ಗುರುಮಠಕಲ್ (ಯಾದಗಿರಿ ಜಿಲ್ಲೆ): ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ ಚಿಂಚನಸೂರ ರಾಜೀನಾಮೆ ನೀಡಿದ್ದಾರೆ.
ಇದರಿಂದ ಬಿಜೆಪಿಗೆ ‘ಕೈ’ ಕೊಟ್ಟು ಕಾಂಗ್ರೆಸ್ ಸೇರ್ಪಡೆ ಆಗುವರು ಎಂಬ ಚರ್ಚೆ ಸೋಮವಾರ ರಾತ್ರಿ 8ರಿಂದ ವಿಧಾನಸಭಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಬಾಬುರಾವ ಚಿಂಚನಸೂರ ರಾಜೀನಾಮೆ ಕೊಟ್ಟಿದ್ದು, ಸದ್ಯ ಹೈದರಾಬಾದ್‌ನಲ್ಲಿ ಇದ್ದಾರೆ ಎನ್ನಲಾಗಿದೆ. ಅಲ್ಲಿಂದಲೇ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ದಗೊಳಿಸುತ್ತಿದ್ದಾರೆ ಎಂಬ ಮಾತುಗಳು ಮುಂಚೂಣಿಗೆ ಬಂದಿವೆ.
‘ಚಿಂಚನಸೂರ ಅವರು ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಬಿಜೆಪಿ ತಾಯಿ ಇದ್ದಂತೆ ಅವರು ಹೇಳಿದ್ದರು. ಅದರಂತೆ ಬಿಜೆಪಿ ಸೇರುವ ಮುನ್ನ ಕಾಂಗ್ರೆಸ್ ತಾಯಿ ಇದ್ದಂತೆ. ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಯಾವ ಪಕ್ಷಕ್ಕೆ ಸೇರ್ಪಡೆ ಆಗುವರು’ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ.
‘ಬಾಬುರಾವ ಚಿಂಚನಸೂರ ಅವರು ಬಿಜೆಪಿ ನನ್ನ ತಾಯಿ ಪಕ್ಷ ಎಂದು ಕಳೆದ 15 - 20 ದಿನಗಳ ಹಿಂದೆ ಹೇಳಿದ್ದರು. ತಾಯಿ ಮಗನ ಸಂಬಂಧವೆಂದು ತಾಯಿಗೆ ದ್ರೋಹ ಮಾಡುವುದು ಪಕ್ಷಕ್ಕೆ ದ್ರೋಹ ಮಾಡುವುದು ಒಂದೇ ಎಂದು ಹೇಳಿದ್ದರು. ಸೋತಿದ್ದರೂ ಬಿಜೆಪಿ ಅವರನ್ನು ಎಂಎಲ್ಸಿ, ನಿಗಮ ಮಂಡಳಿ ಅಧ್ಯಕ್ಷ ಮಾಡಿದೆ. ಅವರ ಶ್ರೀಮತಿಯವರನ್ನು ಕೇಂದ್ರದ ಆಹಾರ ನಿಗಮ ಮಂಡಳಿಗೆ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಬಿಜೆಪಿಯನ್ನು ತಮ್ಮ ಐಷಾರಾಮಿಗಾಗಿ ಬಳಕೆ ಮಾಡಿ, ದ್ರೋಹ ಮಾಡಿದ್ದಾರೆ.
ಅವರು ಪಕ್ಷಕ್ಕೆ ಮಾತ್ರವಲ್ಲ ಕಬ್ಬಲಿಗ ಸಮುದಾಯಕ್ಕೂ ಮೋಸ ಮಾಡಿದ್ದಾರೆ. ಸ್ವಾಭಿಮಾನ, ದೈರ್ಯಕ್ಕೆ ಹೆಸರಾದ ಕಬ್ಬಲಿಗ ಸಮುದಾಯದ ಹೆಸರನ್ನು ಈ ರೀತಿಯಾಗಿ ಮೋಸ ಮಾಡಿದ್ದಕ್ಕೆ ನನ್ನ ಧಿಕ್ಕಾರವಿದೆ' ಎಂದು ಹೇಳಲಾದ ಆಡಿಯೋ ಸದ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಆಡಿಯೋ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಗಿರೀಶ ಮಟ್ಟೆಣ್ಣವರ ಅವರದ್ದು ಎನ್ನಲಾಗುತ್ತಿದೆ.
ಕಾಂಗ್ರೆಸ್ ಸೇರುತ್ತಾರಾ?: ಮಾರ್ಚ್ 25ರಂದು ಸೈದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮತ್ತು ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸುತ್ತಿದ್ದಾರೆ. ಅದರಲ್ಲಿ ಚಿಂನಚನಸೂರ ಭಾಗಿಯಾಗುತ್ತಾರಾ ಎನ್ನುವ ಕುತೂಹಲ ಮನೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.