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಪಟ್ಟಣದ ಬಸವರಾಜ ಮೇಲಿನಮನಿ ಹಾಗೂ ಆನಂದ ಬಾರಿಗಿಡದ.

ಪಟ್ಟಣದ 16 ವಾರ್ಡಗಳಲ್ಲಿ ಎಸ್.ಟಿ ವಾರ್ಡನಲ್ಲಿ 2 ವಿದ್ಯಾ ನಗರದಲ್ಲಿ ಒಂದು ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ 1 ಒಟ್ಟು 4 ನೀರಿನ ಟ್ಯಾಂಕ್ ಗಳಿದ್ದು, ಇಲ್ಲಿನ ರಾಘಪ್ಪ ಬಾವಿ, ಕಣಗಲಬಾವಿ, ಊರ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಕುಡಿಯಲು ಯೋಗ್ಯವಿಲ್ಲ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿಯೇ ಹುಣಸಗಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ನಿತ್ಯ ನೂರಾರು ಜನರು ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಪಟ್ಟಣದ ಜನರಿಗೆ ಶುದ್ಧ ನೀರು ಪೂರೈಸುವ ನಿಟ್ಟಿನಲ್ಲಿ ವಿಶಾಲ ಕೆರೆ ನಿರ್ಮಿಸಿ ಆ ಮೂಲಕ ಶಾಶ್ವತ ಕುಡಿವ ನೀರಿನ ಯೋಜನೆಗೆ ಒತ್ತು ನೀಡ ಬೇಕು ಎನ್ನುವುದು ನಾಗರಿಕರ ಒತ್ತಾಸೆಯಾಗಿದೆ.

*ಹುಣಸಗಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ನಿಟ್ಟಿನಲಿ ಪಟ್ಟಣದ ಎಡದಂಡೆ ಕಾಲುವೆಯ ಬಳಿ 24 ಎಕರೆ ಪ್ರದೇಶದಲ್ಲಿ ಎರಡು ಕಡೆ ಸ್ಥಳಪರಿಶೀಲನೆ ಮಾಡಲಾಗಿದ್ದು, ಶೀಘ್ರದಲ್ಲಿಯೆ ಸ್ಥಳ ನಿಗದಿಗೊಳಿಸಿ ಯೋಜನೆಗೆ ಒತ್ತು ನೀಡಲಾಗುವದು

– ರಾಜೂಗೌಡ, ಶಾಸಕ, ಸುರಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.