ಮಂಗಳವಾರ, ಜೂನ್ 28, 2022
26 °C

ವಿದ್ಯುತ್ ಉಪಕೇಂದ್ರದ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ನಗನೂರ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಭಾವಿ ಭಾಗ ಅಧಿಕ ನೀರಾವರಿ ಪ್ರದೇಶ ಹೊಂದಿರುವುದರಿಂದ ಓವರ್ ಲೋಡ್ ಆಗಿ ನಗನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದರು. 

ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆನ್ನುವ ಉದ್ದೇಶದಿಂದ ನಗನೂರ ಗ್ರಾಮದಲ್ಲಿ ₹ 9.5 ಕೋಟಿ ವೆಚ್ಚದಲ್ಲಿ 110 ಕೆ ವಿ ಉಪಕೇಂದ್ರ ಸ್ಥಾಪಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಐದಾರು ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ನಗನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಗುತ್ತಿಬಸವೆಶ್ವರದಲ್ಲಿ 110 ಕೆ.ವಿ ಉಪಕೇಂದ್ರಕ್ಕೆ ಮಂಜುರಾತಿ ನೀಡಲಾಗಿದೆ ಎಂದು ಹೇಳಿದರು.

ನಗನೂರ ಉಪಕೇಂದ್ರದಿಂದ ಹೊಸದಾಗಿ ನಾಲ್ಕು 11 ಕೆ.ವಿ ವಿದ್ಯುತ್ ಮಾರ್ಗಗಳನ್ನು ರಚಿಸಿ ನಗನೂರ, ಗೌಡಗೇರಾ, ಖಾನಾಪುರ, ಕಿರದಳ್ಳಿ ಗ್ರಾಮಗಳಿಗೆ ಸುಮಾರು 8 ಮೆಗಾವ್ಯಾಟ್ ವಿದ್ಯುತ್‍ನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತದೆ ಎಂದು ಕಾಮಗಾರಿ ಕುರಿತಂತೆ ಕೆಪಿಟಿಸಿಎಲ್ ಮುಖ್ಯ ಎಂಜನಿಯರ್ ಎನ್.ಆರ್.ಎಂ ನಾಗರ್ಜುನ್, ಎಸ್‍ಇ ಚಂದ್ರಕಾಂತ ಪಾಟೀಲ್, ಇಇ ರಾಜೆಶ ಹಿಪ್ಪರಗಿ, ಎಇಇ ಋಷಿಕೇಶ್ ಅಗರಕರ್, ವಿಭಾಗ ಅಧಿಕಾರಿ ಶ್ರೀಶೈಲ್ ಶಾಸಕರಿಗೆ ಕಾಮಗಾರಿ ಕುರಿತು ಮಾಹಿತಿ ನೀಡಿದರು.

‘ಈಗಾಗಲೇ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹ 71 ಲಕ್ಷ ವೆಚ್ಚದಲ್ಲಿ ನಗನೂರ-ಮಲ್ಲಾ ರಸ್ತೆ, ₹ 1.5 ಕೋಟಿ  ವೆಚ್ಚದಲ್ಲಿ ಮಲ್ಲಾ-ಕೆಂಭಾವಿ ರಸ್ತೆ ಹಾಗೂ ₹ 80 ಲಕ್ಷ ವೆಚ್ಚದಲ್ಲಿ ಕೆಂಭಾವಿ-ಗುತ್ತಿಬಸವಣ್ಣ ರಸ್ತೆ ಕಾಮಗಾರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು‘ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಖಂಡಪ್ಪ ತಾತಾನವರು, ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ್, ಅಶೋಕ ಸಾಹು ಗೂಗಲ್, ಶರಣಬಸವ ದಿಗ್ಗಾವಿ, ಹಳೆಪ್ಪ ಹವಾಲ್ದಾರ, ಶರಣಗೌಡ ವಣಿಕ್ಯಾಳ್, ಅಯ್ಯಣ್ಣಗೌಡ ಲಕ್ಕುಂಡಿ, ಶಿವರಾಜ ಸಾಹು ಬೂದೂರ್, ಚೆನ್ನಾರೆಡ್ಡಿ ದೇಸಾಯಿ, ಶಿವಮಾಂತ ಚಂದಾಪುರ, ಕಲ್ಲಪ್ಪ ತಿಪ್ಪಶೆಟ್ಟಿ, ಪಿಡಿಒ ಶ್ರೀಶೈಲ್ ಹಳ್ಳಿ ಸೇರಿದಂತೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.