ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಚರ್ಚ್‌ಗಳಲ್ಲಿ ಗುಡ್‌ ಫ್ರೈಡೇ ಸಂಭ್ರಮ

ಯೇಸು ಕ್ರಿಸ್ತನು ಆಡಿರುವ 7 ಮಾತುಗಳ ಧ್ಯಾನ; ವಿಶೇಷ ಹಾಡುಗಳು, ಪ್ರಾರ್ಥನೆ
Last Updated 3 ಏಪ್ರಿಲ್ 2021, 3:22 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತರು ಯೇಸುಕ್ರಿಸ್ತನು ಮರಣ ಅನುಭವಿಸಿದ ದಿನದ ದ್ಯೋತಕವಾಗಿ ಗುಡ್‌ ಫ್ರೈಡೇ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ನಗರದ ಕೇಂದ್ರ ಮೆಥೋಡಿಸ್ಟ್‌ ಚರ್ಚ್‌, ತಾತ ಸೀಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್‌ ಚರ್ಚ್, ಅಂಬೇಡ್ಕರ್‌ ನಗರ ಮೆಥೋಡಿಸ್ಟ್‌ ಸೇರಿದಂತೆ ವಿವಿಧ ಸ್ವತಂತ್ರ ಚರ್ಚ್‌ಗಳಲ್ಲೂ ಶುಭ ಶುಕ್ರವಾರ ಆಚರಣೆ ಮಾಡಲಾಯಿತು.

ಪ್ರತಿ ಚರ್ಚ್‌ಗಳಲ್ಲೂ ಯೇಸುಕ್ರಿಸ್ತನು ಶಿಲುಬೆ ಮೇಲೆ ಆಡಿರುವ 7 ಮಾತುಗಳನ್ನು ಧ್ಯಾನ ಮಾಡಲಾಯಿತು. ಒಂದು ಮಾತು ಧ್ಯಾನ ಮಾಡಿದ ನಂತರ ವಿಶೇಷ ಹಾಡು, ಪ್ರಾರ್ಥನೆ ನಡೆಯಿತು.

ಚರ್ಚ್‌ನ ಸಭಾಪಾಲಕರಲ್ಲದೆ ಚರ್ಚ್‌ನ ಸದಸ್ಯರು ಕೂಡ ಯೇಸು ಕ್ರಿಸ್ತನು ಶಿಲುಬೆ ಮೇಲೆ ಆಡಿರುವ ಮಾತುಗಳನ್ನು ಧ್ಯಾನ ಮಾಡುವ ಮೂಲಕ ಶುಭ ಶುಕ್ರವಾರದ ಕೂಟ ನಡೆಯಿತು.

ಶುಕ್ರವಾರ ಬೆಳಿಗ್ಗೆ 11.30ರಿಂದ ಆರಂಭವಾದ ಪ್ರಾರ್ಥನೆ ಕೂಟ ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಯಿತು. ಆ ನಂತರ ಕೆಲ ಚರ್ಚ್‌ಗಳಲ್ಲಿ ಸಿರಾ, ಉಪ್ಪಿಟು, ಮಜ್ಜಿಗೆ, ನಿಂಬೆ ಪಾನಕ, ಹಣ್ಣು ಹಂಪಲು ವಿತರಿಸಲಾಯಿತು. ಈ ಮೂಲಕ ಕಳೆದ 40 ದಿನಗಳಿಂದ ಆಚರಿಸಿಕೊಂಡ ಬಂದ ಉಪವಾಸ ವ್ರತ ಕೊನೆಗೊಳಿಸಲಾಯಿತು.

ಯೇಸುಕ್ರಿಸ್ತನ ಜೀವನ ಅನುಸರಿಸಿ
ಈ ವೇಳೆ ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವೆರಂಡ್‌ ಸತ್ಯಮಿತ್ರ ಮಾತನಾಡಿ, ‘ಯೇಸುಕ್ರಿಸ್ತನು 2000 ಸಾವಿರ ವರ್ಷಗಳ ಹಿಂದೆ ಭೂಲೋಕಕ್ಕೆ ಮನುಷ್ಯ ಅವತಾರ ತಾಳಿ ಬಂದನು. ಮನುಷ್ಯನಂತೆ ಲೋಕದಲ್ಲಿ ಜೀವಿಸಿದನು. ಆದರೆ, ಪಾಪ ಮಾತ್ರ ಮಾಡಲಿಲ್ಲ. ಆದರೂ ಆಗಿನ ರೋಮ್‌ ಸಾಮ್ರಾಜ್ಯದಲ್ಲಿ ಯೆಹೂದ್ಯರು ಆತನನ್ನು ಶಿಲುಬೆಯ ಮರಣಕ್ಕೆ ಒಪ್ಪಿಸಿದರು. ಆದರೆ, ಆತನು ಮೂರು ದಿನಗಳ ನಂತರ ಪುನರುತ್ಥಾನವಾದನು. ಹೀಗಾಗಿ ಕ್ರೈಸ್ತರು ಕೂಡ ಲೋಕದಲ್ಲಿ ಇರುವಾಗ ಕ್ರಿಸ್ತನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಬಾರದು. ಕ್ರಿಸ್ತನಂತೆ ಜೀವನ ಮಾಡಬೇಕು’ ಎಂದು ಸಂದೇಶ ನೀಡಿದರು.

ಸಹಾಯಕ ಸಭಾಪಾಲಕ ರೆವೆರೆಂಡ್‌ ಯೇಸುನಾಥ ನಂಬಿ ಮಾತನಾಡಿ, ‘ಕಳೆದ ವರ್ಷ ಕೋವಿಡ್‌ ಕಾರಣದಿಂದ ಮನೆಗಳಲ್ಲಿ ಶುಭ ಶುಕ್ರವಾರದ ಪ್ರಾರ್ಥನೆ ಕೂಟ ಮಾಡಿಕೊಳ್ಳಬೇಕಾಯಿತು. ಈ ವರ್ಷ ಚರ್ಚ್‌ನಲ್ಲಿ ಕ್ರೈಸ್ತರು ಸೇರಿ ಆರಾಧನೆ ಮಾಡುವಂತೆ ಆಗಿದೆ’ ಎಂದರು.

ಈ ವೇಳೆ ಡಾ. ಸುನಿಲ್‌ ಕುಮಾರ ರೆಡ್‌ಸನ್‌, ಬಾಲಮಿತ್ರ ಎಬೆಲ್‌, ದೀಲಿಪ್‌, ಶದ್ರಕ್‌ ಬಡಿಗೇರಾ, ಉದಯ, ಸುನಂದಾ, ಪ್ರೀತಿ ಸ್ನೇಹಲತಾ, ಲಲಿತಾ ಡೇವಿಡ್‌ ಕೋಟಗೇರಾ ಸೇರಿದಂತೆ ಪುರುಷರು, ಮಹಿಳೆಯರು ಚಿಕ್ಕಮಕ್ಕಳು ಇದ್ದರು.

ಭಾನುವಾರ ಈಸ್ಟರ್‌ ಹಬ್ಬ
ಪುನರುತ್ಥಾನದ ಹಬ್ಬದ ಅಂಗವಾಗಿ ಭಾನುವಾರ ಚರ್ಚ್‌ಗಳಲ್ಲಿ ವಿಶೇಷ ಆರಾಧನೆ ಕೂಟ ಆಯೋಜಿಸಲಾಗಿದೆ. ಬೆಳಿಗ್ಗೆ 5 ಗಂಟೆಗೆ ಸೂರ್ಯೋದಯ ಆರಾಧನೆ, 9.30ಕ್ಕೆ ಪುನರುತ್ಥಾನ ಹಬ್ಬದ ಆರಾಧನೆ ಕೂಟ ನಡೆಯಲಿದೆ.ಈಸ್ಟರ್‌ ಹಬ್ಬ ಯೇಸು ಕ್ರಿಸ್ತನು ಮೂರನೇ ದಿನದಲ್ಲಿ ಎದ್ದು ಬಂದಿರುವ ದಿನವೆಂದು ಸಂಭ್ರಮಿಸುವ ದಿನವಾಗಿದೆ. ಹಳ್ಳಿಗಳಲ್ಲಿ ಬೆಳಗಿನ ಜಾವ ಬೆಟ್ಟ, ಗುಡ್ಡಗಳಿಗೆ ತೆರಳಿ ಪ್ರಾರ್ಥನೆ ಮಾಡುವ ಪರಿಪಾಟವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT