ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ 20 ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭ

ಮೇ 29ರಿಂದ ಶಾಲಾ ದಾಖಲಾತಿ ಆರಂಭ, ಮೂರು ಶಾಲೆಗಳಲ್ಲಿ ಎಲ್‌ಕೆಜಿ ಶುರು
Last Updated 25 ಮೇ 2019, 19:45 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2019-20ನೇ ಸಾಲಿನ ಶೈಕ್ಷ ಣಿಕ ವರ್ಷದಿಂದಲೇ ಸುಮಾರು 20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸಾರ್ವಜನಿಕ ಶಿಕ್ಷ ಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಹಳ್ಳಿ, ನಗರ, ಪಟ್ಟಣಗಳ ಪೋಷಕರು ತಮ್ಮ ಮಗುವನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಇಂಥ ಪೋಷಕರ ಆರ್ಥಿಕ ಸ್ಥಿತಿಗತಿ ಅರಿತು ಸರ್ಕಾರವೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುತ್ತಿದೆ.

ಕೆಲ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಂದ ಪೋಷಕರಿಗೆ ಶೋಷಣೆಯಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೆಂಬ ಇಚ್ಛೆ ಪ್ರತಿಯೊಬ್ಬ ಪಾಲಕರಾದ್ದಾಗಿರುತ್ತದೆ. ಹೀಗಾಗಿ ಈ ಆಶೆಯನ್ನು ಸರ್ಕಾರವೇ ಈಡೇರಿಸುತ್ತಿದೆ.

ಶಾಲಾ ದಾಖಲಾತಿಯೂ ಇದೇ ಮೇ 29ರಿಂದ ಆರಂಭಗೊಳ್ಳಲಿದೆ. ಕನಿಷ್ಠ 20 ಮತ್ತು ಗರಿಷ್ಠ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. 30 ಮಕ್ಕಳನ್ನು ದಾಖಲಿಸಿಕೊಳ್ಳುವ ಅಧಿಕಾರ ಆಯಾ ಶಾಲೆಯ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ.

ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಸರ್ಕಾರಿ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುತ್ತಿದೆ.

ಎಲ್ಲೆಲ್ಲಿ ಶಾಲೆಗಳು:
ಜಿಲ್ಲೆಯಲ್ಲಿ 20 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮೀಡಿಯಂ ಆರಂಭಿಸುತ್ತಿದ್ದು, ಗುರುಮಠಕಲ್ ತಾಲೂಕಿನ ಗಾಜರಕೋಟ್ ಮಾದರಿ ಪ್ರಾಥಮಿಕ ಶಾಲೆ, ಶಹಾಪುರ ತಾಲೂಕಿನ ಸಗರ ಮಾದರಿ ಪ್ರಾಥಮಿಕ ಶಾಲೆ, ಸುರಪುರ ತಾಲೂಕಿನ ರಂಗಂಪೇಟೆ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗುತ್ತಿದೆ.

ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ, ಹೊನಗೇರ, ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಗಾಜರಕೋಟ್, ಕನ್ಯಾ ಪ್ರಾಥಮಿಕ ಶಾಲೆ, ಯರಗೋಳ, ಶಹಾಪುರ ತಾಲೂಕಿನ ಶಿರವಾಳ, ಹೊಸಕೇರ, ತಡಿಬಿಡಿ, ಬಾಲಕರ ಶಾಲೆ ಸಗರ, ಗಾಂಧಿ ಚೌಕ್‌ ಶಹಾಪುರ ಶಾಲೆ, ಸುರಪುರ ತಾಲೂಕಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಯಾಳಗಿ, ರಂಗನಪೇಟೆ, ಕನ್ಯಾ ಎಂಪಿಎಸ್‌ ಶಾಲೆ ಸುರಪುರ, ಅಲ್ದಾಳ, ಯಮನೂರ, ತಿಮ್ಮಾಪುರ, ಕನ್ನೇಳ್ಳಿ, ಯಾದಗಿರಿ ತಾಲೂಕಿನ ಅರಕೇರ ಕೆ.,ಹರಿಜನವಾಡ, ರಾಮಸಮುದ್ರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲಾಗುತ್ತಿದೆ.

ಹಳ್ಳಿಯಲ್ಲಿ ಇಂಗ್ಲಿಷ್ ಶಾಲೆ ಆರಂಭಿಸಿ ಅಲ್ಲಿಯ ಜಾಣ ವಿದ್ಯಾರ್ಥಿಗಳ ಪ್ರತಿಭೆ ಹೊರೆತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ. ಶಾಲೆಯನ್ನು ಮತ್ತಷ್ಟು ಸಬಲೀಕರಣಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಬಡ ಪಾಲಕರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ಪ್ರಯತ್ನ ಇದಾಗಿದೆ. ಸರ್ಕಾರಿ ಶಾಲೆಗಳಿಗೆ ಈ ಮೂಲಕ ಸ್ಮಾರ್ಟ್ ಕ್ಲಾಸ್‌, ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ್ ಬಿರಾದಾರ ಹೇಳುತ್ತಾರೆ.

ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಶಾಲೆಗಳ ಶಿಕ್ಷಕರಿಗೆ ಈಗಾಗಲೇ ಡಯಟ್ ವತಿಯಿಂದ ತರಬೇತಿ ನೀಡಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗೆ ಒಂದು ಕೊಠಡಿ ನಿಗದಿ ಪಡಿಸಲಾಗಿದೆ ಎನ್ನುತ್ತಾರೆ ಡಿಡಿಪಿಐ.

1ನೇ ತರಗತಿಯಲ್ಲಿ ಮೂರು ವಿಷಯಗಳನ್ನು ಬೋಧಿಸಲಾಗುತ್ತಿದೆ. ಇಂಗ್ಲಿಷ್, ಪರಿಸರ ಅಧ್ಯಯನ, ಗಣಿತ ವಿಷಯಗಳ ಕುರಿತು ತರಗತಿ ನಡೆಸಲಾಗುತ್ತಿದೆ. ಇಲ್ಲಿ ಬೋಧನೆಗಿಂತ ಹೆಚ್ಚಿನ ಚಟುವಟಕೆಗಳ ಮೂಲಕ ತಿಳಿಸಲಾಗುತ್ತಿದೆ.

ಖಾಸಗಿ ಶಾಲೆಗಳಲ್ಲಿ ಎಲ್ಲದಕ್ಕೂ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಉಚಿತವಾಗಿದೆ. ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಶಿಷ್ಯವೇತನ ಇತ್ಯಾದಿ ಸೌಲಭ್ಯ ನೀಡಲಾಗುತ್ತಿದೆ. ಇದು ಪೋಷಕರಿಗೆ ಅನುಕೂಲವಾಗಿದೆ ಎಂದು ಪ್ರಭಾರಿ ಮುಖ್ಯಶಿಕ್ಷಕ ಸೋಮರೆಡ್ಡಿ ಬಿ.ಮಂಗಿಹಾಳ ಹೇಳುತ್ತಾರೆ.

* ಪಾಲಕರಿಗೆ ಅವರ ಇಚ್ಛೆ ಮೇರಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ಲಭ್ಯವಾಗುತ್ತಿದೆ. ನಗರ ಪ್ರದೇಶದಂತೆ ಹಳ್ಳಿಯ ಮಕ್ಕಳು ಸ್ಪರ್ಧೆ ಮಾಡುವ ಮಟ್ಟಕ್ಕೆ ಬೆಳೆಯುತ್ತಾರೆ
ಶ್ರೀಶೈಲ್ ಬಿರಾದಾರ, ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ

*ಈಗಾಗಲೇ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುತ್ತಿರುವ ಪಾಲಕರಿಗೆ ಸಂತೋಷಕರ ಸಂಗತಿ. ಈ ಬಗ್ಗೆ ಪ್ರಚಾರ ಕೂಡ ನಡೆಸಲಾಗಿದೆ
ಸೋಮರೆಡ್ಡಿ ಬಿ.ಮಂಗಿಹಾಳ, ಪ್ರಭಾರಿ ಮುಖ್ಯಶಿಕ್ಷಕರು ಕನ್ಯಾ ಎಂ‍ಪಿಎಸ್‌ ಶಾಲೆ ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT