ಮಂಗಳವಾರ, ಜೂನ್ 15, 2021
24 °C
₹2.50 ಲಕ್ಷ ವೇತನ, ನೇರ ಸಂದರ್ಶನ ಇಟ್ಟರೂ ಬಾರದ ವೈದ್ಯರು

ಯಾದಗಿರಿ ಜಿಲ್ಲೆಯಲ್ಲಿ ಫಿಜಿಷಿಯನ್, ಅರವಳಿಕೆ ತಜ್ಞರ ಕೊರತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಫಿಜಿಷಿಯನ್, ಅರವಳಿಕೆ ತಜ್ಞರ ಕೊರತೆ ಕಾಡುತ್ತಿದೆ. ಇದರಿಂದ ವೆಂಟಿಲೇಟರ್‌, ಆಮ್ಲಜನಕ ಬೆಡ್‌ಗಳ ಯಂತ್ರಗಳನ್ನು ಕಾರ್ಯಾಚರಣೆ ಮಾಡಲು ಆಗದಂತ ಸ್ಥಿತಿ ಏರ್ಪಟ್ಟಿದೆ.

ಜಿಲ್ಲೆಯಲ್ಲಿ ಪ್ರತಿದಿನ 200ರಿಂದ 300 ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಆರೋಗ್ಯದ ಗಂಭೀರ ಸಮಸ್ಯೆ ಇದ್ದವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಆದರೆ, ವೈದ್ಯರ ಕೊರತೆಯಿಂದ ಎಲ್ಲರಿಗೂ ಸಮರ್ಪಕ ಆರೈಕೆ ಸಿಗುತ್ತಿಲ್ಲ.

ವೆಂಟಿಲೇಟರ್‌ಗೆ ತಜ್ಞರೇ ಇಲ್ಲ: ಜಿಲ್ಲಾಸ್ಪತ್ರೆಯಲ್ಲಿ 26 ವೆಂಟಿಲೇಟರ್‌ಗಳಿದ್ದು, ಸದ್ಯ 16 ಮಾತ್ರ ಕಾರ್ಯಾಚರಣೆ ಮಾಡುತ್ತಿವೆ. ಇದಕ್ಕೆ ಕಾರಣ ವೈದ್ಯರ ಕೊರತೆ. ಇನ್ನುಳಿದ 10 ವೆಂಟಿಲೇಟರ್‌ ಇದ್ದೂ ಇಲ್ಲದಂತೆ ಆಗಿದೆ. ಇದು ಕೋವಿಡ್‌ ರೋಗಿಗಳ ಮೇಲೆ ಪ್ರಭಾವ ಬೀರುತ್ತಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ 5 ಫಿಜಿಷಿಯನ್‌ ಬೇಕಾಗಿದ್ದಾರೆ.

ವೆಂಟಿಲೇಟರ್‌ ನೋಡಿಕೊಳ್ಳುವ ವೈದ್ಯರು ರೋಗಿಯ ಪ್ರತಿ ಚಲನವಲನ ಗಮನಿಸಿ ಚಿಕಿತ್ಸೆಗೆ ತಯಾರಿ ಮಾಡಿಕೊಳ್ಳಬೇಕಿದೆ. ಆದರೆ, ವೈದ್ಯರೆ ಇಲ್ಲದಿದ್ದರಿಂದ ಸಾವಿಗೂ ಕಾರಣವಾಗುತ್ತಿದೆ.

ಇದರ ಜೊತೆಗೆ ಬಿಎಸ್‌ಸಿ ನರ್ಸಿಂಗ್‌, ಐಸಿಯುನಲ್ಲಿ ಕೆಲಸ ಮಾಡಿದ ಅನುಭವ ಇರುವ ದಾದಿಯರು ಬೇಕಾಗುತ್ತದೆ. ಆದರೆ, ಇವರ ಹುದ್ದೆಯೂ ಖಾಲಿ ಇದೆ.

ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದ ಡಾ.ಎಸ್‌.ಬಿ.ಹಿರೇಮಠ ಅವರು ಕಾರ್ಯದೋತ್ತಡ ತಾಳದೆ ಬಿಟ್ಟುಹೋಗಿದ್ದಾರೆ. ಈಗ ಈ ಹುದ್ದೆ ಪ್ರಭಾರಿ ಉಸ್ತುವಾರಿಯಲ್ಲಿ ನಡೆಯುತ್ತಿದೆ.

‘ಒಂದು ವೆಂಟಿಲೇಟರ್‌ ಕಾರ್ಯಾಚರಣೆ ಮಾಡಲು ತಜ್ಞ ವೈದ್ಯ, ನುರಿತ ದಾದಿ ಸೇರಿದಂತೆ ಒಂದು ತಂಡದಲ್ಲಿ 4–5 ಜನ ಬೇಕಾಗುತ್ತದೆ. ಆದರೆ, ಒಬ್ಬರೂ ಬರಲು ಸಿದ್ಧವಿಲ್ಲ. ಆಮ್ಲಜನಕ ಬೆಡ್‌ ಹೆಚ್ಚು ಮಾಡಿದರೂ ಯಾವುದೇ ಉಪಯೋಗವಿಲ್ಲದಂತಾಗಿದೆ’ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.

ವೈದ್ಯೆಗೆ ಕೋವಿಡ್‌: ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಿಜಿಷಿಯನ್‌ಗೆ ಕೋವಿಡ್‌ ದೃಢಪಟ್ಟಿದ್ದರಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳ ಆರೈಕೆ ಒಬ್ಬರ ಮೇಲೆ ಭಾರ ಬಿದ್ದಂತೆ ಆಗಿದೆ.

ನೇರ ಸಂದರ್ಶನಕ್ಕೂ ಬಾರದ ವೈದ್ಯರು: ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞವೈದ್ಯರ ಹೆಚ್ಚುವರಿ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ನೇರ ಸಂದರ್ಶನ ಏರ್ಪಡಿಸಲಾಗಿದೆ. ಆದರೂ ಒಬ್ಬರೂ ಬಾರದೇ ಮತ್ತೆ ಕಾಯುವ ಪರಿಸ್ಥಿತಿ ಇದೆ.

ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರ 3 ಹುದ್ದೆ, ಅರವಳಿಕೆ ತಜ್ಞರ 3 ಹುದ್ದೆ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 8 ಹುದ್ದೆ, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 2 ಹುದ್ದೆ, ಅವಶ್ಯವಿರುವ ಹೆಚ್ಚುವರಿ ವೈದ್ಯಕೀಯ ತಜ್ಞರ 2 ಹುದ್ದೆ, ಅವಶ್ಯವಿರುವ ಹೆಚ್ಚುವರಿ ಅರವಳಿಕೆ ತಜ್ಞರ 2 ಹುದ್ದೆ, ಅವಶ್ಯವಿರುವ ಹೆಚ್ಚುವರಿ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ 8 ಹುದ್ದೆಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದ್ದರೂ ಒಬ್ಬರೂ ಬಾರದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ವೈದ್ಯಕೀಯ ತಜ್ಞ ಹುದ್ದಗೆ ಎಂಡಿ ವಿದ್ಯಾರ್ಹತೆ ಹೊಂದಿರಬೇಕಿದ್ದು, ₹2,50,000 ವೇತನ ನೀಡಲಾಗುತ್ತಿದೆ. ಆದರೂ ಇಲ್ಲಿಯವರೆಗೆ ಒಬ್ಬರೂ ಸಂದರ್ಶನಕ್ಕೆ ಬಾರದಿರುವುದು ಸಮಸ್ಯೆ ಜಟಿಲವಾಗಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಶಂಕರ್‌ ಅವರು ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಆದರೆ, ತಜ್ಞ ವೈದ್ಯರ ಭರ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವೈದ್ಯಕೀಯ ಕಾಲೇಜು ಇರುವುದರಿಂದ ಅಲ್ಲಿಗೆ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆಯಾದರೂ ಭರ್ತಿ ಮಾಡಿಕೊಂಡರೆ ಅಲ್ಲಿಂದ ಅವರನ್ನು ಜಿಲ್ಲಾಸ್ಪತ್ರೆಗೆ ನೇಮಿಸಿಕೊಳ್ಳಬಹುದು. ಆದ್ದರಿಂದ ಸಚಿವರು ಇತ್ತ ಗಮನಹರಿಸಿ ಸರ್ಕಾರದ ಮೇಲೆ ಒತ್ತಡ  ತಂದು ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಜಿಲ್ಲೆಗೆ ಬೇಕಾಗಿದೆ 31 ತಜ್ಞವೈದ್ಯರು

ಜಿಲ್ಲೆಯಲ್ಲಿ ವಿವಿಧ ವಿಭಾಗದ 31 ತಜ್ಞ ವೈದ್ಯರ ಕೊರತೆ ಇದೆ. ಇದು ಜಿಲ್ಲೆಯಲ್ಲಿ ಕೋವಿಡ್‌ ರೋಗಿ ಸೇರಿದಂತೆ ಕೋವಿಡೇತರ ರೋಗಿಗಳ ಮೇಲೆಯೂ ಪ್ರಭಾವ ಬೀರುತ್ತಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ 17 ಹುದ್ದೆ ಮಂಜೂರು ಆಗಿದ್ದು, ಇದರಲ್ಲಿ 4 ಜನರು ಮಾತ್ರ ಕರ್ತರ್ವ್ಯ ನಿರ್ವಹಿಸುತ್ತಿದ್ದಾರೆ. 13 ಹುದ್ದೆಗಳ ಖಾಲಿ ಇವೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೇ ತಾಲ್ಲೂಕು ಕೇಂದ್ರಗಳಲ್ಲಿಯೂ ವೈದ್ಯರ ಕೊರತೆಯಿಂದ ಆಸ್ಪತ್ರೆಗಳಲ್ಲಿ ಸರಿದೂಗಿಸಿಕೊಂಡು ಹೋಗುವುದೇ ಸವಾಲಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ನೇರ ಸಂದರ್ಶನ ಏರ್ಪಡಿಸಿದರೂ ಯಾರೂ ಬಂದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಡಿಎಚ್‌ಒ ಡಾ.ಇಂದುಮತಿ ಕಾಮಶೆಟ್ಟಿರಿ ತಿಳಿಸಿದ್ದಾರೆ.

* ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ನೇರ ಸಂದರ್ಶನ ಏರ್ಪಡಿಸಿದರೂ ಯಾರೂ ಬಂದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ
- ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

* ಜಿಲ್ಲಾಸ್ಪತ್ರೆಯಲ್ಲಿ ಫಿಜಿಷಿಯನ್‌, ಅನಸ್ತೆನಿಯಾ ತಜ್ಞರ ಕೊರತೆ ಇದೆ. ವೈದ್ಯರೇ ಇಲ್ಲದಿದ್ದರೆ ವೆಂಟಿಲೇಟರ್‌, ಆಮ್ಲಜನಕ ಹಾಸಿಗಗಳ ಯಂತ್ರಗಳನ್ನು ಆಪರೇಟ್‌ ಮಾಡಲು ಸಾಧ್ಯವಿಲ್ಲ

-ಡಾ.ಸಂಜೀವಕುಮಾರ ರಾಯಚೂರಕರ್, ಪ್ರಭಾರಿ ಜಿಲ್ಲಾ ಶಸ್ತ್ರಚಿಕಿತ್ಸಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು