‘ಕಸಾಪ ಬಲವರ್ಧನೆಗೆ ಒತ್ತು’: ಶೇಖರಗೌಡ ಮಾಲಿಪಾಟೀಲ

ಯಾದಗಿರಿ: 106 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನಿಂದ ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕ ಭಾಗದವರು ಆಯ್ಕೆಯಾಗಿಲ್ಲ. ಹೀಗಾಗಿ ಈ ಬಾರಿ ಇದೇ ಭಾಗವರಿಗೆ ಕಸಾಪ ಮತದಾರರು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಹಾಗೂ ಮಾತೃ ಸಂಸ್ಥೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಡು ನುಡಿ, ಉದ್ಯೋಗ ಗಡಿ, ಜಲ ಸಮಸ್ಯೆ ಸೇರಿದಂತೆ ಹಲವಾರು ವಿಷಯವಾಗಿ ಧ್ವನಿ ಎತ್ತುತ್ತ ಬಂದಿದ್ದು, ಇದರಲ್ಲಿ ಎಲ್ಲ ಕನ್ನಡಿಗರ ಪಾತ್ರವಿದೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಕಸಾಪ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದು ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 3.10 ಲಕ್ಷ ಕಸಾಪ ಮತದಾರರಿದ್ದಾರೆ. ರಾಜ್ಯದ 31 ಜಿಲ್ಲೆಗಳಿಗೆ ಭೇಟಿ ನೀಡಿ, ಮತದಾರರನ್ನು ಭೇಟಿಯಾಗಿ ನನ್ನ ಯೋಜನೆಗಳನ್ನು ವಿವರಿಸಿದ್ದೇನೆ. ನ.21ರಂದು ಚುನಾವಣೆ ನಡೆಯಲಿದೆ. ಕಲ್ಯಾಣ ಕರ್ನಾಟಕದಿಂದ ಸ್ಪರ್ಧಿಸಿರುವ ನನಗೆ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 25 ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 2 ಬಾರಿ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಕನ್ನಡ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನಗಳನ್ನು ಸರ್ಕಾರ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಕಾರದಿಂದ ನಿರ್ಮಾಣ ಮಾಡಿ ಕನ್ನಡ ಪರ ಚಟುವಟಿಕೆಗಳ ವೇಗ ಹೆಚ್ಚಿಸಲು ಒತ್ತು ನೀಡಲಾಗುವುದು, ಬೆಂಗಳೂರಿನಲ್ಲಿ ಕಸಾಪ ಮಾದರಿ ಕನ್ನಡ ಶಾಲೆ ಸ್ಥಾಪನೆಗೆ ಗಮನಹರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರತಿವರ್ಷ ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ವಿವಿಧ ಸಾಂಸ್ಕೃತಿಕ ಸಮಾವೇಶ ಹಾಗೂ ಉದಯೋನ್ಮುಖ ಹಾಗೂ ಯುವ ಬರಹಗಾರರ ಕಮ್ಮಟ, ಶಿಬಿರಗಳು, ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಎಲ್ಲರನ್ನು ಆಕರ್ಷಿಸಲು ಸಹಕಾರಿಯಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ ಜೋಶಿ ಅವರಿಗೆ ಆರ್‌ಎಸ್‌ಎಸ್, ಬಿಜೆಪಿ ಬೆಂಬಲಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಾಹಿತ್ಯ ಕ್ಷೇತ್ರ ಪವಿತ್ರವಾಗಿದೆ. ಇಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಪಕ್ಷಗಳು ಇದರಲ್ಲಿ ಭಾಗಿಯಾಗಬಾರದು. ಆ ರೀತಿ ಆಗಬಾರದು. ಇದು ಯುವ ಪೀಳಿಗೆ ಮೇಲೆ ಕೆಟ್ಟ ಪರಿಣಾಮ ಬೀರಿ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದರು.
ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ ಹಾಗೂ ಎನ್.ಶಿವಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.