ಸೋಮವಾರ, ಜೂನ್ 21, 2021
21 °C
30 ದಿನಗಳ ಉಪವಾಸ ವ್ರತ ಕೊನೆಗಳಿಸಿ ಹಬ್ಬ ಆಚರಣೆ

ಯಾದಗಿರಿ: ಮನೆಯಲ್ಲಿಯೇ ಈದ್‌ ಉಲ್ ಫಿತ್ರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: 30 ದಿನಗಳ ಉಪವಾಸ ವ್ರತ ಕೊನೆಗಳಿಸಿ ಈದ್‌ ಉಲ್ ಫಿತ್ರ್ (ರಂಜಾನ್‌) ಹಬ್ಬವನ್ನು ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿಯೇ ಶುಕ್ರವಾರ ಆಚರಿಸಿದರು.

ಕಳೆದ 30 ದಿನಗಳಿಂದ ಉಪವಾಸ ಮಾಡಿ ಹಬ್ಬದ ಅಂಗವಾಗಿ ಕೊನೆಗೊಳಿಸಿ ಸಂಭ್ರಮಿಸಿದರು.

ಮನೆಯಲ್ಲಿ ನಮಾಜ್‌: ಕೋವಿಡ್‌ ಕಾರಣದಿಂದ ಸರ್ಕಾರ ಲಾಕ್‌ಡೌನ್‌ ಮಾಡಿದೆ. ಹೀಗಾಗಿ ಮುಸ್ಲಿಮರು ಮನೆಯಲ್ಲಿಯೇ ನಮಾಜ್‌ ಮಾಡಿ ಈದ್‌ ಆಚರಿಸಿದರು. ಮೌಲ್ವಿ ಮತ್ತು ಮಸೀದಿಗೆ ಸಂಬಂಧಿಸಿದ ಧರ್ಮಗುರುಗಳು ಮಾತ್ರ ಮಸೀದಿಯಲ್ಲಿ ನಮಾಜ್‌ ಸಲ್ಲಿಸಿ ಹಬ್ಬದ ವಿಶೇಷ ಪ್ರಾರ್ಥನೆ ಬೋಧಿಸಿದರು.

ಶಾಂತಿ ಸಭೆ ನಡೆಸಿದ್ದ ಪೊಲೀಸರು: ನಗರ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಪೊಲೀಸರು ಶಾಂತಿ ಸಭೆ ನಡೆಸಿ ಮನೆಯಲ್ಲಿ ರಂಜಾನ್‌ ಹಬ್ಬ ಆಚರಿಸುವಂತೆ ಸೂಚಿಸಿದ್ದರು. ಕೆಲವರು ಅರ್ಧಗಂಟೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೋರಿದ್ದರು. ಆದರೆ, ಪೊಲೀಸರು ಇದಕ್ಕೆ ಒಪ್ಪದೇ ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂದು ತಿಳಿಸಿದ್ದರು. ಆದರಂತೆ ಶುಕ್ರವಾರ ನಮಾಜ್‌ ಎಲ್ಲ ಮನೆಯಲ್ಲಿಯೇ ನಡೆಯಿತು.

ಚಿಕ್ಕಮಕ್ಕಳು ಭಾಗಿ: ಚಿಣ್ಣರು ಮಾತ್ರ ಹೊಸ ಬಟ್ಟೆ ತೊಟ್ಟಿದ್ದರು. ಮನೆಯಲ್ಲಿಯೇ ನಮಾಜ್‌ ಮಾಡುತ್ತಿದ್ದ ಕಾರಣ ಚಿಣ್ಣರು ನಮಾಜ್‌ನಲ್ಲಿ ಭಾಗವಹಿಸಿದ್ದರು. ದೊಡ್ಡವರು ಮನೆಯಲ್ಲಿಯೇ ಪ್ರಾರ್ಥನೆ ಮಾಡುತ್ತಿದ್ದ ಕಾರಣ ಮಕ್ಕಳು ಸೇರಿ ರಂಜಾನ್‌ ವಿಶೇಷ ಪ‍್ರಾರ್ಥನೆ ಸಲ್ಲಿಸಿದರು.

ಎರಡು ವರ್ಷ ಮನೆಯಲ್ಲಿ ಪ್ರಾರ್ಥನೆ: ಕಳೆದ ವರ್ಷ ಕೋವಿಡ್‌ ಕಾರಣದಿಂದ ಲಾಕ್‌ಡೌನ್‌ ವಿಧಿಸಲಾಗಿತ್ತು. ಈ ಬಾರಿಯೂ ರಾಜ್ಯದಲ್ಲಿ ಲಾಕ್‌ಡೌನ್‌ ಇರುವ ಕಾರಣದಿಂದ ಮನೆಯಲ್ಲಿಯೇ ರಂಜಾನ್‌ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಆಗಿದೆ.

ಈ ಹಿಂದೆ ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ಈದ್ಗಾ ಮೈದಾನ ಬಳಿ ಸೇರಿ ಸಾಮೂಹಿಕ ‍ಪ್ರಾರ್ಥನೆ ಮಾಡುತ್ತಿದ್ದರು. ಆದರೆ, ಕೋವಿಡ್‌ ಕಾರಣದಿಂದ ಇದು ಈ ವರ್ಷವೂ ಸಾಧ್ಯವಾಗಿಲ್ಲ. 

ಸಿಹಿ, ವಿಶೇಷ ಖ್ಯಾದ್ಯ: ರಂಜಾನ್‌ ಹಬ್ಬದ ಅಂಗವಾಗಿ ಮುಸ್ಲಿಮರು ಸಿಹಿ ಮತ್ತು ಮಾಂಸಹಾರದ ವಿಶೇಷ ಖ್ಯಾದ್ಯಗಳನ್ನು ತಯಾರಿಸಿದ್ದರು. ಕೋವಿಡ್‌ ಕಾರಣದಿಂದ ಬೇರೆ ಸಮುದಾಯದ ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸದೇ ಅವರ ಮನೆಗೆ ಕಳಿಸಿಕೊಟ್ಟಿದ್ದು, ವಿಶೇಷವಾಗಿದೆ.

ಹಾಲಿನಿಂದ ತಯಾರಿಸಿದ ಸಿಹಿ ಪಾಯಸ ಅಕ್ಕಪಕ್ಕದ ಮನೆಗಳ ಬೇರೆ ಸಮುದಾಯದವರಿಗೆ ವಿತರಿಸಿ ಹಬ್ಬ ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು