ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪುಗಳು ತುಟ್ಟಿ: ಗ್ರಾಹಕರಿಗೆ ಹೊರೆ

ಎರಡು ವಾರಗಳಿಂದ ಏರಿಕೆಯಾಗುತ್ತಿರುವ ಸೊಪ್ಪುಗಳ ದರ
Last Updated 5 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಯಾದಗಿರಿ: ಪಾಲಕ್, ಮೆಂತ್ಯೆ, ಸಬ್ಬಸಗಿ, ರಾಜಗಿರಿ, ಪುಂಡಿಪಲ್ಯೆ ಇನ್ನಿತರ ಸೊಪ್ಪುಗಳ ಬೆಲೆ ಏರಿಕೆಯಾಗಿದೆ. ಎರಡು ವಾರಗಳಿಂದ ಸೊಪ್ಪುಗಳು ಹೆಚ್ಚು ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ದರ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಒಂದು ಕಟ್ಟು ಪಾಲಕ್‌ ಸೊಪ್ಪು ₹10‌ಕ್ಕೆ ಸಿಗುತ್ತದೆ. ಮೆಂತ್ಯೆ ₹30, ಪುಂಡಿಪಲ್ಯೆ ₹10, ರಾಜಗಿರಿ ₹10, ಸಬ್ಬಸಿಗಿ ₹10, ಕೋತಂಬರಿ ₹40 ರಂತೆ ಒಂದು ಕಟ್ಟು ಮಾರಾಟವಾಗುತ್ತಿದೆ. ಈರುಳ್ಳಿ ಸೊಪ್ಪು ಕೆಜಿಗೆ ₹80 ಇದೆ.

ಎರಡು ವಾರದ ಹಿಂದೆ ಪಾಲಕ್ ₹20ಕ್ಕೆ 2 ಕಟ್ಟು, ಮೆಂತ್ಯೆ ₹20ಕ್ಕೆ 1 ಕಟ್ಟು, ಪುಂಡಿಪಲ್ಯೆ ₹20ಕ್ಕೆ 6 ಕಟ್ಟು, ರಾಜಗಿರಿ ₹20ಕ್ಕೆ 4, ಕೋತಂಬರಿ 1 ಕಟ್ಟು ₹30 ಇತ್ತು.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ್ಗೆ ಮಳೆಯಾಗುತ್ತಿದೆ. ಇದರಿಂದ ಸೊಪ್ಪುಗಳು ಕೊಳೆತುಹೋಗುತ್ತಿವೆ. ಈ ಕಾರಣ ಸೊಪ್ಪುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ.

‘ಶ್ರಾವಣ ಮಾಸದಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿದೆ. ಮಳೆ ಕಾರಣದಿಂದ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ’ ಎನ್ನುತ್ತಾರೆ ಹಿರಿಯ ನಾಗರಿಕ ವಿಶ್ವನಾಥ ರೆಡ್ಡಿ.

ಬದನೆಕಾಯಿಗೆ ಭಾರಿ ಬೇಡಿಕೆ

ಬಿಳಿ ಬದನೆಕಾಯಿ ಕಳೆದ ವಾರದಿಂದ ಯಥಾಸ್ಥಿತಿ ದರ ಕಾಯ್ದುಕೊಂಡಿದೆ. ಕಳೆದ ವಾರ ₹120 ಇತ್ತು. ಈ ವಾರವೂ ಬೆಲೆ ಕಡಿಮೆಯಾಗಿಲ್ಲ. ಆದರೆ,ಕಂದು ಬಣ್ಣದಬದನೆಕಾಯಿ ಕೆಜಿಗೆ ₹80 ಇದೆ. ಬದನೆಗೆ ಹೆಚ್ಚಿಗೆ ಹುಳು ಬಾಧೆ ಇರುವುದರಿಂದ ಹೆಚ್ಚು ಆವಕ ಬರುತತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಪಡೆದುಕೊಂಡಿದೆ.

ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಮಾರುಕಟ್ಟೆಯಲ್ಲಿಟೊಮೆಟೊ, ಈರುಳ್ಳಿ ಬೆಲೆ ಇಳಿಕೆ ಕಂಡಿದೆ. ಎರಡು ಕೇಜಿಟೊಮೆಟೊ ಖರೀದಿಸಿದೆ ₹50, ಒಂದು ಕೇಜಿಗೆ 30 ಇದೆ. ಹೂಕೋಸ್ ಕಳೆದ ವಾರ ₹80 ಇತ್ತು. ಈ ವಾರ ₹60 ಇದೆ. ಈರುಳ್ಳಿಯೂ ₹20ರಿಂದ 25 ಕೆಜಿ ಇದೆ. ಇನ್ನುಳಿದಂತೆ ಬೇರೆ ತರಕಾರಿ ಬೆಲೆಸ್ಥಿರವಾಗಿದೆ.

ಔಷಧಿ ಗುಣವುಳ್ಳ ಕರ್ಚಿಕಾಯಿ

ಮಳೆಗಾಲದಲ್ಲಿ ಕಪ್ಪು ಮಣ್ಣಿನ ಭೂಮಿಯ ಹೊಲಗಳ ಬದುವಿನಲ್ಲಿ ಸಿಗುವ ಚಿಕ್ಕ ಚಿಕ್ಕ ಗಾತ್ರದ ಕರ್ಚಿಕಾಯಿ ಆಕರ್ಷಣೆಯಾಗಿದೆ. ಯಾದಗಿರಿಯ ರೈಲ್ವೆ ಸ್ಟೇಷನ್‌ ರಸ್ತೆಯ ಮಾರುಕಟ್ಟೆಯಲ್ಲಿ ಎರಡು ಬದುಗಳಲ್ಲಿ ಬುಟ್ಟಿಗಳಲ್ಲಿಕರ್ಚಿಕಾಯಿ ಇಟ್ಟು ಮಾರಲಾಗುತ್ತಿದೆ. ಚಿಕ್ಕ ಗಾತ್ರದ ಒಂದು ಲೋಟಕ್ಕೆ ₹20 ಇದೆ. ಮೂರು ಲೋಟ ಕರ್ಚಿಕಾಯಿಗೆ ₹ 50 ದರ ಇದೆ. ರಾಯಚೂರಿನಿಂದ ಕರ್ಚಿಕಾಯಿ ತಂದಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದರು.

ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದು, ಕರ್ಚಿಕಾಯಿ ಯಥೇಚ್ಛ ಸಿಗುತ್ತಿದೆ.ಮಳೆಗಾಲದಲ್ಲಿ ತನ್ನಷ್ಟಕ್ಕೇ ತಾನೇ ಬೆಳೆಯುವ ಕರ್ಚಿಕಾಯಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಇದನ್ನು ಚೆನ್ನಾಗಿ ಉರಿದು, ಸ್ವಲ್ಪ ಎಣ್ಣೆಯಲ್ಲಿ ಖಾರದಪುಡಿ, ಉಪ್ಪು, ಬೆಳ್ಳುಳ್ಳಿಯಲ್ಲಿ ಫ್ರೈ ಮಾಡಿ ಜೋಳದ ರೊಟ್ಟಿಯ ಜೊತೆ ಸವಿಯುತ್ತಾರೆ. ಕರ್ಚಿಕಾಯಿಯಲ್ಲಿ ಔಷಧಿ ಗುಣ ಇದೆ ಎಂದು ಹಿರಿಯರು ಹೇಳುತ್ತಾರೆ.

***

ಶಹಾಪುರದಿಂದ ತರಕಾರಿ ತರಿಸುತ್ತಿದ್ದೇವೆ. ದರ ಹೆಚ್ಚಳವಾಗಿದ್ದರಿಂದ ಗ್ರಾಹಕರಿಗೆ ನಾವು ಹೆಚ್ಚಿನ ದರಕ್ಕೆ ಮಾರಬೇಕಾದ ಅನಿವಾರ್ಯತೆ ಇದೆ

-ಮುಬೀನ್ ಶೇಕ್, ವ್ಯಾಪಾರಿ

***

ತರಕಾರಿ ಮಳಿಗೆಗಳಲ್ಲಿ ಸೊಪ್ಪುಗಳು ಸಿಗುತ್ತಿಲ್ಲ. ಸಿಕ್ಕಿದರೆ ಹೆಚ್ಚಿನ ದರ ಇದೆ. ಸೊಪ್ಪು ಬೇಕಾದವರು ಹೆಚ್ಚಿನ ಬೆಲೆಯಾದರೂ ಖರೀದಿಸುತ್ತೇವೆ

-ಚಂದಪ್ಪ ನಾಯ್ಕೊಡಿ, ಗ್ರಾಹಕ

***

ಹಳ್ಳಿಗಳಿಂದ ಸೊಪ್ಪುಗಳು ಬರುತ್ತಿಲ್ಲ. ಇದರಿಂದ ನಾವು ಮಹಾತ್ಮಗಾಂಧಿ ಮಾರುಕಟ್ಟೆಯಿಂದತಂದುಮಾರಾಟ ಮಾಡುತ್ತಿದ್ದೇವೆ. ಎರಡು ವಾರಗಳಿಂದ ಸೊಪ್ಪುಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ

-ನಾಗಮ್ಮ ಯಾದಗಿರಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT