ಮಂಗಳವಾರ, ಫೆಬ್ರವರಿ 25, 2020
19 °C
ಎಐಯುಟಿಯುಸಿ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕರ ಸಮ್ಮೇಳನ, ಕೆ.ಸೋಮಶೇಖರ ಆರೋಪ

ಕನಿಷ್ಠ ವೇತನ ನೀಡದೆ ಕಾರ್ಮಿಕರ ಶೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಅಂಗನವಾಡಿ, ಆಶಾ ಮತ್ತು ಬಿಸಿಯೂಟ ನೌಕರರನ್ನು ಸಾಮಾಜಿಕ ಕಾರ್ಯಕರ್ತೆ ಎನ್ನುವ ಹೆಸರಿನಲ್ಲಿ ಅವರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡದೆ ಶೋಷಣೆ ಮಾಡಲಾಗುತ್ತಿದೆ’ ಎಂದು ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಆರೋಪಿಸಿದರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎಐಯುಟಿಯುಸಿನ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯಿಂದ ಕಾರ್ಮಿಕರ ಬದುಕು ಕಷ್ಟಕರವಾಗಿದೆ. ದೇಶ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಲಕ್ಷಾಂತರ ಕೈಗಾರಿಕೆಗಳು, ಉದ್ದಿಮೆಗಳು ಸ್ಥಗಿತಗೊಳ್ಳುತ್ತಿವೆ. ಕಾರ್ಖಾನೆಗಳಿಗೆ ಬೀಗ ಬೀಳುತ್ತಿವೆ. ಸಾವಿರಾರು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ’ ಎಂದು ದೂರಿದರು.

‘ಯಾದಗಿರಿ ಜಿಲ್ಲೆಯಲ್ಲಿ ನಿತ್ಯ ಸಾವಿರಾರು ಜನರು ಉದ್ಯೋಗ ಅರಸಿ ಗಂಟು–ಮೂಟೆ ಕಟ್ಟಿಕೊಂಡು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ರೈತರು ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ನರಳುತ್ತಿದ್ದಾರೆ. ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ನರಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಇದನ್ನು ಕಂಡು ಕಾಣದಂತೆ ವರ್ತಿಸುತ್ತಿದೆ’ ಎಂದು ಆಪಾದಿಸಿದರು.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಾಸ್ಟೆಲ್‌, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಮಿಕರು ಸೇರಿದಂತೆ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರನ್ನು ಸಂಘಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ. ಕಾರ್ಮಿಕರ ಹಿತರಕ್ಷಣೆ ಆಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.

ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ ಯಾದಗಿರಿ, ಜಿಲ್ಲಾ ಸಂಚಾಲಕಿ ಡಿ.ಉಮಾದೇವಿ, ರಾಯಚೂರು ಜಿಲ್ಲಾಧ್ಯಕ್ಷ ವಿರೇಶ ಎನ್‌.ಎಸ್‌., ಎಸ್‌.ಎಂ.ಶರ್ಮಾ, ವಿ.ಜಿ.ದೇಸಾಯಿ, ತಾಜುದ್ದಿನ್‌ ಹಾಗೂ ರಾಮಲಿಂಗಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು