ಶನಿವಾರ, ಸೆಪ್ಟೆಂಬರ್ 25, 2021
29 °C

ಹತ್ತಿಕುಣಿ: ರೈತ ಸಂಘದ ಸಭೆ, ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕೃಷಿ ಕ್ಷೇತ್ರವನ್ನು ಕಡೆಗಣಿಸಿವೆ‘ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಗೌಡ ಸುಬೇದಾರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶ್ರೀರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಪ್ರವಾಹ ಹಾಗೂ ಕೊರೊನಾ ಕಾರಣದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸೂಕ್ತ ನ್ಯಾಯ ಒದಗಿಸಿಕೊಡಲು ನಾವೆಲ್ಲರೂ ಸಂಘಟಿತರಾಗಿ ಕೆಲಸ ಮಾಡಿದ್ದಾಗ ಮಾತ್ರ ಸಾಧ್ಯ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಮಸೂದೆಗಳಿಂದ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದೇಶದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರು ತಮ್ಮ ಜಮೀನು ಕೈಗಾರಿಕೋದ್ಯಮಿಗಳ ಹಿಡಿತಕ್ಕೆ ಹೋಗಲಿದೆ ಎಂಬ ಭಯದಲ್ಲಿದ್ದಾರೆ. ಇದನ್ನು ಅರಿತು ರಾಷ್ಟ್ರಮಟ್ಟದಲ್ಲಿರುವ ರೈತ ಸಂಘಟನೆಗಳು ಕಳೆದ 7 ತಿಂಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿವೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ವಲಯಗಳಿಗೆ ನೀಡಿದ ಸೌಲಭ್ಯ ವಾಪಸು ಪಡೆದು ಮಸೂದೆಗಳನ್ನು ಕೈಬಿಟ್ಟು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಪ್ಯಾಕೇಜ್‌ ಘೊಷಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸಣ್ಣ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು. ಸಂಘದ ಕಾರ್ಯಕರ್ತರು ಯೋಜನೆಗಳ ಲಾಭ ಗ್ರಾಮೀಣ ರೈತರಿಗೆ ತಲುಪಿಸಿದಾಗ ಮಾತ್ರ ರೈತರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ಸಂಘದ ನೂತನ ತಾಲ್ಲೂಕು ಅಧ್ಯಕ್ಷ ಭೀಮರೆಡ್ಡಿ ರಾಂಪುರಳ್ಳಿ ಮಾತನಾಡಿ, ’ನಮ್ಮ ತಂಡ ಯಾದಗಿರಿ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮ ಘಟಕಗಳನ್ನು ಸ್ಥಾಪಿಸಿ, ರೈತರನ್ನು ಒಗ್ಗೂಡಿಸಿ ಸಂಘಟನೆ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ‘ ಎಂದು ತಿಳಿಸಿದರು.

ಸಭೆಯಲ್ಲಿ ಹತ್ತಿಕುಣಿ ಹೋಬಳ್ಳಿಯ ರೈತ ಸಂಘದ ಅಧ್ಯಕ್ಷರನ್ನಾಗಿ ಬಸವರಾಜ ಕಂಚಗಾರಳ್ಳಿ ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಹನೀಫ್, ತಾಲ್ಲೂಕು ಗೌರವಾಧ್ಯಕ್ಷ ವೆಂಕೋಬ ಕಟ್ಟಿಮನಿ, ಭೀಮರೆಡ್ಡಿ ಕೌಳ್ಳೂರ, ಶರಣಪ್ಪ ದ್ಯಾರನೋರ, ಬಸವರಾಜ ಕರಣಗಿ, ಸಾಬಣ್ಣ ತಳವಾರ, ಶೇಖಪ್ಪ ಇನಾಂದಾರ, ನಿಂಗಪ್ಪ ಡೋಣಗಾಂವ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು