ಭಾನುವಾರ, ಆಗಸ್ಟ್ 14, 2022
24 °C
ಒಂದೇ ಸಮುದಾಯಕ್ಕೆ ಸೇರಿದ 16 ಜನ ಕಾನ್‌ಸ್ಟೆಬಲ್‌ಗಳು ಕರ್ತವ್ಯ ನಿರ್ವಹಣೆ

ಶಹಾಪುರ ಠಾಣೆಯಲ್ಲಿ ಗುಂಪುಗಾರಿಕೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ‘ಶಹಾಪುರ ಠಾಣೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ 16 ಜನ ಕಾನ್‌ಸ್ಟೆಬಲ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ಐದು ವರ್ಷದಿಂದ ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಇಂದಿಗೂ ಬೇರೆಡೆ ವರ್ಗಾವಣೆ ಆಗಿಲ್ಲ’ ಎಂದು ಬಿಜೆಪಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ ಅವರು, ‘ಠಾಣಾ ವ್ಯಾಪ್ತಿಯ ನಾಲ್ವರು ಕಾನ್‌ಸ್ಟೆಬಲ್‌ಗಳು ಇಲ್ಲಿಯೇ ಇದ್ದಾರೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಯ ಕೆಲ ನ್ಯೂನ್ಯತೆ ಸರಿಪಡಿಸ ಬೇಕು.  ಪೊಲೀಸ್ ನಿಯಮಾವಳಿ ಪ್ರಕಾರ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಿಬ್ಬಂದಿಯನ್ನು ಅದೇ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬಾರದು. ಆದರೆ, ಇಲ್ಲಿನ ಠಾಣೆಯಲ್ಲಿ ನಾಲ್ವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಒಂದೇ ಠಾಣೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಕಾನ್‌ಸ್ಟೆಬಲ್ ಅವರನ್ನು ಬೇರೆಡೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಇದೇ ಠಾಣೆಯಲ್ಲಿ ಅವಧಿ ಮುಗಿದಿದ್ದರೂ  ಮೂವರು ಕಾನ್‌ಸ್ಟೆಬಲ್‌ಗಳು  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ದೂರಿನ ಕಾರಣ ವರ್ಗಾವಣೆಗೊಂಡಿದ್ದ ಕಾನ್‌ಸ್ಟೆಬಲ್ ಒಬ್ಬರು ಇದೇ ಠಾಣೆಗೆ ಮತ್ತೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಬರಹಗಾರರು (ರೈಟರ್) ಕಾನ್‌ಸ್ಟೆಬಲ್ ಅವರು ಬೇರೆಡೆ ವರ್ಗಾವಣೆ ಗೊಂಡಿದ್ದರೂ ಮತ್ತೆ ಕೆಲ ದಿನದಲ್ಲಿ ಠಾಣೆಗೆ ಹಾಜರಾಗಿದ್ದಾರೆ. ಇದರ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಒಂದೇ ಸಮುದಾಯದವರು ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಸಿಬ್ಬಂದಿಯ ನಡುವೆ ಗುಂಪುಗಾರಿಕೆ ನಡೆಯುತ್ತಿದೆ’ ಎಂದು ಜನತೆ ತಿಳಿಸಿದ್ದಾರೆ.

‘ಶಹಾಪುರ ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ 69 ಜನ ಇದ್ದಾರೆ. ಅದರಲ್ಲಿ ಪಿ.ಐ 1, ಪಿಎಸ್ಐ 3, ಎಎಸ್ಐ 6, ಜಮದಾರ 18, ಕಾನ್‌ಸ್ಟೆಬಲ್ 36, ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ 5 ಜನ ಇದ್ದಾರೆ. ಸಿಬ್ಬಂದಿ ಕೊರತೆ ಇಲ್ಲ. ಇಲ್ಲಿನ ಠಾಣೆಯಲ್ಲಿ ಕೆಲಸ ಮಾಡಲು ಹೆಚ್ಚಿನ ಸಿಬ್ಬಂದಿ ಆಸಕ್ತಿ ವಹಿಸುತ್ತಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಿದ್ದಲ್ಲದೆ, ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಆದಾಯದ ಮೂಲವು ಹೆಚ್ಚಾಗಿದ್ದರಿಂದ ಇಲ್ಲಿನ ಠಾಣೆಗೆ ಆಗಮಿಸಲು ಪೈಪೋಟಿಯೂ ಇದೆ’ ಎನ್ನುತ್ತಾರೆ ಕಾನ್‌ಸ್ಟೆಬಲ್ ಒಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು