ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ: ₹4.84 ಕೋಟಿ ವೆಚ್ಚ ಕೆರೆಗೆ ನೀರು ತುಂಬಿಸುವ ಯೋಜನೆ

Published 7 ಫೆಬ್ರುವರಿ 2024, 5:06 IST
Last Updated 7 ಫೆಬ್ರುವರಿ 2024, 5:06 IST
ಅಕ್ಷರ ಗಾತ್ರ

ಶಹಾಪುರ: ನಗರದ ನಾಗರ ಕೆರೆ ಹಾಗೂ ಮಾವಿನ ಕೆರೆಗೆ ಶಹಾಪುರ ಶಾಖಾ ಕಾಲುವೆ(ಎಸ್‌ಬಿಸಿ) ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು, ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದು ಈ ಭಾಗದ ಜನರಲ್ಲಿ ಹೊಸ ಭರವಸೆಗಳನ್ನು ತುಂಬಿದೆ.

ಕಂದಾಯ ದಾಖಲೆಗಳ ಪ್ರಕಾರ ನಾಗರ ಕೆರೆ 12.5 ಎಕರೆಯಷ್ಟು ಇದ್ದರೆ, ಮಾವಿನ ಕೆರೆ ಸುಮಾರು 6 ಎಕರೆಯಷ್ಟು ಪ್ರದೇಶವಿದೆ. ಈ ಕೆರೆಗಳನ್ನು ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾಗಿತ್ತು. ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಬೀಳುವ ಮಳೆಯ ನೀರು ನೇರವಾಗಿ ಕೆರೆಗೆ ಸಂಗ್ರಹಿಸುವ ಉದ್ದೇಶದಿಂದ ಪ್ರತ್ಯೇಕವಗಿ ಎರಡು ಕೆರೆಗಳನ್ನು ನಿರ್ಮಿಸಿದ್ದರು. ಇದೇ ನೀರನ್ನು ಅಂದು ಕೃಷಿ ಚಟುವಟಿಕೆಗೆ ಬಳಿಸಲಾಗುತ್ತಿತ್ತು.

ಆದರೆ ಸದ್ಯ ಒತ್ತುವರಿಯಿಂದಾಗಿ ಕೆರೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಕೆರೆಗಳ ಅಂಗಳದಲ್ಲಿ ವಸತಿ ಕಟ್ಟಡಗಳು, ಮನೆಗಳು ನಿರ್ಮಾಣವಾಗುವ ಮೂಲಕ ಕೆರೆ ಒತ್ತುವರಿಯಾಗಿದೆ. ನಾಗರ ಕೆರೆಯಲ್ಲಿ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ. ಅಲ್ಲದೆ ಮಾವಿನ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒತ್ತುವರಿ ಮಾಡಿಕೊಂಡು ಕೆಲ ವ್ಯಕ್ತಿಗಳು ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ ಎಂಬ ದೂರು ಇದೆ.

ಹೀಗಾಗಿ ಕೆರೆಗೆ ನೀರು ತುಂಬಿಸುವ ಯೋಜನೆ ಈ ಭಾಗದ ಜನರಲ್ಲಿ ಸಂತಸವನ್ನುಂಟು ಮಾಡಿದ್ದರೆ, ಕೆರೆ ಒತ್ತುವರಿಯಾಗಿರುವುದು ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಕೆರೆ ತುಂಬಿಸುವ ಮೊದಲು ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ, ನೀರು ಸಂಗ್ರಹಿಸಬೇಕು ಎಂದು ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.

ಕೆರೆ ಜಾಗ ಒತ್ತುವರಿಯಾಗಿರುವುದು ಕಣ್ಣಿಗೆ ಕಾಣುತ್ತದೆ. ಭೂ ಮಾಪನ ಇಲಾಖೆಯವರು ಕೆರೆಯ ವಿಸ್ತೀರ್ಣವನ್ನು ಸರ್ವೆ ಮಾಡಿ, ಗಡಿಗಳನ್ನು ಗುರುತಿಸಿ, ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಇದರಿಂದ ಕೆರೆಯಂಗಳದ ಹೆಚ್ಚಿನ ಜಾಗದಲ್ಲಿ ನೀರು ಸಂಗ್ರಹವಾಗಿಸಲು ಅನುಕೂಲವಾಗುತ್ತದೆ. ಅಲ್ಲದೆ ಸಾರ್ವಜನಿಕರ ಆಸ್ತಿ ಉಳಿಸಿದಂತೆ ಆಗುತ್ತದೆ. ಕೆರೆಯ ಪ್ರದೇಶದಲ್ಲಿ ಮಾಹಿತಿ ಮತ್ತು ವಿವರದ ನಾಮಫಲಕ ಅಳವಡಿಸಬೇಕು. ಅನುದಾನ ತಂದರೆ ಸಾಲದು, ಅದು ಸಮರ್ಪಕವಾಗಿ ಸದ್ಬಳಕೆಯಾಗಬೇಕು. ತಹಶೀಲ್ದಾರ್‌ ಅವರು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

3ಎಸ್ಎಚ್ ಪಿ 1(2): ನಗರದ ನಾಗರ ಕೆರೆ (ಸಂಗ್ರಹ ಚಿತ್ರ)
3ಎಸ್ಎಚ್ ಪಿ 1(2): ನಗರದ ನಾಗರ ಕೆರೆ (ಸಂಗ್ರಹ ಚಿತ್ರ)
ಹಲವು ವರ್ಷ ತಾಂತ್ರಿಕ ಕಾರಣದಿಂದ ಕೆರೆಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು. ₹4.84 ಕೋಟಿ ವೆಚ್ಚದಲ್ಲಿ ನಗರದ ಎರಡು ಕೆರೆಗೆ ಕಾಲುವೆ ಮೂಲಕ ಮೂರು ತುಂಬಿಸುವ ಯೋಜನೆ ಇದಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದು
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಎರಡು ಕೆರೆಗಳ ಬಗ್ಗೆ ಒತ್ತುವರಿಯಾದ ಬಗ್ಗೆ ದೂರು ಬಂದಿಲ್ಲ. ಸಾರ್ವಜನಿಕರಿಂದ ಕೆರೆ ಒತ್ತುವರಿಯಾಗಿದ್ದರ ಬಗ್ಗೆ ದೂರು ಬಂದರೆ ಮರು ಸರ್ವೆ ಮಾಡಿ ಗಡಿ ಗುರುತು ಹಾಕಲಾಗುವುದು. ಒತ್ತುವರಿಯಾಗದಂತೆ ಕ್ರಮಕೈಗೊಳ್ಳಲಾಗುವುದು
ಉಮಾಕಾಂತ ಹಳ್ಳೆ ತಹಶೀಲ್ದಾರ್‌
ಕೆರೆಗೆ ನೀರು ತುಂಬಿಸುವ ಯೋಜನೆ ಉತ್ತಮವಾಗಿದೆ. ಎರಡು ಕೆರೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ವೆ ಮಾಡಿ ಗಡಿ ಗುರುತಿಸಿ ಒತ್ತುವರಿದಾರರನ್ನು ತೆರವುಗೊಳಿಸಬೇಕು. ಇದರಿಂದ ಕೆರೆಯಂಗಳದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಣೆಗೆ ಅನುಕೂಲವಾಗುತ್ತದೆ
ಮಾನಪ್ಪ ಹಡಪದ ಸಾಮಾಜಿಕ ಕಾರ್ಯಕರ್ತ

ಕಾಮಗಾರಿ 4 ತಿಂಗಳಲ್ಲಿ ಪೂರ್ಣ

ಕೃಷ್ಣಾ ಭಾಗ್ಯ ಜಲ ನಿಗಮ(ಕೆಬಿಜೆಎನ್‌ಎಲ್) ನಿಗಮದ ಅನುದಾನದಲ್ಲಿ ₹4.84 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ನಗರದ ಹಾಲಬಾವಿ ರಸ್ತೆಯ ಬಳಿಯ ಎಸ್‌ಬಿಸಿ ಕಾಲುವೆಗೆ ಅಡ್ಡವಾಗಿ ಪೈಪ್‌ಲೈನ್ ಹಾಕಿ ನೀರು ಸೆಳೆದುಕೊಂಡು ನಗರದ ನಾಗರ ಕೆರೆ ಹಾಗೂ ಮಾವಿನ ಕೆರೆಗೆ ನೀರು ತುಂಬಿಸಲಾಗುತ್ತದೆ. ಕಾಲುವೆಯಿಂದ ಕೆರೆಗೆ ನೀರು ತುಂಬಿಸುವ ದೂರ 5 ಕಿ.ಮೀ ಆಗಿದೆ. ಈಗಾಗಲೇ ಪೈಪ್ ಅಳವಡಿಸುವ ಕೆಲಸ ಸಾಗಿದೆ. ಮುಂದಿನ 4 ತಿಂಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಈಗ ಬೇಸಿಗೆಯಲ್ಲಿ ಕೆರೆಯ ನೀರು ಬತ್ತಿದಾಗ ಅಂತರ್ಜಲಮಟ್ಟ ಕುಸಿದು ಕೊಳವೆಬಾವಿ ಒಣಗುತ್ತಿದ್ದವು. ಅದರ ನಿವಾರಣೆಗೆ ಕೆರೆಗೆ ನೀರು ತುಂಬಿಸಲಾಗುತ್ತಿದೆ ಎಂದು ನಿಗಮದ ಎಂಜಿನಿಯರ್ ಶಿವಶಂಕರ ದೇವಾಪುರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT