ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ಬಸ್ ಸಮಸ್ಯೆ; ಕಾಲ್ನಡಿಗೆಯಲ್ಲಿ ಶಾಲೆಗೆ

Last Updated 5 ಸೆಪ್ಟೆಂಬರ್ 2021, 3:48 IST
ಅಕ್ಷರ ಗಾತ್ರ

ಯರಗೋಳ: ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಕಂಚಗಾರಳ್ಳಿ ವಿದ್ಯಾರ್ಥಿಗಳು ನಿತ್ಯ 4 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ.

ಕಂಚಗಾರಳ್ಳಿ ಗ್ರಾಮದಿಂದ ಅರ್ಧ ಕಿ.ಮೀ. ದೂರ ಕ್ರಮಿಸಿ ರಾಷ್ಟ್ರೀಯ ಹೆದ್ದಾರಿ 150 ತಲುಪುತ್ತಾರೆ. ಅಲ್ಲಿಂದ 4 ಕಿ.ಮೀ. ದೂರದ ಅಲ್ಲಿಪುರ ಪ್ರೌಢಶಾಲೆ ತಲುಪಲು ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುತ್ತಾರೆ. ಕಾಲೇಜು ವಿದ್ಯಾರ್ಥಿಗಳು ಯಾದಗಿರಿಗೆ ತೆರಳಲು ಬಸ್‌ಗಳು ನಿಲ್ಲಿಸುವುದಿಲ್ಲ. ಹೀಗಾಗಿ ಆಟೊ, ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದು ಪೋಷಕರಿಗೆ ಆರ್ಥಿಕ ಹೊರೆಯಾಗಿದೆ.

ಬೆನ್ನಿಗೆ ಬ್ಯಾಗು, ನೀರಿನ ಬಾಟಲ್ ಹಿಡಿದು ರಸ್ತೆ ಮೇಲೆಯೇ 4 ಕಿ.ಮೀ. ನಡೆದುಕೊಂಡು ಶಾಲೆ ತಲುಪುವ ವಿದ್ಯಾರ್ಥಿಗಳು, ಮಳೆ ಬಂದಾಗ ರಸ್ತೆ ಪಕ್ಕದ ಮರಗಳನ್ನೇ ಆಶ್ರಯಿಸುತ್ತಾರೆ.

ವಿದ್ಯಾರ್ಥಿನಿಯರು ರಸ್ತೆ ಮೇಲೆ ಹೋಗುವಾಗ ತೊಂದರೆ ಅನುಭವಿಸುವುದನ್ನು ಮನಗಂಡ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಪ್ರೌಢ ಮತ್ತು ಕಾಲೇಜು ಶಿಕ್ಷಣಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ ವಡ್ನಳ್ಳಿ ಗ್ರಾಮದಿಂದ 3 ಕಿ.ಮೀ, ನಡೆದು ವೆಂಕಟೇಶ್ ನಗರ ದೊಡ್ಡ ತಾಂಡಾ ತಲುಪುವ ವಿದ್ಯಾರ್ಥಿಗಳು ಅಲ್ಲಿಂದ ಯಾದಗಿರಿ, ಅಲ್ಲಿಪುರ, ಯರಗೋಳದ ಶಾಲಾ, ಕಾಲೇಜಿಗೆ ತೆರಳಲು ಬಸ್ಸುಗಳಿಗೆ ಕಾಯಬೇಕು. ಈ ಮಾರ್ಗದಲ್ಲಿ 20ಕ್ಕೂ ಹೆಚ್ಚು ತಡೆರಹಿತ (ಯಾದಗಿರಿ-ಕಲಬುರ್ಗಿ)ಬಸ್‌ಗಳು ಸಂಚರಿಸಿದರೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿಲ್ಲ.

ಮಲಕಪ್ಪನಳ್ಳಿ ಗ್ರಾಮದಿಂದ ನಿತ್ಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು 4 ಕಿ.ಮೀ. ನಡೆದುಕೊಂಡು ಯರಗೋಳ ಗ್ರಾಮಕ್ಕೆ ಬರುತ್ತಾರೆ. ಇಲ್ಲವೇ ಬೈಕ್ ಮತ್ತು ಆಟೊಗಳ ಮೊರೆ ಹೋಗುತ್ತಾರೆ.

ಅಲ್ಲಿಪುರ ಪ್ರೌಢಶಾಲೆಗೆ ಕಂಚಗಾರಳ್ಳಿ ಗ್ರಾಮದಿಂದ 9, 10ನೇ ತರಗತಿಯ 33 ವಿದ್ಯಾರ್ಥಿಗಳು, ವಡ್ನಳ್ಳಿ– 17 ಮತ್ತು ಸಣ್ಣ ತಾಂಡಾದ 16 ವಿದ್ಯಾರ್ಥಿಗಳು ಬರುತ್ತಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ವಿದ್ಯಾವತಿ ಸಜ್ಜನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಚ್ಚೋಲ ತಾಂಡಾದಿಂದ 15ಕ್ಕೂ ಹೆಚ್ಚು ಮಕ್ಕಳು 3.5 ಕಿ.ಮೀ. ನಡೆದುಕೊಂಡೇ ಅರಿಕೇರಾ ಬಿ ಗ್ರಾಮದ ಶಾಲೆಗೆ ತಲುಪುತ್ತಾರೆ ಎಂದು ಶಿಕ್ಷಕ ಚನ್ನಬಸವ ಗೋಡಿಕರ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT