ಹುಣಸಗಿ: ಶನಿವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಭಾರಿ ಅನಾಹುತ ಸೃಷ್ಟಿಯಾಗಿದ್ದು, ಅಧಿಕ ಮಳೆಗೆ ಅಲ್ಲಲ್ಲಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಕಾಳು ಕಡಿ ಹಾನಿಯಾಗಿದೆ.
ಹುಣಸಗಿ ಪಟ್ಟಣದ ಹುಣಸಗಿ- ಕೆಂಭಾವಿ ಮುಖ್ಯ ರಸ್ತೆ ಬಳಿ ಇರುವ ಹಿರೇಹಳ್ಳ ತುಂಬಿ ಹರಿಯುತ್ತಿದ್ದರಿಂದ ಸಂಚಾರಕ್ಕೂ ತೊಂದರೆಯಾಗಿದೆ. ಪಟ್ಟಣದಲ್ಲಿನ ಮೌನೇಶ್ ಗ್ಯಾರೇಜ್ ಬಳಿ ಅಧಿಕ ಪ್ರಮಾಣದ ನೀರು ಹರಿಯುತ್ತಿದ್ದರಿಂದಾಗಿ ಸಂಚಾರಕ್ಕೂ ತೊಂದರೆಯಾಗಿದೆ. ವಜ್ಜಲ ಗ್ರಾಮದಲ್ಲಿ ಕೊಂಡಮ್ಮ ಓಣಿ ಪ್ರದೇಶದಲ್ಲಿ ನಾಲ್ಕೈದು ಮನೆಗಳಿಗೆ ಅಪಾರ ಪ್ರಮಾಣದ ನೀರನ್ನು ನುಗ್ಗಿ ರಾತ್ರಿ ನಿದ್ದೆ ಇಲ್ಲದೆ ಪರದಾಡಿದಂತಾಗಿದೆ ಎಂದು ಸೋಮಪ್ಪ ವಡ್ಡರ ಹಾಗೂ ಮಲ್ಲಿಕಾರ್ಜುನ ವಡ್ಡರ್ ತಿಳಿಸಿದರು.
ಇನ್ನೂ ವಜ್ಜಲ ಗ್ರಾಮದ ರಸ್ತೆಯಲ್ಲಿ ಸುಮಾರು ಎರಡು ಫೀಟ್ ಗೂ ಅಧಿಕ ನೀರು ಶೇಕರಣೆಯಾಗಿದ್ದರಿಂದಾಗಿ ಬೆಳಿಗ್ಗೆ 7 ಯಿಂದ 10:00 ವರೆಗೂ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮುಖ್ಯ ರಸ್ತೆ ಮೇಲೆ ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರು ಪರದಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಲಾರಿ ಒಂದು ಕೆಟ್ಟು ನಿಂತು ತೊಂದರೆಯಾಗಿತ್ತು. ಮಳೆಯಿಂದಾಗಿ ವಿದ್ಯುತ್ ಸ್ಥಗಿತಗೊಂಡಿದೆ. ತಾಲ್ಲೂಕಿನಲ್ಲಿ ಮಳೆಯ ಹಾನಿಯ ಕುರಿತು ಇನ್ನೂ ಯಾವುದೇ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.