ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗಿಲ್ಲ ಕಾಳಜಿ!

ಪುರಾತತ್ವ ಇಲಾಖೆ ಜಿಲ್ಲಾಡಳಿತ ನಿರ್ಲಕ್ಷ್ಯ, ಸಾರ್ವಜನಿಕರ ಆರೋಪ‍
Last Updated 27 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಐತಿಹಾಸಿಕ ಸ್ಥಳಗಳಿದ್ದು, ಸಂಬಂಧಿಸಿದ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿ ನಗರದಲ್ಲಿ ಐತಿಹಾಸಿಕ ಕೋಟೆ ಇದ್ದು, ಕೋಟ್ಯಂತರ ರೂಪಾಯಿ ಅನುದಾನ ಖರ್ಚಾದರೂ ಪ್ರವಾಸಿಗರಿಗೆ ಆಕರ್ಣೀಯ ಮಾಡುವಲ್ಲಿ ಇಲಾಖೆಗಳು ವಿಫಲವಾಗಿವೆ.

ಯಾದಗಿರಿ ಕೋಟೆ ಸಂರಕ್ಷಣೆ ಹಾಗೂ ಸೌಂದರ್ಯೀಕರಣ, ಗುರುಮಠಕಲ್ ಸಮೀಪದ ದಬ್‌ದಬಿ ಜಲಪಾತ, ಹತ್ತಿಕುಣಿ ಜಲಾಶಯ, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ, ಬೋನ್ಹಾಳ ಪಕ್ಷಿಧಾಮ, ರಾಜನಕೋಳೂರು ಬುಡ್ಡರ ಮನೆಗಳು, ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನ, ತಿಂಥಣಿ ಮೌನೇಶ್ವರ ದೇವಸ್ಥಾನ, ಶಹಾಪುರ ಬುದ್ದ ಮಲಗಿದ ಬೆಟ್ಟ, ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.

ನಾಮಫಲಕಗಳೇ ಇಲ್ಲ:ಜಿಲ್ಲೆಯೂ ಐತಿಹಾಸಿಕ, ಚಾರಿತ್ರಿಕ ಸ್ಥಳಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಆದರೆ, ಅವು ಪ್ರಚಾರವಿಲ್ಲದೇ ಸೊರಗಿ ಹೋಗುತ್ತವೆ. ಆದ್ಯ ವಚನಕಾರ ದೇವರ ದಾಸಿಮಯ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಹಲವಾರು ವರ್ಷಗಳಿಂದ ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಮತ್ತೊಂದು ಪ್ರಮುಖ ವಿಷಯವೆಂದರೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಕುರಿತು ನಾಮಫಲಕಗಳೇ ಇಲ್ಲ.

ನಾಮಫಲಕಗಳೇ ಪ್ರವಾಸಿ ಮಾರ್ಗದರ್ಶನ ನೀಡುತ್ತವೆ. ಜಿಲ್ಲಾ ಕೇಂದ್ರದಿಂದ ಎಷ್ಟು ಕಿ.ಮೀ ಅಂತರದಲ್ಲಿ ಇವೆ ಎನ್ನುವ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಯಾದಗಿರಿ ನಗರದಲ್ಲಿ ಸುಂದರವಾದ ಐತಿಹಾಸಿಕ ಕೋಟೆ ಇದ್ದರೂ ಇದರ ಬಗ್ಗೆ ಮಾರ್ಗಸೂಚಿ ಬೋರ್ಡ್‌ ಇಲ್ಲ. ಇದರಿಂದ ಪ್ರವಾಸಿಗರಿಗೆ ಮಾಹಿತಿ ತಿಳಿಯುವುದಿಲ್ಲ. ನಗರಕ್ಕೆ ಹತ್ತಿರದಲ್ಲಿರುವ ಹತ್ತಿಕುಣಿ ಜಲಾಶಯದ ಬಗ್ಗೆಯೂ ಮಾಹಿತಿ ಇಲ್ಲವಾಗಿದೆ.

ಹದಗೆಟ್ಟ ರಸ್ತೆಗಳು:ಚಾರಿತ್ರಿಕ ಸ್ಥಳಗಳಿಗೆ ತೆರಳಲು ಸೂಕ್ತ ರಸ್ತೆಗಳು ಇಲ್ಲವಾಗಿವೆ. ರಾಜನಕೋಳೂರು ಗ್ರಾಮದಲ್ಲಿರುವ ಬುಡ್ಡರ ಮನೆಗಳಿಗೆ ತೆರಳಲು ಸೂಕ್ತ ರಸ್ತೆಯೇ ಇಲ್ಲ. ಬುಡ್ಡರ ಮನೆಗಳ ಮುಂದೆಯೇ ನಾರಾಯಣಪುರ ಎಡದಂಡೆ ಕಾಲುವೆ ಹರಿಯುತ್ತಿದ್ದು, ಅದರ ಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದಿವೆ. ಬೈಕ್‌ ಸವಾರರು ತಗ್ಗು ದಿನ್ನೆಗಳಿಂದ ತಪ್ಪಿಸಿಕೊಳ್ಳಬೇಕಿದೆ. ಸ್ವಲ್ವ ಯಮಾರಿಸಿದರೂ ಕಾಲುವೆ ಪಾಲು ಆಗಬೇಕಾಗುತ್ತದೆ.

ಸೌಕರ್ಯಗಳ ಕೊರತೆ:ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌, ವಡಗೇರಾ ತಾಲ್ಲೂಕುಗಳಲ್ಲಿರುವ ಐತಿಹಾಸಿ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ.

ಬಸ್‌ನ ಸೌಕರ್ಯ ಸೇರಿದಂತೆ ಯಾವುದೇ ಅನುಕೂಲತೆಗಳು ಪ್ರವಾಸಿಗರಿಗೆ ಲಭ್ಯವಿಲ್ಲ. ಇದರಿಂದ ಇತ್ತ ನಿರ್ಲಕ್ಷ್ಯವೇ ಹೆಚ್ಚಾಗಿದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಆ ಸ್ಥಳಗಳತ್ತ ಗಮನಹರಿಸದೇ ಹಾಗೆಬಿಟ್ಟಿವೆ. ಇದರಿಂದ ಚಾರಿತ್ರಿಕ ಸ್ಥಳಗಳು ಅಧೋಗತಿಗೆ ಇಳಿದಿವೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿ ಮಾಡುವ ಅವಶ್ಯವಿದೆ.

****

ಹುಣಸಗಿ ತಾಲ್ಲೂಕಿನಲ್ಲಿರುವ ಐತಿಹಾಸಿಕ ಬುಡ್ಡರ ಮನೆಗಳ ಬಳಿ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ರಸ್ತೆ ಸರಿ ಇಲ್ಲ. ಸಂಬಂಧಿಸಿದವರು ಇತ್ತ ಗಮನಹರಿಸಿ

- ತಿರುಪತಿ ಸಾಹುಕಾರ ವಡಗೇರಿ, ರಾಜನಕೋಳೂರು ನಿವಾಸಿ

******

ಐತಿಹಾಸಿಕ ಸ್ಥಳಗಳಲ್ಲಿ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಗಮನಹರಿಸಿ ಅಭಿವೃದ್ಧಿ ಮಾಡಲಿ

- ಸೋಮಗೌಡ ಗುಳಬಾಳ, ರಾಜನಕೋಳೂರು ಗ್ರಾಮಸ್ಥ

*****

ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಸಂಬಂಧಿಸಿ ವಿಸ್ತೃತ ವರದಿ ತಯಾರಿಸಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗುವುದು. ಯಾದಗಿರಿ ಕೋಟೆ ಬಗ್ಗೆಯೂ ವರದಿ ಸಲ್ಲಿಸಲಾಗುವುದು

- ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT