ಶುಕ್ರವಾರ, ಫೆಬ್ರವರಿ 26, 2021
23 °C
ಎಚ್ಚರ ತಪ್ಪಿದರೆ ತಪ್ಪದು ಸಂಕಷ್ಟ

ಮಾಯವಾದ ಅಂತರ, ಆತಂಕ: ಯಾದಗಿರಿ ಜಿಲ್ಲೆಯಲ್ಲಿ ಬೇಕಾಬಿಟ್ಟಿ ಜನ, ವಾಹನ ಸಂಚಾರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌–19 ಪತ್ತೆಯಾಗಿಲ್ಲ ಎಂದು ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದೆ. ಆದರೆ ಕೊರೊನಾಗೆ ಯಾವುದೇ ‘ಝೋನ್‌’ಗಳಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಜಿಲ್ಲೆಯ ಜನತೆ ಮತ್ತಷ್ಟು ಎಚ್ಚರ ವಹಿಸುವ ಅಗತ್ಯವಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಮಹಿಳೆಯರು ಸೀರೆಯ ಸೆರೆಗಿನಿಂದ ಬಾಯಿಗೆ ಅಡ್ಡಲಾಗಿ ಕೆಲಹೊತ್ತು ಮಾತ್ರ ಹಿಡಿದುಕೊಳ್ಳುತ್ತಿದ್ದಾರೆ. ಪುರುಷರು ಟವೆಲ್‌ನಿಂದ ಮುಖ ಮುಚ್ಚಿಕೊಳ್ಳುತ್ತಿದ್ದಾರೆ. ಇದು ಯಾರಾದರೂ ಹೇಳಿದಾಗಷ್ಟೆ, ನಂತರ ಯಥಾಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ.

ಲಾಕ್‌ಡೌನ್‌ ನಂತರ ಲಕ್ಷಾಂತರ ಜನ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಕೆಲವರು ಕೆಂಪು ವಲಯದಿಂದ ಬಂದಿದ್ದರೆ ಇನ್ನೂ ಕೆಲವರು ಬೆಂಗಳೂರಿನಲ್ಲಿ ಸೋಂಕಿತರ ಸಂಪರ್ಕದಲ್ಲಿ ಇದ್ದರು ಎನ್ನಲಾದವರು ಬಂದಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಿದ್ದು, ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ. ಹಾಗೆಂದ ಮಾತ್ರಕ್ಕೆ ಜಿಲ್ಲೆ ಸೇಫ್‌ ಆಗಿಲ್ಲ. ಲಾಕ್‌ಡೌನ್‌ನಿಂದ ಬಹುತೇಕ ಜನರು ಮನೆಗಳಲ್ಲಿ ಇದ್ದರು. ಇದೀಗ ಸಡಿಲಿಕೆಯಿಂದ ಜನ ಮನೆಯಿಂದ ಹೊರ ಬಂದಿದ್ದು ಆತಂಕ ಸೃಷ್ಟಿಯಾಗಿದೆ.

ನಗರದ ಮಾರುಕಟ್ಟೆಯಲ್ಲಿ ಎಲ್ಲ ಅಂಗಡಿಗಳು ಓಪನ್‌ ಆಗಿದ್ದು, ಜನತೆ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ‘ಜಾಗೃತಿ ಮೂಡಿಸಲಾಗುತ್ತಿದೆ, ಜನರು ಎಚ್ಚೆತ್ತುಕೊಳ್ಳದಿದ್ದರೆ ಏನು ಮಾಡುವುದು’ ಎನ್ನುತ್ತಿದೆ ಜಿಲ್ಲಾಡಳಿತ.

ಸರ್ಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದರಿಂದ ಪೊಲೀಸರು ತಿರುಗಾಡುವವರನ್ನು ಪ್ರಶ್ನಿಸದಂತ ಪರಿಸ್ಥಿತಿ ಉದ್ಬವಿಸಿದೆ. ಮಾಸ್ಕ್‌ ಧರಿಸದ ವಾಹನ ಸವಾರರಿಂದ ದಂಡ ಕಟ್ಟಿಸಿಕೊಂಡು ಮಾಸ್ಕ್‌ ವಿತರಿಸುತ್ತಿದ್ದಾರೆ. ಆದರೆ, ಜನರು ತಿರುಗಾಡುವುದನ್ನು ಮಾತ್ರ ಬಿಟ್ಟಿಲ್ಲ. ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. 

ಮೊದಲಿನಂತಾದ ವ್ಯಾಪಾರ

ಲಾಕ್‌ಡೌನ್‌ ಸಡಿಲಿಕೆಯಿಂದ ಜಿಲ್ಲೆಯಲ್ಲಿ ಎಲ್ಲ ವ್ಯಾಪಾರ ವಹಿವಾಟು ಆರಂಭವಾಗಿದ್ದು, ಲಾಕ್‌ಡೌನ್‌ಗೂ ಮುನ್ನ‌ ಹೇಗಿತ್ತೋ ಅದೇ ರೀತಿ ಜನ ಸಂದಣಿ ಸೇರುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಗುಂಪುಗುಂಪಾಗಿ ಜನ ಸೇರುತ್ತಿದ್ದಾರೆ. ಬಟ್ಟೆ, ಚಪ್ಪಲಿ, ದಿನಸಿ ಅಂಗಡಿಗಳಲ್ಲಿಯೂ ಅಂತರ ಪಾಲನೆಯಾಗುತ್ತಿಲ್ಲ. 

‘ಮೇಲಿಂದ ಮೇಲೆ ಜನರಿಗೆ ಎಚ್ಚರಿಕೆಯ ಮಾಹಿತಿಯನ್ನು ಜನರಿಗೆ ತಲುಪಿಸುತ್ತೇವೆ. ಆದರೆ, ಪಾಲನೆ ಮಾಡದಿದ್ದರೆ ಹೇಗೆ. ಇದು ನಮ್ಮ ಒಳಿತಿಗಾಗಿ ಮಾಡಲಾಗಿದೆ. ಆರ್ಥಿಕ ಚಟುಚಟಿಕೆಗಳಿಗೆ ಮಾತ್ರ ಸಡಿಲಿಕೆ ಇದೆ. ಆದರೆ, ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು. ‘ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಮಾಹಿತಿ ಇದೆ. ಆದರೆ, ಪಾಲನೆ ಮಾಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಜನರೇ ಎಚ್ಚೆತ್ತುಕೊಂಡು ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಬೇಕು’ ಎನ್ನುತ್ತಾರೆ ಡಿಎಚ್‌ಒ ಡಾ.ಎಂ.ಎಸ್‌.ಪಾಟೀಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು