ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ | ಸಕಾಲದಲ್ಲಿ ಮಳೆ ಇಲ್ಲದೆ ಹತ್ತಿ ಬೆಳೆ ಇಳುವರಿ ಕಡಿಮೆ: ರೈತರು ಕಂಗಾಲು

Published 10 ಡಿಸೆಂಬರ್ 2023, 16:15 IST
Last Updated 10 ಡಿಸೆಂಬರ್ 2023, 16:15 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನ ಸುತ್ತಮುತ್ತ ರೈತರು ಬೆಳೆದ ಹತ್ತಿ ಬೆಳೆಗೆ ಸರಿಯಾದ ಬೆಂಬಲ ಬೆಲೆ ಇಲ್ಲದೆ ಇರುವುದರಿಂದ ಹಾಗೂ ಹತ್ತಿ ಬೆಲೆಯಲ್ಲಿ ಸರಿಯಾದ ಇಳುವರಿ ಇಲ್ಲದೆ ಇರುವುದರಿಂದ ರೈತರ ಮುಖದಲ್ಲಿ ಕರಾಳ ಛಾಯೆ ಆವರಿಸಿದೆ.

‘ಹತ್ತಿ ಬಿತ್ತನೆ ಮಾಡಿದ ರೈತರಿಗೆ ಪ್ರಾರಂಭದಲ್ಲಿ ಎಷ್ಟು ಬೇಕೊ ಅಷ್ಟೆ ಮಳೆ ಸುರಿದಿತ್ತು. ಇದರಿಂದ ರೈತರಲ್ಲಿ ಉತ್ತಮ ಬೆಳೆಯ ನಿರೀಕ್ಷೆ ಮೂಡಿತ್ತು. ಆದರೆ, ನಂತರ ಬೆಳೆಯಲ್ಲಿ ಫಲ ಹಾಗೂ ಕಾಯಿ ಹಿಡಿಯುವ ಸಮಯದಲ್ಲಿ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಹತ್ತಿ ಬೆಳೆಯ ಇಳುವರಿಯಲ್ಲಿ ಕಡಿಮೆಯಾಯಿತು’ ಎಂದು ರೈತರು ಹೇಳುತ್ತಾರೆ.

ಕಳೆದ ವರ್ಷ ರೈತರು ಪ್ರತಿ ಎಕರೆಗೆ 8 ರಿಂದ 10 ಕ್ವಿಂಟಲ್ ಹತ್ತಿ ಬೆಳೆದಿದ್ದರು. ಆದರೆ, ಈ ವರ್ಷ ಸಕಾಲದಲ್ಲಿ ಮಳೆ ಇಲ್ಲದಿರುವುದರಿಂದ ಎಕರೆಗೆ 4 ರಿಂದ 6 ಕ್ವಿಂಟಲ್ ಇಳುವರಿ ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹತ್ತಿಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ ಹಾಗೂ ಇಳುವರಿ ಇಲ್ಲದಿರುವುದರಿಂದ ರೈತರ ಮೊಗದಲ್ಲಿ ನಿರಾಸೆಯ ಭಾವ ಆವರಿಸಿದೆ.

‘2021-22ನೇ ಸಾಲಿನಲ್ಲಿ ತಾಲ್ಲೂಕಿನ ಸುತ್ತಮುತ್ತ ಸುಮಾರು 21 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 35,110 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. 2022-23 ಸಾಲಿನಲ್ಲಿ 26,799 ಹೆಕ್ಟರ್ ಜಮೀನಿನಲ್ಲಿ ಹತ್ತಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, 30,030 ಹೆಕ್ಟೇರ್‌ ಹತ್ತಿಯನ್ನು ರೈತರು ಬಿತ್ತನೆ ಮಾಡಿದ್ದಾರೆ’ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಕಳೆದ ವರ್ಷ ಕ್ವಿಂಟಲ್ ಹತ್ತಿಗೆ ಸುಮಾರು ₹7,500 ರಿಂದ ಆರಂಭವಾಗಿ ₹9,000 ವರೆಗೆ ಮಾರಾಟವಾಗಿತ್ತು. ಆದರೆ, ಈ ವರ್ಷ ಹತ್ತಿ ಬೆಳೆಗೆ ಕ್ವಿಂಟಲ್ ಒಂದಕ್ಕೆ ₹6ರಿಂದ ₹7 ಸಾವಿರ ದರ ಇರುವುದರಿಂದ ಬಹಳಷ್ಟು ಹತ್ತಿ ಬೆಳೆದ ರೈತರು ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.

ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಅಪಾರ ಪ್ರಮಾಣದ ಫಲ ಹಾಗೂ ಕಾಯಿಗಳು ನೀರಿಲ್ಲದೆ ನೆಲಕ್ಕೆ ಬಿದ್ದಿವೆ. ಅಲ್ಲದೆ ಕಪ್ಪು ಭೂಮಿಯಲ್ಲಿ ತೇವಾಂಶದ ಕೊರತೆಯಿಂದಾಗಿಯೂ ಕಾಯಿಗಳು ಹತ್ತಿ ಬೆಳೆಯಲ್ಲಿ ಸರಿಯಾಗಿ ಬಂದಿಲ್ಲ. ಇವೆರಡು ಕಾರಣಗಳಿಂದಾಗಿ ಈ ವರ್ಷ ಇಳುವರಿಯಲ್ಲಿ ಸಾಕಷ್ಟು ಕಡಿಮೆಯಾಗಿದೆ
–ಶರಣಪ್ಪ ಜಡಿ ರೈತ ವಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT