ಮಂಗಳವಾರ, ಸೆಪ್ಟೆಂಬರ್ 28, 2021
23 °C

ಮೋಹಕ ಕಳೆಯ ಮಾವಿನ ಕೆರೆ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಬುದ್ಧ ಮಲಗಿರುವ ದೃಶ್ಯದಂತೆ ಕಾಣುವ ಬೆಟ್ಟದಿಂದ ಬೀಳುವ ಮಳೆ ನೀರು ತಡೆಯಲು ನಿರ್ಮಿಸಿದ ಮಾವಿನ ಕೆರೆ ಪಟ್ಟಣದ ಜನತೆಯ ಜೀವ ನಾಡಿಯಾಗಿದೆ. ಇಲ್ಲಿ ಸಂಗ್ರಹವಾದು ನೀರು ಸುತ್ತಲಿನ ಪ್ರದೇಶದ ಅಂತರ್ಜಲದ ಮಟ್ಟ ಹೆಚ್ಚಿಸಿದೆ. ಬೇಸಿಗೆಯಲ್ಲಿ ಕೆರೆಯಲ್ಲಿ ನೀರಿದ್ದರೆ ಸಾಕು ಪಟ್ಟಣದ ನಿವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಬಾಧಿಸದು.

ಮಳೆಗಾಲ ಬಂತೆಂದರೆ ಬೆಟ್ಟಕ್ಕೆ ಹೊಸ ಕಳೆ ಬರುತ್ತದೆ. ಅಲ್ಲಲ್ಲಿ ಬೆಳೆದು ನಿಂತ ಸೀತಾಫಲ ಗಿಡ, ಬೇವು, ಕಾರೆ ಹಣ್ಣಿನಂತಹ ಬಗೆಯ ಗಿಡಗಳು ಕಂದ್ದು ಬಣ್ಣದ ಕಲ್ಲಿನ ಬೆಟ್ಟಕ್ಕೆ ‌ಹಸಿರು ಹೊದಿಕೆ ಹೊದಿಸಿದಂತೆ ಕಾಣುಸುತ್ತದೆ. ಕಳೆದ 15 ದಿನಗಳಿಂದ ಮಳೆ ಸುರಿಯದ ಕಾರಣ, ಹಸಿರು ಸ್ವಲ್ಪ ಕಳೆಗುಂದಿದ್ದು, ಬೆಟ್ಟದಿಂದ ಹರಿದು ಬರುವ ನೀರಿನ ಪ್ರಮಾಣ ಇಳಿಮುಖವಾಗಿದೆ.

ಸಿದ್ದಲಿಂಗೇಶ್ವರ ಬೆಟ್ಟದ ಮೇಲಿಂದ ಝುಳು ಝುಳು ಹರಿದು ಬರುವ ನೀರಿನ ನಿನಾದ ಹಸಿರಿನ ನಡುವೆ ವೀಣೆಯಂತೆ ಕೇಳುತ್ತದೆ. ಬೀಳುವ ನೀರು  ಸಂಗ್ರಹಿಸಲು ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಮಳೆ ಹೆಚ್ಚಾತದೆ ನೀರು ಹರಿಯುವ ಶಬ್ಧ ಮತ್ತು ಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ. ಚೆಕ್‌ ಡ್ಯಾಂನಲ್ಲಿ ರಜೆ ವೇಳೆಯಲ್ಲಿ ಮಕ್ಕಳೊಂದಿಗೆ ಪೊಷಕರು ಈಜಾಡಿ ಆನಂದಿಸುತ್ತಾರೆ. ಬೆಟ್ಟವನ್ನು ಹತ್ತಿ ಹಸಿರಿನ ಸೊಬಗು ಕಣ್ಣು ತುಂಬಿಸಿಕೊಂಡು ಊಟ ಹಾಗೂ ವಿಶ್ರಾಂತಿ ಪಡೆಯುತ್ತಾರೆ. ಇದು ಪ್ರತಿ ವಾರದ ರಜಾ ದಿನಗಳಲ್ಲಿ ಸಾಮಾನ್ಯವಾಗಿದೆ ಎನ್ನುತ್ತಾರೆ ನಿವಾಸಿ ಸುಭಾಷ ರಾಂಪುರ.

ಬೆಟ್ಟದ ಇಳಿಜಾರಿನಲ್ಲಿ ವಿಶಾಲವಾದ ನಾಗರಕೆರೆ ಇದೆ. ಮಳೆಯ ನೀರು ಕೆರೆಯ ಒಡಲು ಸೇರುತ್ತದೆ. ಆದರೆ ಕೆರೆಯ ಸುತ್ತ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗಿದೆ. ಇಡೀ ಪ್ರದೇಶಕ್ಕೆ ಇಲ್ಲಿನ ತ್ಯಾಜ್ಯ ಕಳಂಕವಾಗಿದೆ. ಸೂಕ್ತ ರಕ್ಷಣೆ ಇಲ್ಲದೆ ಕೆರೆಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ಕೆರೆ ಅಭಿವೃದ್ದಿಗೆ ಅನುದಾನ ಬಂದರು ಅದು ಸಮರ್ಪಕವಾಗಿ ಸದ್ಭಳಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಾನಪ್ಪ ಹಡಪದ.

ಹೈದರಾಬಾದ್‌ ನಿಜಾಮರ ಆಳ್ವಿಕೆಯ ವೇಳೆ ಇಲ್ಲಿನ ಪ್ರದೇಶದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಇದಕ್ಕೆ ಸಾಕ್ಷಿ ಎಂಬುವಂತೆ ಪ್ರತಿ ಗ್ರಾಮಕ್ಕೆ ಹೊಂದಿಕೊಂಡಂತೆ ಕೆರೆಗಳನ್ನು ನಿರ್ಮಿಸಿದ್ದರು. ಅವುಗಳ ಸಂರಕ್ಷಣೆಗೆ ಆಯಾ ಗ್ರಾಮದ ಹಳ್ಳಿ ನಕ್ಷೆ (ವಿಲೇಜ್ ಮ್ಯಾಪ್) ದಾಖಲೆ ನಮೂದಿಸಿ, ಆ ಮೂಲಕ ಮುಂದಿನ ಪೀಳಿಗೆ ಉಳಿಯಲಿ ಎಂಬ ದೂರ ದೃಷ್ಟಿ ಹೊಂದಿದ್ದರು. ಈಗ ನಾವು ನಾಗರ ಕೆರೆ ಹಾಗೂ ಮಾವಿನ ಕೆರೆ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಪರಿಸರ ಪ್ರೇಮಿಗಳು.

***
ಕೆರೆಗಳ ಸಂರಕ್ಷಣೆಗೆ ನಗರಸಭೆ ಮುಂದಾಗಬೇಕು. ಇದರಲ್ಲಿ ಸಾರ್ವಜನಿಕರ ಪಾತ್ರವು ಮುಖ್ಯವಾಗಿದೆ. ಹಸಿರಿನಿಂದ ಕೂಡಿದ ಬೆಟ್ಟದ ಪ್ರದೇಶದಲ್ಲಿ ಸೌಲಭ್ಯ ಒದಗಿಸಬೇಕು.
-ಆರ್.ಚೆನ್ನಬಸ್ಸು ವನದುರ್ಗ,  ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.