ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಚಿನ್ನ, ಬೆಳ್ಳಿ ಅಂಗಡಿಗಳು ಭಣಭಣ

ಮದುವೆ ಸಿಸನ್ ಮುಗಿದ ನಂತರ ಚಿನ್ನ, ಬೆಳ್ಳಿ ಅಂಗಡಿ ಓಪನ್‌, ಬಾರದ ಗ್ರಾಹಕರು
Last Updated 24 ಜೂನ್ 2021, 5:29 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್‌ನಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳು ಮದುವೆ ಸಿಸನ್‌ ಮುಗಿದ ಮೇಲೆ ಅಂಗಡಿ ತೆಗೆದಿದ್ದು, ಗ್ರಾಹಕರಿಲ್ಲದೆ ಭಣಗುಡುತ್ತಿವೆ.

ಕೊರೊನಾ ಸೋಂಕಿನಿಂದ ಎರಡು ವರ್ಷದಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳು ಸೂಕ್ತ ಸಮಯದಲ್ಲಿ ವ್ಯಾಪಾರವೇ ಇಲ್ಲದೆ ಕಂಗಲಾಗಿದ್ದಾರೆ.

ಏಪ್ರಿಲ್‌, ಮೇ ತಿಂಗಳನಲ್ಲಿ ಹೆಚ್ಚು ಮದುವೆಗಳು ಜರುಗುವುದರಿಂದ ಆ ಸಮಯದಲ್ಲೇ ಅಧಿಕ ವ್ಯಾಪಾರವಿರುತ್ತದೆ. ಆದರೆ, ಕಳೆದ ಎರಡು ವರ್ಷಗಳಲ್ಲಿಯೂ ಕೊರೊನಾ ಕಾರಣದಿಂದ ಲಾಕ್‌ಡೌನ್‌ ವಿಧಿಸಿದ್ದರಿಂದ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಒಂದೂವರೆ ತಿಂಗಳಿಗೂ ಹೆಚ್ಚು ದಿನ ವ್ಯಾಪಾರವಿಲ್ಲದೆ ಬಂದ್‌ ಮಾಡಿದ್ದರಿಂದ ಗ್ರಾಹಕರು ಇತ್ತ ಬರುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

ಆರ್ಡರ್‌ ಬರುತ್ತಿಲ್ಲ: ಮೊದಲೆಲ್ಲ ಗ್ರಾಹಕರು ಮುಂಚಿತವಾಗಿ ತಮಗೆ ಬೇಕಾದ ಆಕಾರಗಳನ್ನು ಮಾಡಿಸಲು ನಿಗದಿ ಮಾಡುತ್ತಿದ್ದರು. ಆದರೆ, ಈಗ ಯಾವುದೇ ಆರ್ಡರ್‌ ಬರುತ್ತಿಲ್ಲ.

‘ಸಾರ್ವಜನಿಕರು ಬಜಾರ್‌ ತುಂಬಾ ಓಡಾಡುತ್ತಿದ್ದಾರೆ. ಆದರೆ, ಚಿನ್ನ, ಬೆಳ್ಳಿ ಅಂಗಡಿಯತ್ತ ಬರುತ್ತಿಲ್ಲ. ಇದರಿಂದ ವ್ಯಾಪಾರ ಡಲ್‌ ಆಗಿದೆ’ ಎಂದು ಚಿನ್ನದ ವ್ಯಾಪಾರಿ ಉದಯ ನಾಗೂರ ಹೇಳುತ್ತಾರೆ.

ಕೃಷಿ ಚಟುವಟಕೆಯಲ್ಲಿ ಮಗ್ನ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಯಾಗಿದ್ದು, ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹಳ್ಳಿಯ ಜನರು ನಗರಗಳತ್ತ ಮುಖ ಮಾಡಿದರೆ ಬೀಜ, ಗೊಬ್ಬರ, ಬಿತ್ತನೆಗೆ ಸಂಬಂಧಿಸಿದ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜುವೆಲ್ಲರಿಗೆ ಅಂಗಡಿ ಬರುವುದು ಮತ್ತೆ ತಮ್ಮ ಬೆಳೆ ಬಂದಾಗ ಮಾತ್ರವೇ. ಹೀಗಾಗಿ ವ್ಯಾಪಾರವೂ ಇಲ್ಲದಂತಾಗಿದೆ.

ಮುಗಿದ ವಿವಾಹ ಮೂಹೂರ್ತ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಕದ್ದುಮುಚ್ಚಿ ಮೂಹೂರ್ತ ಪ್ರಕಾರ ಮದುವೆಗಳು ನಡೆದಿವೆ. ಈಗ ಮೂಹೂರ್ತವೂ ಇಲ್ಲದಿದ್ದರಿಂದ ಮದುವೆಗಾಗಿ ಖರೀದಿ ಮಾಡುವವರು ಇಲ್ಲದಂತಾಗಿದೆ.

‘ಈ ತಿಂಗಳ 27ರ ವರೆಗೆ ಮಾತ್ರ ಮೂಹೂರ್ತ ಇದೆ. ಹೀಗಾಗಿ ವ್ಯಾಪಾರವೇ ಇಲ್ಲ. ಅಲ್ಲದೆ ಸಂಜೆ 5 ಗಂಟೆ ತನಕ ಮಾತ್ರ ವಹಿವಾಟಿಗೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಜನರು ಇತ್ತ ಬರುತ್ತಿಲ್ಲ. ಬುಧವಾರ 10 ಗ್ರಾಂ ಚಿನ್ನ ₹48,800 ಇದ್ದರೆ ಬೆಳ್ಳಿ 10 ಗ್ರಾಂ ₹710, 1 ಕೆಜಿ ₹71 ಸಾವಿರ ಇದೆ ಎಂದು’ ಜುವೆಲ್ಲರಿ ವ್ಯಾಪಾರಿಗಳು ತಿಳಿಸಿದರು.

ತೆಲಂಗಾಣದ ವ್ಯಾಪಾರಿಗಳಿಗೆ ಲಾಭ
ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯನ್ನು ನಿಯಂತ್ರಿಸಲು ಏಪ್ರಿಲ್‌ ಕೊನೆ ವಾರದಲ್ಲಿ ಲಾಕ್‌ಡೌನ್‌ ಮಾಡಲಾಯಿತು. ಅಂದಿನಿಂದ ಚಿನ್ನದ ಅಂಗಡಿಗಳಿಗೂ ಬೀಗ ಹಾಕಲಾಯಿತು. ಆದರೆ, ನೆರೆಯ ತೆಲಂಗಾಣ ರಾಜ್ಯದಲ್ಲಿ ತಡವಾಗಿ ಲಾಕ್‌ಡೌನ್‌ ಘೋಷಣೆ ಮಾಡಲಾಯಿತು. ಆದರೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ ಜಿಲ್ಲೆಯ ಜನ ನೆರೆಯ ರಾಜ್ಯಕ್ಕೆ ತೆರಳಿ ಚಿನ್ನ ಖರೀದಿ ಮಾಡಿದರು ಎಂದು ಜಿಲ್ಲೆಯ ಚಿನ್ನದ ವ್ಯಾಪಾರಿಗಳ ಮಾತಾಗಿದೆ.

‘ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಿದ ವೇಳೆ ನಾರಾಯಣಪೇಟ್‌ ಇನ್ನಿತರ ಸ್ಥಳಗಳಲ್ಲಿ ಚಿನ್ನದ ಅಂಗಡಿಗಳನ್ನು ತೆಗೆಯಲಾಗಿತ್ತು. ಆದ್ದರಿಂದ ನಮ್ಮ ಬಳಿಗೆ ಬರುತ್ತಿದ್ದ ಗ್ರಾಹಕರು ಅತ್ತ ತೆರಳಿದರು. ಇದರಿಂದ ನಮಗೆ ನಷ್ಟ ಉಂಟಾಯಿತು. ತೆಲಂಗಾಣದ ವ್ಯಾಪಾರಿಗಳಿಗೆ ಲಾಭವಾಯಿತು’ ಎನ್ನುತ್ತಾರೆ ಚಿನ್ನದ ವ್ಯಾಪಾರಿ ಅಶೋಕ ಚಂಡ್ರಕಿ.

*
ಲಾಕ್‌ಡೌನ್‌ನಿಂದ ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಬಹುದೊಡ್ಡ ಒಡೆದ ಬಿದ್ದಿದೆ. ಇದರಿಂದ ವ್ಯಾಪಾರಿಗಳ ಜೀವನ ಅಸ್ತವ್ಯಸ್ತವಾಗಿದೆ.
-ಅಶೋಕ ಚಂಡ್ರಕಿ, ಜುವೆಲ್ಲರಿ ಅಸೋಸಿಷನ್‌ ಅಧ್ಯಕ್ಷ

*
ಲಾಕ್‌ಡೌನ್‌ ತೆರವಿನ ನಂತರ ಒಂದು ದಿನ ಅಂಗಡಿ ಸ್ವಚ್ಛಗೊಳಿಸುವ ಕೆಲಸವೇ ಆಗಿದೆ. ಈಗ ಶೇ 10ರಷ್ಟು ಮಾತ್ರ ವ್ಯಾಪಾರ ಆಗುತ್ತಿದೆ.
-ಉದಯ ನಾಗೂರ, ಜುವೆಲ್ಲರಿ ವ್ಯಾಪಾರಿ

*
ಮದುವೆ ಸಿಸನ್‌ನಲ್ಲಿ ವ್ಯಾಪಾರವೇ ಇಲ್ಲದಂತಾಯಿತು. ಅಂಗಡಿಯಲ್ಲಿ 7 ಜನ ಕೆಲಸ ಮಾಡುತ್ತಿದ್ದು, ಅವರಿಗೆ ವೇತನ ನೀಡಿ ಆಹಾರ ಕಿಟ್‌ ನೀಡಲಾಗಿದೆ.
-ಕವಿತಾ ವಿನಾಯಕ ಪಾಟೀಲ, ಜುವೆಲ್ಲರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT