ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ: ಬೋಧನೆ ಅತಿಥಿ ಉಪನ್ಯಾಸಕರ ಹೆಗಲಿಗೆ

ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚು
Last Updated 7 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಮತ್ತು ಪದವಿ, ಸ್ನಾತಕೋತ್ತರ ವಿಭಾಗಗಳಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಮೇಲೆ ಹೆಚ್ಚಿನ ಭಾರ ಬಿದ್ದಿದೆ.

ಜಿಲ್ಲೆಯಲ್ಲಿ 23 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಕಾಯಂ ಉಪನ್ಯಾಸಕರು ನಿಗದಿಪಡಿಸಿದ ಸಮಯಕ್ಕೆ ಕಾಲೇಜಿಗೆ ಆಗಮಿಸದೇ ಬೇಕಾಬಿಟ್ಟಿಯಾಗಿ ಆಗಮಿಸಿ 1 ಇಲ್ಲವೆ 2 ಕ್ಲಾಸ್ ತೆಗೆದುಕೊಂಡು ಹೋಗುತ್ತಾರೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಕಾಲೇಜು 9ಗಂಟೆಗಿದ್ದರೂ 11 ಗಂಟೆಗೆ ಕಾಯಂ ಉಪಸ್ಯಾಸಕರು ಬರುತ್ತಾರೆ ಎನ್ನುವ ಆರೋಪವಿದೆ.

‘ಬೇಗ ಬಂದು ಪಾಠ ಹೇಳಿ ಅಂದರೆ ನಮಗೆ ಉಲ್ಟಾ ಧಮಕಿ ಹಾಕುತ್ತಾರೆ. ನಾವು ಬೆಳಿಗ್ಗೆ 7 ಗಂಟೆಗೆ ಹಳ್ಳಿಯಿಂದ ಬರುತ್ತೇವೆ. ಆದರೆ, ಪಾಠ ಮಾಡಲು ಕಾಯಂ ಉಪನ್ಯಾಸಕರು ಬರುತ್ತಿಲ್ಲ. ಅತಿಥಿ ಉಪನ್ಯಾಸಕರು ಆಗಮಿಸಿ ಕಾಯಂ ಉಪನ್ಯಾಸಕರ ಪಾಠವನ್ನು ಬೋಧಿಸುತ್ತಾರೆ. ಯಾರ ಮುಂದೆ ನಮ್ಮ ಗೋಳುಹೇಳಬೇಕು’ ಎಂದು ಕೆಲ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

‘ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಾಗ ಕಾಲೇಜುಗಳಲ್ಲಿ ಜಾತಿ ಪ್ರಬಲವಾಗಿ ಕೆಲಸ ಮಾಡುತ್ತದೆ’ ಎಂದು ಅತಿಥಿ ಉಪನ್ಯಾಸಕರೊಬ್ಬರು ಹೇಳುತ್ತಾರೆ. ‘ಅವರ ಜಾತಿಯವರು ಇದ್ದರೆ ಕಡಿಮೆ ಅಂಕ ಪಡೆದಿದ್ದರೂ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅರ್ಹತೆ ಇದ್ದರೂ ಜಾತಿ ಲಾಬಿಯಿಂದ ದೂರ ಉಳಿಯಬೇಕಾಗುತ್ತದೆ’ ಎಂದು ಶಿಕ್ಷಣ ಪ್ರೇಮಿ ಯಲ್ಲಯ್ಯ ನಾಯಕ ವನದುರ್ಗ ಆರೋಪಿಸುತ್ತಾರೆ.

‘ಅತಿಥಿ ಮಹಿಳಾ ಉಪನ್ಯಾಸಕರಿಗೆ ಕೆಲ ಕಡೆ ಕಾಯಂ ಉಪನ್ಯಾಸಕರು ಪಾಠ ಬೋಧನೆ ವಿಷಯದಲ್ಲಿ ಒತ್ತಡ ಹೇರುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ಸರ್ಕಾರಿ ಕಾಯಂ ಉಪನ್ಯಾಸಕರಿಗಿದ್ದಂತೆ ಯಾವ ಸೌಲಭ್ಯವೂ ಇಲ್ಲ. ರಜೆಗಳು ಇಲ್ಲ. ಸೇವಾ ಭದ್ರತೆ ಯಾವುದೂ ಇಲ್ಲ. ಆದರೂ ಕಾಯಂ ಉಪನ್ಯಾಸಕರು ನಮ್ಮ ಮೇಲೆ ಒತ್ತಡ ಹಾಕಿ ಪಾಠ ಮಾಡಲು ಹೇಳುತ್ತಾರೆ. ಅವರ ಮಾತು ಕೇಳದಿದ್ದರೆ ನಮ್ಮನ್ನು ಗುರಿ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸದ ಅತಿಥಿ ಉ‍ಪನ್ಯಾಸಕಿಯೊಬ್ಬರು ಹೇಳುತ್ತಾರೆ.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 65 ಅತಿಥಿ ಉಪನ್ಯಾಸಕರು, 17 ಕಾಯಂ ಉಪನ್ಯಾಸಕರು ಇದ್ದಾರೆ. ಕಳೆದ ವರ್ಷ 117 ಅತಿಥಿ ಉಪನ್ಯಾಸಕರು ಇದ್ದರು. ಸ್ನಾತಕ 5 ವಿಭಾಗಗಳಿದ್ದು, ಸ್ನಾತಕೋತ್ತರ 11 ವಿಭಾಗಗಳಿವೆ. ಸ್ನಾತಕ ವಿಭಾಗದಲ್ಲಿ ಬಿಎ., ಬಿಎಸ್ಸಿ, ಬಿಸಿಎ, ಬಿ.ಕಾಂ, ಬಿಬಿಎಂ, ಸ್ನಾತಕೋತ್ತರ ವಿಭಾಗದಲ್ಲಿ ಎಂಎ, ಕನ್ನಡ, ಸಾಮಾಜಶಾಸ್ತ್ರ, ಇತಿಹಾಸಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರ, ಎಂ.ಕಾಂ, ಎಂಎಸ್‌ಡಬ್ಲ್ಯೂ, ಎಂಎಸ್ಸಿ ಭೌತಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್‌ ವಿಜ್ಞಾನ, ಇತ್ಯಾದಿ ವಿಭಾಗಗಳಿವೆ. ಸ್ನಾತಕ ವಿಭಾಗದಲ್ಲಿ 1,893 ವಿದ್ಯಾರ್ಥಿಗಳು, ಸ್ನಾತಕೋತ್ತರ ವಿಭಾಗದಲ್ಲಿ 443 ವಿದ್ಯಾರ್ಥಿಗಳಿದ್ದಾರೆ. 45 ಕೋಣೆಗಳಿವೆ. ವಿದ್ಯಾರ್ಥಿಗಳಿಗೆ ತಕ್ಕಂತೆ ಶೌಚಾಲಯ, ಕೋಣೆಗಳು ಇಲ್ಲ.

2 ಗಂಟೆಗೆ ಮರಳಿ ಗೂಡು: ಶಹಾಪುರ ನಗರದ ಸರ್ಕಾರಿ ಕಾಲೇಜಿನಲ್ಲಿ 20 ಕಾಯಂ ಉಪನ್ಯಾಸಕರು ಇದ್ದಾರೆ. ಅದರಲ್ಲಿ ಬಹುತೇಕ ಉಪನ್ಯಾಸಕರು ಸ್ಥಳೀಯ ತಾಲ್ಲೂಕಿನವರು ಆಗಿದ್ದಾರೆ. ಇನ್ನುಳಿದ ಕೆಲ ಉಪನ್ಯಾಸಕರು ಸುರಪುರ ತಾಲ್ಲೂಕಿನ ನಿವಾಸಿಗಳು ಆಗಿದ್ದಾರೆ. ಕಾಲೇಜಿನ ಸಮಯ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ಇದೆ. ಆದರೆ, ಕಾಯಂ ಉಪನ್ಯಾಸಕರು ಕಲಬುರಗಿ ಹಾಗೂ ಸುರಪುರದಲ್ಲಿ ಮನೆ ಮಾಡಿದ್ದು, ಅವರು ಆಗಮಿಸುವುದು ಬೆಳಿಗ್ಗೆ 11 ಗಂಟೆಯ ನಂತರ ಬಂದು ಒಂದಿಷ್ಟು ಪಾಠ ಮಾಡಿ ಮತ್ತೆ 2 ಗಂಟೆಗೆ ಮರಳಿ ಗೂಡು ಸೇರುತ್ತಾರೆ. ಇದನ್ನು ನಾವು ಪ್ರಶ್ನಿಸುವಂತೆ ಇಲ್ಲ ಎಂದು ವಿದ್ಯಾರ್ಥಿಗಳು ಅಸಹಾಯಕತೆಯನ್ನು ತೊಡಿಕೊಂಡರು.

ಕಾಲೇಜಿನಲ್ಲಿ 57 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಪದವಿ ಕಾಲೇಜಿನಲ್ಲಿ ವಿವಿಧ ವಿಭಾಗಗಳು ಸೇರಿ 1,433 ವಿದ್ಯಾರ್ಥಿಗಳು ಹಾಗೂ 867 ವಿದ್ಯಾರ್ಥಿನಿ ಯರು ಸೇರಿ ಒಟ್ಟು 2,300 ವಿದ್ಯಾರ್ಥಿಗಳ ದಾಖಲಾತಿ ಇದೆ. ಅದರಂತೆ ಸ್ನಾತಕೋತ್ತರ ಕಾಲೇಜಿನಲ್ಲಿ 154 ವಿದ್ಯಾರ್ಥಿಗಳು ಹಾಗೂ 115 ವಿದ್ಯಾರ್ಥಿನಿಯರು ಸೇರಿ ಒಟ್ಟು 269 ವಿದ್ಯಾರ್ಥಿಗಳ ಸಂಖ್ಯೆ ಇದೆ. ಕಾಲೇಜಿನಲ್ಲಿ ಸಿಬ್ಬಂದಿ ಕೊರತೆ ಇದೆ. 10 ವರ್ಷದಿಂದ ಕಾಲೇಜಿನಲ್ಲಿ ಕಾಯಂ ಪ್ರಾಚಾರ್ಯರು ಇಲ್ಲ. ಪ್ರಭಾರಿ ಹುದ್ದೆಯ ಹೊಣೆಗಾರಿಕೆಯನ್ನು ಉಪನ್ಯಾಸಕರು ಹೊರಬೇಕಾಗಿದೆ ಎನ್ನುತ್ತಾರೆ ಉಪನ್ಯಾಸಕರು ಒಬ್ಬರು.

ಕಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಹೆಚ್ಚಾಗಿ ಸ್ಥಳೀಯರಾಗಿದ್ದು. ಬೋಧನೆಗಿಂತ ಅನ್ಯ ಕೆಲಸದಲ್ಲಿ ಹೆಚ್ಚು ಮಗ್ನರಾಗಿದ್ದಾರೆ. ಕೆಲ ಉಪನ್ಯಾಸಕರು ಪಕ್ಕದ ತಾಲ್ಲೂಕಿನಲ್ಲಿ 10 ವರ್ಷ ಸೇವೆ ಸಲ್ಲಿಸಿ ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಪಾಠ ಹೇಳುವುದಕ್ಕಿಂತ ಮನೆಗೆ ಹೋಗುವುದರಲ್ಲಿ ಹೆಚ್ಚು ಉತ್ಸಾಹಕರಾಗಿದ್ದಾರೆ. ಕಾಯಂ ಉಪನ್ಯಾಸಕರನ್ನು ಯಾರು ಪ್ರಶ್ನಿಸುವಂತೆ ಇಲ್ಲ. ತಮ್ಮ ರಾಜಕೀಯ ಪ್ರಭಾವ ಬಳಸಿ ಕೊಂಡು ಕಾಲೇಜಿಗೆ ಆಗಮಿಸುವುದು ಅಪರೂಪ ವಾಗಿದೆ. ಲಕ್ಷಾಂತರ ಸಂಬಳ ಪಡೆಯುವ ಉಪನ್ಯಾಸಕರ ಬಗ್ಗೆ ಯಾವುದೇ ಮೃಧು ಧೋರಣೆ ತೆಗೆದುಕೊಳ್ಳದೆ ಕಾಲೇಜಿಗೆ ಚಕ್ಕರ್‌ ಹೊಡೆಯುವ ಉಪನ್ಯಾಸಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಹಾಗೂ ಕಾಲೇಜಿನ ಮೇಲ್ವಿಚಾರಣೆ ನಡೆಸುವ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜಿಗೆ ಆಗಾಗ ಭೇಟಿ ನೀಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಯಲ್ಲಯ್ಯ ನಾಯಕ ವನದುರ್ಗ ಮನವಿ ಮಾಡಿದ್ದಾರೆ.

***

ಕಾಯಂ ಉಪನ್ಯಾಸಕರ ಕೊರತೆ

ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಒಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 3 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ.

ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಎಂ.ಎ. ತರಗತಿಗಳು ನಡೆಯುತ್ತವೆ. 1,000 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಮಂಜೂರಿ ಉಪನ್ಯಾಸಕರ ಹುದ್ದೆಗಳು 38. ಕಾಯಂ ಉಪನ್ಯಾಸಕರು ಕೇವಲ 10. 21 ಜನ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗಿದೆ.

‘ಕಾಯಂ ಉಪನ್ಯಾಸಕರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಉಪನ್ಯಾಸಕರ ಕೊರತೆಯೂ ಇದೆ. ಹೀಗಾಗಿ ನಮ್ಮ ಮೇಲೆ ಹೆಚ್ಚಿನ ಒತ್ತಡ ಇದೆ’ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 660. ಇಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗಗಳಿವೆ. ಕಾಯಂ ಉಪನ್ಯಾಸಕರ ಸಂಖ್ಯೆ ಕೇವಲ 3. 8 ಜನ ಅತಿಥಿ ಉಪನ್ಯಾಸಕರಿದ್ದಾರೆ. ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ 131 ವಿದ್ಯಾರ್ಥಿಗಳಿಗೆ ಕೇವಲ ಒಬ್ಬರು ಕಾಯಂ ಉಪನ್ಯಾಸಕರಿದ್ದಾರೆ. ಇಲ್ಲಿ ಕಲಾ ವಿಭಾಗ ಮಾತ್ರ ಇದ್ದು, 5 ಜನ ಅತಿಥಿ ಉಪನ್ಯಾಸಕರಿದ್ದಾರೆ.

ರಂಗಂಪೇಟೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕಲಾ, ವಿಜ್ಞಾನ ವಿಭಾಗಗಳಿದ್ದು 280 ವಿದ್ಯಾರ್ಥಿಗಳಿದ್ದಾರೆ. 6 ಜನ ಕಾಯಂ, 4 ಜನ ಅತಿಥಿ, ಒಬ್ಬರು ಎರವಲು ಸೇವೆಯಲ್ಲಿದ್ದಾರೆ. ಹೀಗಾಗಿ ಈ ಮೂರು ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಮೇಲೆ ಹೆಚ್ಚಿನ ಒತ್ತಡ ಇದೆ.


***

ಎಲ್‌ಎಂಎಸ್ ಗೊಂದಲ

ಸರ್ಕಾರ ಈಚೆಗೆ ಕಲಿಕಾ ನಿರ್ಮಾಣ ವ್ಯವಸ್ಥೆ (ಎಲ್‌ಎಂಎಸ್) ಯೋಜನೆ ಜಾರಿಗೆ ತಂದಿದೆ. ಉಪನ್ಯಾಸಕರ ಹಾಜರಾತಿ, ಬೋಧನೆ
ಮತ್ತು ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಪ್ರತಿ ಪಾಠದ ನಂತರ ಉಪನ್ಯಾಸಕರು ಯೋಜನೆಯ ಆಪ್‌ನಲ್ಲಿ ತಾವು ಮಾಡಿದ ಪಾಠ,
ವಿದ್ಯಾರ್ಥಿಗಳ ಸಂಖ್ಯೆ ನಮೂದಿಸಬೇಕು.

‘ಈ ವ್ಯವಸ್ಥೆ ನಮಗೆ ಗೊಂದಲ ಉಂಟು ಮಾಡಿದೆ. ಕಡಿಮೆ ವೇತನದಲ್ಲಿ ದುಡಿಯವ ನಮ್ಮಲ್ಲಿ ಗುಣಮಟ್ಟದ ಮೋಬೈಲ್‌ಗಳಿರುವುದಿಲ್ಲ. ಇದು ಹೆಚ್ಚುವರಿ ಕೆಲಸವಾಗುತ್ತದೆ. ಇಲಾಖೆ ಪ್ರತಿಯೊಬ್ಬರಿಗೆ ಲ್ಯಾಪ್‌ಟಾಪ್ ವಿತರಿಸಬೇಕು’ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

***

ಸ್ವಂತ ಕಟ್ಟಡವಿಲ್ಲದೇ ವಿದ್ಯಾರ್ಥಿಗಳ ಪರದಾಟ

ಹುಣಸಗಿ: ಪಟ್ಟಣ ಸೇರಿದಂತೆ ಕೊಡೇಕಲ್ಲ ಹಾಗೂ ನಾರಾಯಣಪುರ ಗ್ರಾಮದಲ್ಲಿ ಒಂದೊಂದು ಪಿಯು ಕಾಲೇಜು ಹಾಗೂ ಹುಣಸಗಿ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು, ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಸೌಲಭ್ಯಗಳಿಗಾಗಿ ಕಾಯುವಂತಾಗಿದೆ. ಹುಣಸಗಿ ಪಟ್ಟಣದಲ್ಲಿ 2013 ರಿಂದಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲಾಗಿದೆ. ಆದರೆ, ಕಾಲೇಜಿಗೆ ಸ್ವತಂ ಕಟ್ಟಡವಿಲ್ಲದೇ ಸರ್ಕಾರಿ ಪ್ರೌಢ ಶಾಲೆಯಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 7 ಜನ ಕಾಯಂ ಉಪಸನ್ಯಾಸಕರು ಹಾಗೂ 10 ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡೇಕಲ್ಲ ಗ್ರಾಮದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಸುಸಜ್ಜಿತ ವ್ಯವಸ್ಥೆ ಇದೆ. 10 ಕಾಯಂ ಉಪನ್ಯಾಸಕರಿದ್ದಾರೆ. 355 ವಿದ್ಯಾರ್ಥಿಗಳಿದ್ದಾರೆ. ಶೌಚಾಲಯ ಸೌಕರ್ಯವೂ ಇದೆ ಎಂದು ಪ್ರಾಚಾರ್ಯ ಬಸವರಾಜ ವಂದಲಿ ತಿಳಿಸಿದ್ದಾರೆ.

ಹುಣಸಗಿ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಕೊಠಡಿಗಳ ವ್ಯವಸ್ಥೆ ಇದ್ದರೆ, ವಿಜ್ಞಾನ ವಿಭಾಗದಲ್ಲಿ 3 ಹಾಗೂ ಕಲಾ ವಿಭಾಗದಲ್ಲಿ 4 ಸ್ಥಾನಗಳು ಖಾಲಿ ಇವೆ ಎಂದು ಪ್ರಾಚಾರ್ಯ ವಿ.ಎಸ್.ಬಿರಾದಾರ ಮಾಹಿತಿ ನೀಡಿದ್ದಾರೆ. ಸದ್ಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಸದ್ಯ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ 6 ಕೋಣೆಗಳ ಪಿಯು ಕಾಲೇಜು ಕಟ್ಟಡ ನಿರ್ಮಿಸಲಾಗಿದೆ. ಆದರೆ, ಇನ್ನೂ ವಿದ್ಯುತ್ ಸಂಪರ್ಕ ಹಾಗೂ ಗ್ರೀನ್ ಬೋರ್ಡ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಪಿಯುಸಿ ಪ್ರಥಮ ವರ್ಷಕ್ಕೆ 135 ಹಾಗೂ ದ್ವಿತೀಯ ವರ್ಷಕ್ಕೆ 86 ವಿದ್ಯಾರ್ಥಿಗಳು ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿದ್ದಾರೆ ಎಂದು ಪ್ರಾಚಾರ್ಯ ಜಿ.ಎಂ.ಗಾಣಿಗೇರ ಮಾಹಿತಿ ನೀಡಿದರು.

****
ಅತಿಥಿ ಉಪನ್ಯಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಿ ‍ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಎಲ್ಲೊ ಒಬ್ಬಿಬ್ಬರು ಕಾಯಂ ಉಪನ್ಯಾಸಕರು ಒಂದೆರಡು ಬಾರಿ ಪಾಠ ಮಾಡದೇ ತಪ್ಪಿಸಿಕೊಂಡಿರಬಹುದು. ಎಲ್ಲರೂ ಈ ರೀತಿ ಇರುವುದಿಲ್ಲ. ಎಲ್ಲರಿಗೂ ಗೌರವ ಕೊಡಲಾಗುತ್ತಿದೆ

–ಸುಭಾಶ್ಚಂದ್ರ ಕೌಲಗಿ, ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ

***

ಕಾಯಂ ಉಪನ್ಯಾಸಕರಂತೆ ನಾವೂ ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ಸರ್ಕಾರ ನಮಗೆ ವೇತನ ಸೇರಿದಂತೆ ಎಲ್ಲದರಲ್ಲೂ ತಾರತಮ್ಯ ಮಾಡಿದೆ.ಸಿಎಲ್, ಪಿಎಲ್‌ ರಜೆ ವ್ಯವಸ್ಥೆ ಇಲ್ಲ.ಎಕ್ಸಾಂ‌ ಡ್ಯೂಟಿ ಇಲ್ಲ. ಬೆಳಿಗ್ಗೆ 9 ರಿಂದ ಸಂಜೆ 4 ರ ತನಕ ಕಾಲೇಜುಗಳಲ್ಲಿ ಇರುತ್ತೇವೆ. ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಕೇವಲವಾಗಿ ನೋಡಲಾಗುತ್ತಿದೆ. ಇದು ಬದಲಾಗಬೇಕು

–ಅಮರೇಶ ನಾಯಕ, ಅತಿಥಿ ಉಪನ್ಯಾಸಕರ ಯಾದಗಿರಿ ತಾಲ್ಲೂಕು ಘಟಕದ ಅಧ್ಯಕ್ಷ

***

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ನಡುವೆಯೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡು ಸರಿದೂಗಿಸಲಾಗುತ್ತಿದೆ

–ಮರಿಸ್ವಾಮಿ ಎಂ., ಪದವಿ ಪೂರ್ವ ಕಾಲೇಜು ಉಪನಿರ್ದೇಶಕ

***

ನಗರದ ಸರ್ಕಾರಿ ಕಾಲೇಜಿಗೆ ನಿಗದಿತ ಸಮಯಕ್ಕೆ ಉಪನ್ಯಾಸಕರು ಆಗಮಿಸುತ್ತಾರೆ. ಅತಿಥಿ ಉಪನ್ಯಾಸಕರು, ಕಾಯಂ ಉಪನ್ಯಾಸಕರಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಾಲೇಜಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಸಂಖ್ಯೆ ಇದೆ

–ಪ್ರೊ.ಚೆನ್ನಾರಡ್ಡಿ ತಂಗಡಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ, ಶಹಾಪುರ
***

ತಾಲ್ಲೂಕಿನಲ್ಲಿ ಬಾಲಕಿಯರಿಗಾಗಿ ಇರುವುದು ನಮ್ಮದೊಂದೆ ಕಾಲೇಜು. ಹೀಗಾಗಿ ದಾಖಲಾತಿ ಹೆಚ್ಚಾಗಿದೆ. ಸರ್ಕಾರ ಉಪನ್ಯಾಸಕರನ್ನು ಒದಗಿಸಿದರೆ ಗುಣಮಟ್ಟದ ಬೋಧನೆ ಸಾಧ್ಯ

–ಸೈಯಿದಾ ಜಮಾದಾರ, ಪ್ರಾಂಶುಪಾಲರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಸುರಪುರ

***

ಉಪನ್ಯಾಸಕರ ಕೊರತೆಯಿಂದ ನಮಗೆ ಸರಿಯಾಗಿ ಪಾಠಗಳಾಗುತ್ತಿಲ್ಲ. ಖಾಸಗಿ ಕಾಲೇಜುಗಳಿಗೆ ಸೇರಲು ನಮ್ಮಲ್ಲಿ ಹಣವಿಲ್ಲ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು

–ತಿಮ್ಮಣ್ಣನಾಯಕ, ಬಿ.ಎ. ದ್ವಿತೀಯ ವಿದ್ಯಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುರಪುರ

***

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT