ಬೆಂಗಳೂರು: ಬೆನ್ನು ಹುರಿಯ ಸ್ನಾಯು ಕ್ಷೀಣಿಸುವಿಕೆ (ಎಸ್‌ಎಂಎ ಟೈಪ್–1) ಎಂಬ ಅಪರೂಪದ ರೋಗದಿಂದ ಬಳಲುತ್ತಿರುವ ಒಂದೂವರೆ ವರ್ಷದ ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕೂಡಲೇ ದಾಖಲಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ‘ಮೊದಲಿಗೆ ಮಕ್ಕಳ ತಜ್ಞ ಡಾ. ಜಿ.ಎನ್.ಸಂಜೀವ್ ಅವರು ಮಗುವಿನ ಪರೀಕ್ಷೆ ನಡೆಸಬೇಕು ಮತ್ತು ನಂತರ ತಜ್ಞರ ಸಮಿತಿಯು ಮಗುವಿನ ತಪಾಸಣೆ ಮಾಡಬಹುದು’ ಎಂದು ಹೇಳಿದೆ.
ತಂದೆ ಮೂಲಕ ಮಗುವಿನ ಹೆಸರಿನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ‘ಅಪರೂಪದ ಈ ಕಾಯಿಲೆಯಿಂದ ಜೀವ ಉಳಿಸಲು ಔಷಧಿಗೆ ₹16 ಕೋಟಿ ವೆಚ್ಚವಾಗುತ್ತದೆ. ಪೋಷಕರು ಸುಮಾರು ₹8.24 ಕೋಟಿಯನ್ನು ದಾನಿಗಳು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ್ದಾರೆ. ಉಳಿದ ₹7.8 ಕೋಟಿ ನೆರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೊಡಿಸಲು ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿದಾರರು ಡಾ.ಸಂಜೀವ್ ಅವರನ್ನು ಇ–ಮೇಲ್ ಅಥವಾ ಮೊಬೈಲ್ ದೂರವಾಣಿ ಮೂಲಕ ಸಂಪರ್ಕಿಸಲು ನ್ಯಾಯಾಲಯ ಅನುಮತಿ ನೀಡಿತು. ವೈದ್ಯರು ತಕ್ಷಣವೇ ಪ್ರತಿಕ್ರಿಯಿಸಬೇಕು ಎಂದು ಪೀಠ ಸೂಚಿಸಿತು. ‘ಪ್ರತಿಕ್ರಿಯಿಸದಿದ್ದರೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ. ವೈದ್ಯರ ವಾದ–ಪ್ರತಿವಾದದಿಂದ ಮಗುವಿನ ಜೀವಕ್ಕೆ ಅಪಾಯವಾದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಆದೇಶದಲ್ಲಿ ಎಚ್ಚರಿಸಿತು.
ಚಿಕಿತ್ಸೆಯ ಪ್ರಗತಿ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ ಪೀಠ, ವಿಚಾರಣೆಯನ್ನು ಅ.7ಕ್ಕೆ ಮುಂದೂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.