ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ– ರೈತರ ಖಾತೆಗೆ ನೇರ ಹಣ: ಸಚಿವ ಕೋಟ

ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
Last Updated 6 ಫೆಬ್ರುವರಿ 2023, 21:40 IST
ಅಕ್ಷರ ಗಾತ್ರ

ಯಾದಗಿರಿ: ‘ರಾಜ್ಯದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ರೈತರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿಕೊಂಡರೆ ನೇರವಾಗಿ ಅವರ ಖಾತೆಗೆ ಹಣ ಸಂದಾಯ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಲ್ಲೂಕಿನ ಮುದ್ನಾಳ ಗ್ರಾಮದಲ್ಲಿ ಸೋಮವಾರ ರೈತ ಈಶ್ವರಪ್ಪ ಮುದ್ನಾಳ ಅವರ 1 ಎಕರೆ 30 ಗುಂಟೆ ಜಮೀನಿನಲ್ಲಿ ಆದಿ ಜಾಂಬವ ಅಭಿವೃದ್ಧಿ ನಿಗಮದ ಸೌಲಭ್ಯದಡಿ ಕೊಳವೆ ಬಾವಿ ಕೊರೆಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗೊಂದಲಗಳಿಲ್ಲದೇ ರೈತರು ತಾವು ಬಯಸಿದ ಗುತ್ತಿಗೆದಾರರಿಂದ ಕೊಳವೆ ಬಾವಿ ಕೊರೆಯಿಸಿ
ಕೊಳ್ಳಬಹುದು. ಇದೇ ಮೊದಲ ಬಾರಿಗೆ ಈ ರೀತಿ ವಿನೂತನ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಜಮೀನಿನಲ್ಲಿ ನೀರು ಲಭ್ಯವಾದ ತಕ್ಷಣ ರೈತರ ಖಾತೆಗೆ ಹಣ ಜಮೆಯಾಗಲಿದ್ದು, ಇದು ಮೋಟಾರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ನೆರವಾಗಲಿದೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು, ಅಧಿಕಾರಿಗಳು ಪರಿಶಿಷ್ಟ ಜಾತಿಯ ಹಣಮಂತ ಎಂಬುವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಸಿರಾ, ಉಪ್ಪಿಟು, ಇಡ್ಲಿ ಮ ವಡಾ ಹೋಟೆಲ್‌ನಿಂದ ತರಲಾಗಿತ್ತು. ಸೂಸಲಾ, ಮಿರ್ಜಿ
ಬಜ್ಜಿ ಮನೆಯಲ್ಲಿ ತಯಾರಿಸಲಾಗಿತ್ತು.

ಬಳಕೆಯಾಗದ ಕೆಕೆಆರ್‌ಡಿಬಿ ಅನುದಾನ: ಸಿದ್ದರಾಮಯ್ಯ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹ 3 ಸಾವಿರ ಕೋಟಿ ಅನುದಾನ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಅದರಲ್ಲಿ ಖರ್ಚಾಗಿದ್ದು ಬರೀ ₹ 213 ಕೋಟಿ. ಉಳಿದ ಶೇ 93 ಅನುದಾನ ನಿರರ್ಥಕವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕಮಲಾಪುರದಲ್ಲಿ ಸೋಮವಾರ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಕೆಆರ್‌ಡಿಬಿಗೆ ಕೊಟ್ಟ ಅನುದಾನದಲ್ಲಿ ಶೇ 7.1ರಷ್ಟು ಹಣ ಮಾತ್ರ ಖರ್ಚಾಗಿದೆ. ಶೇ 93ರಷ್ಟು ಅನುದಾನ ಬಳಕೆಗೆ ಕ್ರಿಯಾಯೋಜನೆ ಸಿದ್ಧವಾಗಿಲ್ಲ’ ಎಂದರು.

ಇದಕ್ಕೂ ಮುನ್ನ ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾದ ಕಾಮಗಾರಿಗಳನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಬರುತ್ತಿದ್ದಾರೆ. ಬಿಜೆಪಿಯವರಿಗೆ ಮೋದಿ ಅವರೇ ಬಂಡವಾಳ. ಅವರು ರಾಜ್ಯಕ್ಕೆ ಆಗಾಗ್ಗೆ ಬಂದರೆ, ಲಾಭವಾಗುತ್ತದೆ ಎಂಬ ಭಾವನೆ ಬಿಜೆಪಿ ನಾಯಕರಲ್ಲಿದೆ. ಅವರಿಗೆ ಸೋಲಿನ ಭೀತಿ
ಮೂಡಿದೆ’ ಎಂದರು.

ಆರ್‌.ಅಶೋಕಗಿಂತ ಮೊದಲು ರಾಜಕಾರಣಕ್ಕೆ ಬಂದಿದ್ದೇನೆ. 1978ರಿಂದ ರಾಜಕಾರಣದಲ್ಲಿ ಇದ್ದೇನೆ. ನನಗಿದು ಕೊನೆಯ ಚುನಾವಣೆಯೆಂದು ಹೇಳಲು ಅಶೋಕಗೆ ಯಾವ ನೈತಿಕತೆ ಇದೆಯೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT