ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬಿರುಗಾಳಿ ಸಹಿತ ಧಾರಾಕಾರ ಮಳೆ

27 ಎಂಎಂ ಮಳೆ ದಾಖಲು; ಗದ್ದೆಗಳು ಜಲಾವೃತ; ಜಿಲ್ಲೆಯಲ್ಲಿ 74 ಮನೆಗಳು ಕುಸಿತ
Last Updated 14 ಅಕ್ಟೋಬರ್ 2020, 17:37 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸಾವಿರಾರು ಎಕರೆ ಭತ್ತದ ಬೆಳೆ ನೆಲಕಚ್ಚಿ ಅಪಾರ ಪ್ರಮಾಣದ ಹಾನಿಯಾಗಿದೆ.24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 74 ಮನೆಗಳು ಭಾಗಶಃ ಕುಸಿದಿವೆ.ಮಲ್ಹಾರ, ಮನಮುಟಗಿ, ಕಾಡಂಗೇರಾ ಸೇರಿದಂತೆ ವಿವಿಧೆಡೆ ಮನೆಗಳುಕುಸಿದಿವೆ.

ಯಾದಗಿರಿ ಹೊರವಲಯದ ಕಂಗಳೇಶ್ವರ, ವೀರಾಂಜನೇಯ ದೇವಸ್ಥಾನಗಳು ಜಲಾವೃತವಾಗಿವೆ. ಸನ್ನತಿ ಬ್ರಿಡ್ಜ್‌ಕಂ ಬ್ಯಾರೇಜ್‌ನಿಂದ ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ. ಭೀಮಾ ತೀರದ ಜನರಲ್ಲಿ ಆತಂಕ ಶುರುವಾಗಿದೆ. ರೈತರ ಹತ್ತಿ, ತೊಗರಿ, ಭತ್ತದ ಗದ್ದೆಗಳು ನೆಲಕಚ್ಚಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 27 ಮಿ.ಮೀ ಮಳೆಯಾಗಿದೆ. ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ 48 ಮಿ.ಮೀ ಮಳೆಯಾಗಿದೆ.

ಯಾದಗಿರಿ ಸಮೀಪದ ನಾಯ್ಕಲ್ ಸೇರಿ ಸುತ್ತಮುತ್ತಲಿನ ಗ್ರಾಮಗಳಾದ ಖಾನಾಪುರ, ತಡಿಬಿಡಿ, ಕುರುಕುಂದಾ, ಗುರುಸುಣಿಗಿ, ಮಳ್ಳಳ್ಳಿ, ಬಬಲಾದ, ಬೀರನಾಳ, ಬಲಕಲ್, ನಾಲ್ವಡಿಗಿ, ಕರಣಿಗಿ, ಚಟ್ನಳ್ಳಿ, ತಂಗಡಿಗಿ, ಮರ ಮಕಲ್, ಇಬ್ರಾಹಿಂಪುರ ಇನ್ನೂ ಹಲವು ಗ್ರಾಮಗಳಲ್ಲಿನ ಬೆಳೆಗಳು ಹಾನಿಯಾಗಿವೆ.

ತೆನೆ ಕಟ್ಟಿದ ಭತ್ತದ ಗದ್ದೆಗಳು ಬಿರುಗಾಳಿ ಮಳೆಗೆ ಸಂಪೂರ್ಣ ನೆಲಕ್ಕೆ ಉರುಳಿವೆ. ಭೀಮಾ ನದಿ ಪ್ರವಾಹ ಬಂದು ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಅನ್ನದಾತರು ಕಂಗಾಲಾಗಿದ್ದಾರೆ. ನದಿ ಪಾತ್ರದ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಕಾಡುತ್ತಿದೆ.

ನಾಯ್ಕಲ್ ಗ್ರಾಮದಲ್ಲಿನ ಸಣ್ಣ ಕೆರೆ ಹಾಗೂ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿವೆ. ಯಾದಗಿರಿ-ಸುರಪುರ ರಾಜ್ಯ ಹೆದ್ದಾರಿಯ ಖಾನಾಪುರ ಕೆರೆ, ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲಿನ ಗುಂಡಳ್ಳಿ ಕೆರೆಗಳು ಕೋಡಿಗಳ ಮೂಲಕ ಧಾರಾಕಾರ ನೀರು ಹರಿಯುತ್ತಿವೆ.

‘ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬೆಳೆ ಪರಿಹಾರ ನೀಡಲು ಮುಂದಾಗಬೇಕು’ ಎಂದು ಬಬಲಾದ ಗ್ರಾಮದ ರೈತ ಸಿದ್ದಿಲಿಂಗರೆಡ್ಡಿ ಹೇಳುತ್ತಾರೆ.

***

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಪ್ರಾಮಾಣಿಕವಾಗಿ ವರದಿ ತಯಾರಿಸಬೇಕು ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

***

ಇನ್ನೂ ಒಂದು ವಾರ ಕಳೆದರೆ ಭತ್ತದ ಕಟಾವು ನಡೆಯುತ್ತಿತ್ತು. ಆದರೆ, ಭತ್ತದ ಬೆಳೆ ನೆಲಕಚ್ಚಿ ಹಾನಿಯಾಗಿದೆ ಮಲ್ಲಣಗೌಡ ಗೋಸಾಮಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT