ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಪ್ಪಂದಿರ ದಿನ: ‘ಅಪ್ಪ ಎಂದರೆ ನನಗೆ ಪಂಚಪ್ರಾಣ’

Last Updated 20 ಜೂನ್ 2021, 5:00 IST
ಅಕ್ಷರ ಗಾತ್ರ

ಕಕ್ಕೇರಾ: ಅಪ್ಪ ಎಂದರೆ ನನಗೆ ಪಂಚಪ್ರಾಣ. ಆ ಪ್ರಾಣ ಇಂದು ಇಲ್ಲದಿರುವುದು ನನಗೆ ಬಹಳ ದುಃಖದ ಸಂಗತಿ. ಅಪ್ಪ ಇಲ್ಲ ಎನ್ನುವ ನೋವು ಯಾವ ಶತ್ರುಗೂ ಬಾರದಿರಲಿ.

ನಮ್ಮದು ಚಿಕ್ಕ ಸಂಸಾರ, ಆ ಚಿಕ್ಕ ಸಂಸಾರದ ಪ್ರೇಮಲೋಕದ ಯಜಮಾನ ನಮ್ಮ ಅಪ್ಪ. ಹಣದ ಕೊರತೆಯಿದ್ದರೂ, ಪ್ರೀತಿಯ ಕೊರತೆ ಎಂದೂ ನಮ್ಮ ಮನೆಯಲ್ಲಿ ಕಾಣಲಿಲ್ಲ. ನಾನು ಏನೇ ಕೇಳಿದರೂ ಇಲ್ಲ ಎನ್ನದೇ ಕಷ್ಟವಿದ್ದರೂ, ತಂದು ಕೊಡುತ್ತಿದ್ದರು. ನನ್ನ ಮನಸ್ಸನ್ನು ಎಂದೂ ನೋಯಿಸಿಲ್ಲ. ಏನೇ ತಪ್ಪು ಮಾಡಿದರೂ, ನಿಧಾನದಿಂದ, ಮೃದು ಮಾತುಗಳಿಂದ ತಿಳಿಸಿ ಹೇಳುತ್ತಿದ್ದರು.

ನನ್ನನ್ನು ಮೂಡಬಿದರೆ ಸಮೀಪದ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಗೆ 12 ವರ್ಷದ ಇದ್ದಾಗಲೇ ನನ್ನನ್ನು ಅಲ್ಲಿಗೆ ದಾಖಲಿಸಿದ್ದರು. ನಾನು ಪ್ರತಿದಿನ ಫೋನ್ ಮಾಡಿ ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದೆ. ಆದರೆ, ಈ ಹತ್ತು ತಿಂಗಳಲ್ಲಿ ಅಪ್ಪಾಜೀ ಕಾಣದೇ ನಮ್ಮ ಕುಟುಂಬ ಕಣ್ಣೀರಲ್ಲೇ ಕೈ ತೊಳಿಯುತ್ತಿದೆ. ಅಪ್ಪಾಜೀ ಅಕ್ಕಾನ ಮದುವೆಯಾದ 4 ತಿಂಗಳಲ್ಲೇ ಕೋವಿಡ್‌ ದೃಢವಾಗಿ ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದಾಗ ನನಗೆ ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು.

ನನಗೆ ಸಂಗೀತದಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳು, ಹಾಗೆ ಅರಳುಮಲ್ಲಿಗೆ ರೇಡಿಯೋ ಕಾರ್ಯಕ್ರಮ ಹೀಗೆ ಹಲವಾರು ಕಡೆ ಅಪ್ಪಾಜೀ ನೆನಪು ಅಳಿದಿಲ್ಲ. ಅಳಿಯುವುದಿಲ್ಲ. ಅಪ್ಪಾಜೀ ಕನಸು ನನ್ನನ್ನು ಜಿಲ್ಲಾಧಿಕಾರಿ ಮಾಡುವ ಗುರಿಯಿತ್ತು. ಆ ಗುರಿಯನ್ನು ನನಸಾಗಿಸುವ ಪ್ರಯತ್ನದಲ್ಲಿದ್ದೇನೆ.

– ಮಹಾಲಕ್ಷ್ಮೀ ದೊರೆ, ಕೊರೊನಾದಿಂದ ಮೃತಪಟ್ಟ ವೆಂಕಟೇಶ ದೊರೆ ಪುತ್ರಿ

ನಿರೂಪಣೆ: ಮಹಾಂತೇಶ ಸಿ, ಹೊಗರಿ

****

‘ತುಂಬಿದ ಸಂಸಾರದ ಆಧಾರಸ್ತಂಭವಾಗಿದ್ದೆ’

ಯರಗೋಳ: ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ ಅಪ್ಪ. ದೇವರು ಇಷ್ಟು ಬೇಗ ನಮ್ಮ ತುಂಬಿದ ಸಂಸಾರದ ಆಧಾರಸ್ತಂಭವಾಗಿದ್ದ ನಿಮ್ಮನ್ನು ಅಗಲಿಸಬಾರದಿತ್ತು ಅಪ್ಪ.

ಸದಾ ನೀನು ನಮಗೆ ಜೀವನದಲ್ಲಿ ಕಷ್ಟ ಅಂದರೆ ಹೇಗಿರುತ್ತದೆ ಎನ್ನುವುದನ್ನು ಹೇಳದೆ ಎಲ್ಲಾ ನೋವುಗಳನ್ನು ನುಂಗಿಕೊಂಡು ನಮಗಾ ಹಗಲಿರುಳು ದುಡಿದು ಎಲ್ಲರ ಸುಖವನ್ನೇ ಬಯಸುತ್ತಿದ್ದೆ.

ನೀವು ಜೀವನದಲ್ಲಿ ಯಾರಿಗೂ ನೋವು ಕೊಡಬಾರದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಯಾವತ್ತು ಹಿಂಜರಿಯಬಾರದು ಎಂದು ಹೇಳುತ್ತಿದ್ದ ಮಾತುಗಳು ಸದಾ ನಮ್ಮ ಮನದಲ್ಲಿ ಉಳಿದಿವೆ ಅಪ್ಪ.

ನಮಗಾಗಿ ನೀನು ಜೀವನದುದ್ದಕ್ಕೂ ಎಲ್ಲಾ ತ್ಯಾಗಗಳನ್ನು ಮಾಡಿದೆ. ನಿನ್ನ ಅಣ್ಣ- ತಮ್ಮಂದಿರಿಗೂ ನಿನ್ನ ಸಂತೋಷದಲ್ಲಿ ಪಾಲು ಕೊಟ್ಟು, ನೋವುಗಳಿದ್ದರೂ ನೀನು ಅನುಭವಿಸಿದೆ ಅಪ್ಪ.

ನಮಗೆ ಒಳಿತಾದಾಗ ಹಿಗ್ಗಿದೆ. ಎಲ್ಲರಿಗೂ ಸಿಹಿ ಹಂಚಿ ಖುಷಿಪಡುತ್ತಿದ್ದ ನಿನ್ನ ಮುಖದಲ್ಲಿನ ಸಂತೋಷ ನೋಡುವುದೇಚಂದ.

ದಿ. ಶಿವಶರಣಪ್ಪ ಗೋಡಿಕಾರಗೆ ನಾವು ನಾಲ್ಕು ಜನ ಮಕ್ಕಳು, ನಮ್ಮ ತಾಯಿ ಗೌರಮ್ಮ. ನಾನು ಹಿರಿಯ ಮಗ. ಸಹೋದರ ಚಂದರೆಡ್ಡಿ, ಸಹೋದರಿಯರಾದ ಭೀಮಬಾಯಿ, ಶ್ರೀದೇವಿ ಇದ್ದಾರೆ. ಇದೇ ಮೇ 12ರಂದು ಕೊರೊನಾ ನಮ್ಮ ತಂದೆಯವರನ್ನು ಬಲಿ ಪಡೆಯಿತು.

–ದೇವಿಂದ್ರಪ್ಪ ಎಸ್ ಗೋಡಿಕರ್, ಶಿಕ್ಷಕ, ಮೋಟ್ನಳ್ಳಿ

ನಿರೂಪಣೆ: ತೋಟೇಂದ್ರ ಎಸ್ ಮಾಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT