ಯಾದಗಿರಿ: ಬರ ಪರಿಹಾರ ಕಾಮಗಾರಿಗಳನ್ನು ಕೂಡಲೇ ಯುದ್ಧೋಪಾದಿಯಲ್ಲಿ ಆರಂಭಿಸಿ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಈ ವರ್ಷ ಮುಂಗಾರು ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಸಂಪೂರ್ಣ ಬೆಳೆ ನಾಶವಾಗಿದೆ. ರೈತರಲ್ಲಿ ಹಿಂಗಾರು ಬೆಳೆಯ ಕುರಿತು ಹೊಸ ಭರವಸೆ ಚಿಗುರಿತ್ತು. ಆದರೆ, ಇಲ್ಲಿಯವರೆಗೂ ಮಳೆ ಬಾರದೆ ಇರುವುದರಿಂದ ರೈತರು ಮತ್ತೆ ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ. ತೊಗರಿ, ಶೇಂಗಾ, ಕಬ್ಬು ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿರುವ ರೈತರು ಈಗ ನೀರಿಲ್ಲದೆ ಪರದಾಡುವಂತಾಗಿದೆ. ಇಂಥ ಸಂದರ್ಭದಲ್ಲಿ ಕೊಳವೆಬಾವಿಗಳನ್ನು ಹೊಂದಿರುವವರು ಕೈಗೆ ಬಂದಿರುವ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದರು.
ಬ್ಯಾಂಕ್ ಸಾಲ ಸೇರಿ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷಪೂರ್ತಿ ವಿಸ್ತರಿಸಬೇಕು. ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು. ಬರಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಶಾಲಾ–ಕಾಲೇಜು ಮಕ್ಕಳ ಶುಲ್ಕವನ್ನು ಮನ್ನಾ ಮಾಡಬೇಕು. ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ವರ್ಷವಿಡೀ ಉಚಿತ ಪಡಿತರ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಕೆರೆ ಜೋಡಣೆ ಯೋಜನೆ ಜಾರಿಗೊಳಿಸಿ ನೀರಿನ ಸಮಸ್ಯೆಯ ಶಾಶ್ವತ ಮುಕ್ತಿಗಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್, ಶಿವರಾಜ್ ನಗನೂರ್, ಸಿದ್ದನಗೌಡ ನಗನೂರ್, ಖಾಜಾ ಮೈನುದ್ದೀನ್, ಸಿದ್ದಪ್ಪ ಇಮ್ಲಾಪುರ್, ಗುರಪ್ಪ ಗೌಡ ನಗನೂರ, ರಾಜು ಇಮ್ಲಾಪುರ್, ಚಂದ್ರಡ್ಡಿ ಗೋಡಿಕಾರ್, ರಾಮರೆಡ್ಡಿ, ಮಲ್ಲಮ್ಮ ಬಳ್ಳಳ್ಳಿ, ಮಲ್ಲಮ್ಮ ಸುರಪುರ, ಸರೋಜಮ್ಮ ಹಾದಿಮನಿ, ಚಂದ್ರ ರೆಡ್ಡಿ ಮಲ್ಕನಹಳ್ಳಿ, ಶರಣಪ್ಪ ಮಲಕಪನಹಳ್ಳಿ, ವೆಂಕಟೇಶ ಮಾಲಿ ಪಾಟೀಲ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.