ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ಪರಶುರಾಮ್‌ ಸಾವು: ಶಾಸಕ, ಪುತ್ರನ ಬಂಧನಕ್ಕೆ ಹೆಚ್ಚಿದ ಒತ್ತಡ

ಜಿಲ್ಲೆಯ ವಿವಿಧೆಡೆ ಪ್ರತನಿತ್ಯ ಪ್ರತಿಭಟನೆ, ಲಂಚಕ್ಕೆ ಬೇಡಿಕೆ ವ್ಯಾಪಕ ಚರ್ಚೆ ಶುರು
Published : 8 ಆಗಸ್ಟ್ 2024, 16:04 IST
Last Updated : 8 ಆಗಸ್ಟ್ 2024, 16:04 IST
ಫಾಲೋ ಮಾಡಿ
Comments

ಯಾದಗಿರಿ: ನಗರ ಠಾಣೆಯ ಪಿಎಸ್‌ಐ ಪರಶುರಾಮ್‌ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ‌

ಶಾಸಕ ಚನ್ನಾರೆಡ್ಡಿ ಪಾಟೀಲ ಮತ್ತು ಅವರ ಪುತ್ರ ಪಂಪನಗೌಡ ಬಂಧನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ.

‌ಇತ್ತಿಚೆಗೆ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರು ಜಿಲ್ಲೆಯ ಪೊಲೀಸ್ ಇಲಾಖೆ ಕಾರ್ಯವೈಖರಿ ವಿರುದ್ಧ ಸಮರ ಸಾರಿರುವುದು ಸದನದಲ್ಲಿ ಗದ್ದಲ ಸೃಷ್ಟಿಯಾಗಿತ್ತು. ಮತ್ತೊಂದೆಡೆ ಯಾದಗಿರಿ ಶಾಸಕರು ಮರಳು ದಂಧೆಯಲ್ಲಿ ಯಾವುದೇ ಪಾತ್ರ ಇಲ್ಲ ಎಂದು ಹೇಳಿದ್ದರು. ಇದೀಗ ಲಂಚಕ್ಕೆ ಬೇಡಿಕೆಯ ಆರೋಪದ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಜಿಲ್ಲೆಯ ಮಾನ ಮರ್ಯಾದೆ ಎಲ್ಲವೂ ಹಾಳಾಗುತ್ತಲಿದೆ ಎಂದು ಪ್ರತಿಭಟನೆಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‌ರಾಜೀನಾಮೆ ನೀಡಲಿ: ಪೊಲೀಸ್ ಅಧಿಕಾರಿ ಪರಶುರಾಮ್ ಅವರ ಸಾವಿನ ಪ್ರಕರಣದಲ್ಲಿ ಲಂಚ ಬೇಡಿಕೆ ಹಾಗೂ ಅಧಿಕಾರಿಗೆ ಮಾನಸಿಕ ಕಿರುಕುಳದ ಆರೋಪಿಗಳಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಶೀಘ್ರವೇ ರಾಜೀನಾಮೆ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್.ವಿಶ್ವನಾಥ್ ನಾಯಕ ಆಗ್ರಹಿಸಿದ್ದಾರೆ.

ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಇಲ್ಲಿ ಇಂತಹ ಭ್ರಷ್ಟ ಶಾಸಕರು ಅಧಿಕಾರ ನಡೆಸುವ ನೈತಿಕತೆ ಹೊಂದಿಲ್ಲ. ಕೇವಲ ಸರ್ಕಾರದ ಅಧಿಕಾರಿಗಳು ಮಾತ್ರವಲ್ಲದೇ ಗುತ್ತಿಗೆದಾರರ ಹತ್ತಿರವು ಶೇ 15 ಕಮಿಷನ್ ಕೇಳಿರುವ ಆರೋಪ ಶಾಸಕರ ಮೇಲಿದೆ.ಸರ್ಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಎಂಜಿನಿಯರ್, ಎಫ್‌ಡಿಸಿ, ಎಸ್‌ಡಿಸಿ ಸೇರಿದಂತ ಅನೇಕ ಅಧಿಕಾರಿಗಳಿಗೂ ಶೇ 18 ಕಮಿಷನ್ ನೀಡಿ, ನಂತರ ಸರ್ಕಾರಕ್ಕೂ ಶೇ 18 ರಷ್ಟು ಜಿಎಸ್‌ಟಿ ನೀಡಿದಾಗ ಗುತ್ತಿಗೆದಾದರು ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಯಾದಗಿರಿ ಮತಕ್ಷೇತ್ರದ ಗುತ್ತಿಗೆದಾರರು ತುಮಕೂರು, ಬೆಂಗಳೂರು, ಮೈಸೂರು, ಕೋಲಾರ ಜಿಲ್ಲೆಗಳತ್ತ ತೆರಳಿ ಕಾಮಗಾರಿ ಮಾಡುವ ಫಜೀತಿಗೆ ಸಿಲುಕಿದ್ದಾರೆ. ಯಾದಗಿರಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಅಷ್ಟೇ ಅಲ್ಲದೇ, ತಂದೆಯ ಅಧಿಕಾರವನ್ನು ಮಗನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ. ಕೂಲಂಕುಶವಾಗಿ ಪಿಎಸ್ಐರವರ ಸಾವಿನ ಪ್ರಕರಣದ ತನಿಖೆಯಾಗಬೇಕು. ಭ್ರಷ್ಟಶಾಸಕರು ಎಂಬ ಅಪಕೀರ್ತಿಗೆ ಸಾಕ್ಷಿಯಾದ ಶಾಸಕರು ಶೀಘ್ರವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಸಹೋದರ ಮಾವ ಡಿವೈಎಸ್ಪಿ ಕಚೇರಿಗೆ ಆಗಮಿಸಿದರು
ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಸಹೋದರ ಮಾವ ಡಿವೈಎಸ್ಪಿ ಕಚೇರಿಗೆ ಆಗಮಿಸಿದರು

15 ರಂದು ಸಚಿವರ ಕಾರಿಗೆ ತಡೆ

ಯಾದಗಿರಿ: ಆಗಸ್ಟ್ 14ರೊಳಗೆ ಶಾಸಕ ಚನ್ನಾರೆಡ್ಡಿ ಪಾಟೀಲ‌ ತುನ್ನೂರು ಅವರ ಪುತ್ರನನ್ನು ಬಂಧಿಸಬೇಕು.‌ ಇಲ್ಲದಿದ್ದಿರೆ ಆ.15 ರಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಕಾರಿಗೆ ತಡೆ ಒಡ್ಡಲಾಗುವುದು ಎಂದು ಜೈ ಕರವೇ ಜಿಲ್ಲಾಧ್ಯಕ್ಷ ಸಂಗಮೇಶ ಭೀಮನಳ್ಳಿ ಹೇಳಿದರು. ನೀಡಿದ ಗಡುವಿನ ಒಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಸರ್ಕಾರ ಲಂಚಕೋರರ‌ ಪರವಾಗಿದೆ ಎನ್ನುವುದು ಗೊತ್ತಾಗಲಿದೆ. ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಿಎಸ್‌ಐ ಪರಶುರಾಮ್‌ ಸಾವಿನ ತನಿಖೆಯನ್ನು ಪೂರ್ಣಗೊಳಿಸಲು ಆರೋಪಿಗಳನ್ನು ಬಂಧಿಸಬೇಕು. ಆಗ ಮಾತ್ರ ಪೂರ್ತಿಯಾಗಲಿದೆ. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ವಿಶ್ವನಾಥ ರವಿಕುಮಾರ ನಾಯ್ಕೊಡಿ‌ ದೇವಿಂದ್ರ ನಾಯಕ ಶರಣನಾಯಕ ನಾಗಲಪುರ ಲಿಂಗರಾಜ ಸಾಗರ ಸೈಯದ್ ಸಾಬ್ ದೊಡ್ಡಮನಿ ಭಾಗವಹಿಸಿದ್ದರು.

ಸಿಐಡಿಯಿಂದ ಮುಂದುವರಿದ ತನಿಖೆ

ಯಾದಗಿರಿ: ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ತಂಡವು ನಗರದ ಡಿವೈಎಸ್‌ಪಿ ಕಚೇರಿಗೆ ಆಗಮಿಸಿ ಪರಶುರಾಮ್ ಅವರ ತಂದೆ ಜನಕಮುನಿ ಸಹೋದರ ಹಣಮಂತ ಮಾವ ವೆಂಕಟಸ್ವಾಮಿ ಅವರಿಂದ ಹೇಳಿಕೆ ಪಡೆಯಿತು. ಬಳಿಕ ಪೊಲೀಸ್‌ ಇಲಾಖೆಯ ವಸತಿ ಗೃಹದಲ್ಲಿರುವ ಮೃತ ಪರಶುರಾಮ್ ಅವರ ಮನೆಗೆ ತೆರಳಿದರು. ಸ್ಥಳ ಮಹಜರು ನಡೆಸಿದರು. ಸ್ಥಳ ಮಹಜರು ನಡೆಸಿ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರಿಂದ ಸಿಐಡಿ ತಂಡ ಮಾಹಿತಿ ಪಡೆದರು. ಅಲ್ಲದೇ ಸಿಐಡಿ ಎಸ್ಪಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ಬಳಿ ಮಾಹಿತಿ ಪಡೆದರು. ಮಹತ್ವದ ‌ಮಾಹಿತಿ‌ ಪಡೆದ ಸಿಐಡಿ: ಸಿಐಡಿ ತಂಡ ಡಿವೈಎಸ್ಪಿ ಕಚೇರಿಯಲ್ಲಿ ಪ್ರಿಂಟರ್ ಲ್ಯಾಪ್ ಟಾಪ್ ಮತ್ತು ಹ್ಯಾಂಡ್ ಕ್ಯಾಮೆರಾ ವಶಕ್ಕೆ ಪಡೆದರು. ಮಹತ್ವದ ದಾಖಲೆಗಳೊಂದಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯತ್ತ ತೆರಳಿತು. ಪಿಎಸ್ಐ ಪರಶುರಾಮ್‌ ನಿವಾಸದಲ್ಲಿ ಸಿಕ್ಕ ದಾಖಲೆಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಪರಶುರಾಮ್‌ ಮೃತಪಟ್ಟ ಸ್ಥಳದಲ್ಲಿ ಬಿದ್ದಿರುವ ರಕ್ತ ಬಟ್ಟೆ ಪರಶುರಾಮ್‌ ಉಪಯೋಗಿಸುತ್ತಿದ್ದ ಗನ್ ಸಾವಿಗೂ ಮುನ್ನ ಅಡುಗೆ‌ ಮಾಡಿರುವ ಅಕ್ಕಿ ಸ್ಯಾಂಪಲ್ ಎಫ್ಎಸ್ಎಲ್ ರವಾನೆ ಮಾಡಲಾಗಿದೆ. ಬ್ಯಾಂಕ್ ಖಾತೆ ಮೇಲೆ ಸಿಐಡಿ ನಿಗಾ: ಪರಶುರಾಮ್‌ ಹೊಂದಿರುವ ಬ್ಯಾಂಕ್ ಖಾತೆಗಳ‌ ಮೇಲೆ ಸಿಐಡಿ ಹದ್ದಿನ‌ ಕಣ್ಣಿಟ್ಟಿದೆ. ಖಾತೆಯಿಂದ ಹಣ ಜಮೆ ವಿಥ್ ಡ್ರಾ ಆಗಿರುವುದರ ಮೇಲೆ ನಿಗಾ ವಹಿಸಲಾಗಿದೆ. ಆಗಸ್ಟ್‌ 2ರ ಶುಕ್ರವಾರ ಯಸ್ ಬ್ಯಾಂಕ್‌ನಲ್ಲಿ ₹75 ಸಾವಿರ ಹಣ ವಿಥ್ ಡ್ರಾ ಮಾಡಿರುವ ಪರಶುರಾಮ್‌ ಸಾವಿಗೂ ಮೊದಲು ಪರಶುರಾಮ ಹಣ ವಿಥ್ ಡ್ರಾ ಮಾಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವರ್ಗಾವಣೆಗಾಗಿ ಹಣ ವಿಥ್ ಡ್ರಾ ಮಾಡಿದ್ದಾರಾ ಎನ್ನುವ ಪ್ರಶ್ನೆ ಉದ್ಬವಿಸಿದೆ. ಎಷ್ಟು ವಿಥ್ ಡ್ರಾ ಯಾವ ಉದ್ದೇಶಕ್ಕೆ ವಿಥ್ ಡ್ರಾ ಮಾಡಿದ್ದಾರೆ ಎನ್ನುವ ಕುರಿತು ಎಲ್ಲಾ ಆಯಾಮಗಳಲ್ಲಿ ಹಣಕಾಸಿನ ವಿವರ ಸಿಐಡಿ ತಂಡ ಪಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT