ಭಾನುವಾರ, ಮೇ 22, 2022
22 °C
₹1 ಕೋಟಿ ವೆಚ್ಚದ ಮೀನು ಮಾರುಕಟ್ಟೆ ಉದ್ಘಾಟನೆ

ಆಳಸಮುದ್ರ ಮೀನುಗಾರಿಕೆಗೆ ಉತ್ತೇಜನ: ಸಚಿವ ಎಸ್.ಅಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ಮೀನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಆಳಸಮುದ್ರ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ’ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ನಗರದ ಹೊರವಲಯದಲ್ಲಿ ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ವತಿಯಿಂದ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಒಳನಾಡು ಮೀನುಗಾರಿಕೆ ಹಾಗೂ ಕರಾವಳಿ ಮೀನುಗಾರಿಕೆಯಿಂದ ಹಲವಾರು ಕುಟುಂಬಗಳ ಜೀವನ ನಿರ್ವಹಣೆಯಾಗುತ್ತಿದೆ. ಹೀಗಾಗಿ ಅವರಿಗೆ ಆಳ ಸಮದ್ರ ಮೀನುಗಾರಿಕೆ ಅವಕಾಶ ಕಲ್ಪಿಸಲಾಗಿದ್ದು, ಮೀನುಗಾರರು ಸಮುದ್ರದಲ್ಲಿ ಹಿಡಿದ ಮೀನುಗಳನ್ನು ತಮಗೆ ಒದಗಿಸಲಾದ ಬೋಟ್ ಮೂಲಕ ತಂದು ಮೀನುಗಾರಿಕೆ ಮಾಡಲು ಹಾಗೂ ಅವುಗಳನ್ನು ರಫ್ತು ಮಾಡಲು ಅನುಕೂಲವಾಗಲಿದೆ’ ಎಂದರು.

‘ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಯೋಜನೆ ಜಾರಿಗೆ ತಂದಿದ್ದು, ರಾಜ್ಯದಲ್ಲಿನ ಮೀನುಗಾರರಿಗೆ ಈ ಯೋಜನೆಯಡಿಯಲ್ಲಿ ಮೀನುಗಾರಿಕೆ ಮಾಡಲು ಅನುಕೂಲವಾಗುವಂತೆ ಒಂದು ನೂರು ಬೋಟ್‌ಗಳನ್ನು ಒದಗಿಸಲು ಬಜೆಟ್‌ನಲ್ಲಿ ಅವಕಾಶ ಒದಗಿಸಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಭೀಮಾ ನದಿಯಿಂದ ಹಾಗೂ ಅಕ್ಕಪಕ್ಕ ಕೆರೆಗಳಿಂದ ಹಿಡಿದ ಮೀನುಗಳನ್ನು ಇಲ್ಲಿಯೇ ಮಾರಾಟ ಮಾಡಲು ಮೀನು ಮಾರುಕಟ್ಟೆ ತೆರೆಯಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಚಿವರು  ಸಲಹೆ ನೀಡಿದರು.

‘ಮೀನುಗಾರರು ಹಾಗೂ ಖರೀದಿದಾರಿಗೆ ಅನುಕೂಲ ಕಲ್ಪಿಸಲಾಗಿದ್ದು, ಮಾರುಕಟ್ಟೆಗೆ ಬಂದು ಸೂಕ್ತ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗಲಿದೆ’ ಎಂದರು.

‘ಮೀನು ಮಾರುಕಟ್ಟೆಯಲ್ಲಿ ಮೀನುಗಾರರು ಮಾರಾಟಕ್ಕೆ ತರುವ ಮೀನುಗಳು ಕೆಡದಂತೆ ಇರಿಸಲು ಶೀಥಲೀಕರಣ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೀನಿ‌ನ ತಾಜಾತನ ಕಾಪಾಡಬಹುದಾಗಿದೆ’ ಎಂದರು.

ಮಂಗಳೂರು ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ಆರ್ ನಾಯ್ಕ್‌, ಕೃಷ್ಣಾ ಕಾಡಾ ಭೀಮರಾಯನಗುಡಿ ಶರಣಪ್ಪ ತಳವಾರ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ಮೀನುಗಾರಿಕೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು