ಗುರುವಾರ , ಮೇ 6, 2021
23 °C
ಗುರುಮಠಕಲ್: ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆ

ಎಲ್ಲಾ ರೈತರಿಗೂ ಬೆಳೆ ವಿಮೆ ಸಿಗಲಿ: ಈಶ್ವರ ನಾಯಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ತಾಲ್ಲೂಕಿನಾದ್ಯಂತೆ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ರೈತರ ಹೆಸರು ಹಾಗೂ ಉದ್ದಿನ ಬೆಳೆಗಳು ನಷ್ಟವಾಗುತ್ತಿವೆ, ಜಮೀನುಗಳು ಜಲಾವೃತಗೊಳ್ಳುತ್ತಿವೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬ ರೈತರಿಗೂ ಸಹಾಯವಾಗುವಂತೆ ಬೆಳೆ ಸಮೀಕ್ಷೆ ಕೆಲಸವನ್ನು ವೇಗಗೊಳಿಸಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಈಶ್ವರ ನಾಯಕ್ ಸೂಚಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸಂಕಷ್ಟದಲ್ಲಿರುವಾಗ ಅವರಿಗೆ ಅನ್ಯಾಯವಾಗದಂತೆ ಎಲ್ಲರಿಗೂ ಬೆಳೆ ವಿಮೆ ಸೌಲಭ್ಯ ತಲುಪಿಸಬೇಕು ಎಂದರು.‌

ರಾಜ್ಯದಲ್ಲೆ ನಮ್ಮ ತಾಲ್ಲೂಕಿನಲ್ಲಿ ಹೆಚ್ಚು ಅತಿವೃಷ್ಟಿಯಾಗಿದೆ. ಆದರೆ ಹಲವು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಬೇಸರವುಂಟುಮಾಡುತ್ತಿದೆ ಎಂದು ಸದಸ್ಯ ಭಾಸ್ಕರರೆಡ್ಡಿ ಹೇಳಿದರು.

ಕೃಷಿ ಅಧಿಕಾರಿ ಶ್ವೇತಾ ಮಾತನಾಡಿ, ಈಗಾಗಲೆ ಕಂದಾಯ ಹಾಗೂ ಕೃಷಿ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಮಾಡಿ ವರದಿಯನ್ನು ಸಲ್ಲಿಸಲಾಗಿದೆ. ಈಗ ರೈತರೂ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದಾಗಿದೆ’ ಎಂದರು.

ಪುಟಪಾಕ ಕ್ಷೇತ್ರದ ನಾಗೇಶ ಚಂಡ್ರಿಕಿ ಮಾತನಾಡಿ, ಮಳೆಯಿಂದಾಗಿ ಮನೆಗಳು ಕುಸಿದಿದ್ದರೆ ಅಂತಹ ಮನೆಗಳನ್ನು ಕೂಡಲೆ ದುರಸ್ತಿ ಮಾಡಿಸುವುದಕ್ಕಾಗಿ ಬಡ ಜನರು ಕಚೇರಿಗಳ ಸುತ್ತ ಅಲೆದಾಡುವಂತ ಸ್ಥಿತಿಯಿದೆ. ಈಗಲೂ ಅದೆ ಸ್ಥಿತಿಯನ್ನು ಮುಂದುವರೆಸದೆ ಅಂತಹ ಪ್ರಕರಣಗಳ ಸರ್ವೆ ನಡೆಸಿ ಜನರಿಗೆ ಸೌಲಭ್ಯ ಸಿಗುವಂತೆ ಕ್ರಮಕೈಗೊಳ್ಳುವತ್ತ ಅದಿಕಾರಿಗಳು ಗಮನಹರಿಸಬೇಕು ಎಂದರು.

ಆಧಾರ್ ಕಾರ್ಡಿನಲ್ಲಿನ ತಿದ್ದುಪಡಿಗಳಿಗಾಗಿ ಜನ ಎಷ್ಟುಬಾರಿ ಸುತ್ತಾಡಬೇಕು? ಎಲ್ಲದಕ್ಕೂ ಆಧಾರ್ ಬೇಕು ಎನ್ನುವುದರಿಂದ ಜನ ಅದಕ್ಕಾಗಿ ಸುತ್ತಾಡುವಲ್ಲೆ ಸುಸ್ತಾಗುತಿದ್ದಾರೆ. ಮತ್ತು ಸಿಗಬಹುದಿದ್ದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಅದನ್ನೂ ಸರಿಪಡಿಸಿ ಎಂದು ಕಾಕಲವಾರ ಕ್ಷೇತ್ರದ ಸದಸ್ಯ ತಿಪ್ಪಣ್ಣ ಗುಟ್ಟಲ್ ಆಗ್ರಹಿಸಿದರು.

ಅದಕ್ಕೆ ತಹಶೀಲ್ದಾರ್ ಸಂಗಮೇಶ ಜಿಡಗೆ , ಕೋವಿಡ್ ಸಂದರ್ಭವಾಗಿದ್ದಕ್ಕೆ ಮೊದಲಿನಂತೆ ಮಾಡಲಾಗುತ್ತಿಲ್ಲ. ಅದಕ್ಕೆ ಬದಲಾಗಿ ಅಂತರ ಕಾಯ್ದುಕೊಂಡು ದಿನಕ್ಕೆ ಇಂತಿಷ್ಟು ಎಂದು ಆಧಾರ್ ತಿದ್ದುಪಡಿ ಅಥವ ಹೊಸ ಆಧಾರ್ ಕೆಲಸ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಸಮೀಕ್ಷೆಯ ಕೆಲಸ ವೇಗಗೊಳಿಸಬೇಕು ಹಾಗೂ ನಮ್ಮ ತಾಲ್ಲೂಕಿನಲ್ಲಾದ ಬೆಳೆ ನಷ್ಟವನ್ನು ಕೂಡಲೆ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಅನುಕೂಲಮಾಡುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಮಲಿಂಗಮ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಸದಸ್ಯರಾದ ಪಾರ್ವತಮ್ಮ, ಸರೋಜಮ್ಮ, ಲಕ್ಷ್ಮಿ, ಚಂದು, ಭಂಗವಂತರೆಡ್ಡಿ, ಕಿಷ್ಟಯ್ಯ, ಮಲ್ಲಿಕಾರ್ಜುನ ಅರುಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಗುನ್ನಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ, ಗಂಗಾಧರ, ಬಾಬು ಚೌಕಿ, ಕನಕಪ್ಪ, ಸಂತೋಷಕುಮಾರ, ಶ್ವೇತಾ, ಆನಂದ, ಭೀಮರಾಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು