ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗಣಗೇರಿ: ಮೂಲಸೌಕರ್ಯ ಕೊರತೆ

ಗ್ರಾಮ ಸಂಚಾರ- ಬಯಲು ಶೌಚದಿಂದ ಮುಕ್ತವಾಗಿಲ್ಲ, ಸ್ವಚ್ಛತೆಯಿಲ್ಲ, ಸಾಂಕ್ರಾಮಿಕ ರೋಗಗಳ ಭೀತಿ
Published 8 ಫೆಬ್ರುವರಿ 2024, 6:17 IST
Last Updated 8 ಫೆಬ್ರುವರಿ 2024, 6:17 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ವಾಗಣಗೇರಿ ಗ್ರಾಮವು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ, ಬಯಲು ಶೌಚದಿಂದ ಮುಕ್ತವಾಗಿಲ್ಲ, ಡಾಂಬರು ಕಾಣದ ರಸ್ತೆಗಳು, ಕಾರ್ಮಿಕರಿಗೆ ಕೆಲಸವಿಲ್ಲ..ಹೀಗೆ ಇಲ್ಲಗಳ ಪಟ್ಟಿಯೇ ಇದೆ.

ಗ್ರಾಮದಲ್ಲಿ ಸೂಕ್ತ ಮೂಲಸೌಲಭ್ಯಗಳಿಲ್ಲ. ರಸ್ತೆಗಳ ಸುಧಾರಣೆಯಾಗಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದೇಶದಲ್ಲಿ ಸ್ವಚ್ಛ ಅಭಿಯಾನ ಆರಂಭವಾಗಿ 10 ವರ್ಷಗಳೇ ಕಳೆದಿವೆ. ಆದರೆ ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗಿಲ್ಲ. ವಾಗಣಗೇರಿ ಗ್ರಾಮದಲ್ಲಿ ಈಗಲೂ ಸಾರ್ವಜನಿಕ ಶೌಚಾಲಯಗಳಿಲ್ಲ. ಜತೆಗೆ ಜನೆರಿಗೆ ಶೌಚಾಲಯಗಳ ಬಳಕೆಯ ಜಾಗೃತಿಯಿಲ್ಲದೇ, ಸದ್ಯ ವೈಯಕ್ತಿಕವಾಗಿ ನಿರ್ಮಿಸಿಕೊಂಡಿರುವ ಶೌಚಾಲಯಗಳನ್ನು ಬಳಸುತ್ತಿಲ್ಲ. ಹೀಗಾಗಿ ಗ್ರಾಮದ ಕೋಟೆ ಪ್ರದೇಶವು ಬಯಲುಶೌಚವಾಗಿ ಮಾರ್ಪಟ್ಟಿದೆ.

ರಸ್ತೆ ಮೇಲೆ ಹರಿಯುವ ಕೊಳಚೆ:

ಗ್ರಾಮದಲ್ಲಿ ಸೂಕ್ತ ಹಾಗೂ ವೈಜ್ಞಾನಿಕ ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಮನೆಗಳಿಂದ ನಿರ್ಮಾಣವಾಗುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ ಕೊಳಚೆ ನೀರು ತಗ್ಗಾದ ಪ್ರದೇಶದಲ್ಲಿ ಸಂಗ್ರಹಗೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಅಲ್ಲದೇ ಮಳೆಗಾಲದಲ್ಲಿಯೂ ಕೂಡ ಗ್ರಾಮಸ್ಥರು ತೊಂದರೆ ಅನುಭವವಿಸುವಂತಾಗಿದ್ದು, ಕೊಳಚೆ ನೀರಿನೊಂದಿಗೆ ಸೇರುವ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸಬೇಕಾಗುತ್ತದೆ.

ಡಾಂಬರು ಕಾಣದ ರಸ್ತೆಗಳು:

ಗ್ರಾಮದಲ್ಲಿರವ ರಸ್ತೆಗಳು ಇಕ್ಕಟ್ಟಾಗಿದ್ದು, ಈವರೆಗೂ ಡಾಂಬರು ಅಥವಾ ಸಿಸಿ ರಸ್ತೆಯನ್ನಾಗಿ ಮಾರ್ಪಡಿಸಿಲ್ಲ. ಮಠದಿಂದ ಕೋಟೆಗೆ ಹೋಗುವ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ.‌ ಮಳೆ ಬಂದರಂತೂ ನಡೆಯಲು ಬಾರದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರದ ಸುತ್ತಲೂ ಮಲಮೂತ್ರ ಮಾಡುತ್ತಾರೆ. ಶಾಲಾ ಮಕ್ಕಳು ದುರ್ನಾತದಲ್ಲೆ ಪಾಠ ಕೇಳುವಂತಾಗಿದೆ. ಕುಡುಕರು ಬಾಟಲಿಗಳನ್ನು ಎಸೆಯುವುದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪೋಷಕರ ದೂರಿದ್ದಾರೆ.

ಶಿಕ್ಷಕರ ಕೊರತೆ:

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಇದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆಯಿಲ್ಲ. ಹೀಗಾಗಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.

ತ್ಯಾಜ್ಯ ಸೂಕ್ತ ವಿಲೇವಾರಿ, ಸಾರ್ವಜನಿಕ ಶೌಚಾಲಯ ನಿರ್ಮಾಣ, ನೈರ್ಮಲ್ಯ, ಚರಂಡಿ ನಿರ್ಮಾಣ, ಐತಿಹಾಸಿಕ ಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ, ಪ್ರೌಢಶಾಲೆ ಆರಂಭ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಮಂಜೂರು ಹಾಗೂ ಕಾರ್ಮಿಕರಿಗೆ ನರೇಗಾದಲ್ಲಿ ಕೆಲಸ ನೀಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

ಔರಂಗಜೇಬನ ಸೋಲಿಗೆ ಕಾರಣವಾದ ಕೋಟೆ:

ಸುರಪುರದ ಗೋಸಲ ಅರಸರ ಮೊದಲ ರಾಜಧಾನಿ ವಾಗಣಗೇರಿ. ರಾಜ್ಯದ ದೊಡ್ಡ ಕೋಟೆಗಳಲ್ಲಿ ವಾಗಣಗೇರಿ ಕೋಟೆಯೂ ಒಂದು. ದುರ್ಗಮ ಕೋಟೆಯಾಗಿದ್ದು, ಬೆಟ್ಟ ಪ್ರದೇಶದಲ್ಲಿದೆ. ಕೋಟೆಯ ಕೆಳಗೆ ವೈರಿಗಳು ನುಸುಳದಂತೆ ಕಂದಕಗಳು ಇವೆ. ಗೋರಿಲ್ಲಾ ಯುದ್ಧಕ್ಕೆ ಈ ಕೋಟೆ ಹೇಳಿ ಮಾಡಿಸಿದಂತಿಂದೆ.

ಸುರಪುರ ತಾಲ್ಲೂಕಿನ ವಾಗಣಗೇರಿಯ ಕೋಟೆಯ ರಸ್ತೆ
ಸುರಪುರ ತಾಲ್ಲೂಕಿನ ವಾಗಣಗೇರಿಯ ಕೋಟೆಯ ರಸ್ತೆ

ಔರಂಗಜೇಬನಿಗೆ ವಾಗಣಗೇರಿ ಕೋಟೆ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಔರಂಗಜೇಬನ ಕೊನೆಯ ಯುದ್ಧ. ಸೋತು ಸುಣ್ಣವಾದ ಆತ ತನ್ನ ರಕ್ತದಿಂದ ಹಸ್ತಾಕ್ಷರ ಮಾಡಿದ ಶರಣಾಗತಿ ಪತ್ರ ಸುರಪುರದ ಅರಮನೆಯಲ್ಲಿ ಇದೆ. ಸುರಪುರ ಅರಸರು ಈ ಮೂಲಕ ದಕ್ಷಿಣ ಭಾರತದ ದೇಗುಲಗಳನ್ನು ರಕ್ಷಸಿದ ಕೀರ್ತಿಗೆ ಭಾಜನರಾದರು.

ಶಿವರಾಜ ಪಾಟೀಲ
ಶಿವರಾಜ ಪಾಟೀಲ
ಬಯಲು ಶೌಚವನ್ನು ಮುಕ್ತವಾಗಿಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಆದರೆ ಅಧಿಕಾರಿಗಳು ಜನರಲ್ಲಿ ಯೋಜನೆಗಳ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಜತೆಗೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸಬೇಕು.
ಶಿವರಾಜ ಪಾಟೀಲ ಗ್ರಾಮದ ಮುಖಂಡ
ಪುತ್ರಪ್ಪಗೌಡ
ಪುತ್ರಪ್ಪಗೌಡ
ಶೇ 80ರಷ್ಟು ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳು ಇವೆ. ಜನರು ಬಳಕೆ ಮಾಡುತ್ತಿಲ್ಲ. ಹೀಗಾಗಿ ಬಯಲು ಶೌಚ ನಿಲ್ಲುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು
ಪುತ್ರಪ್ಪಗೌಡ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT