ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ‘ಆ್ಯಪ್ ಆಧರಿಸಿ ಜಾನುವಾರು ಗಣತಿ’

Published : 22 ಆಗಸ್ಟ್ 2024, 15:42 IST
Last Updated : 22 ಆಗಸ್ಟ್ 2024, 15:42 IST
ಫಾಲೋ ಮಾಡಿ
Comments

ಯಾದಗಿರಿ: ಜಿಲ್ಲೆಯಲ್ಲಿ ಆ್ಯಪ್ ಆಧರಿಸಿ ಜಾನುವಾರು ಗಣತಿ ಮಾಡಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ (ಆಡಳಿತ) ಡಾ.ರಾಜು ಬಿ.ದೇಶಮುಖ ತಿಳಿಸಿದ್ದಾರೆ.

21ನೇ ಜಾನುವಾರು ಗಣತಿಯು ಸೆಪ್ಟೆಂಬರ್ 1ರಂದು ದೇಶದಾದ್ಯಂತ ಆರಂಭಗೊಂಡು ಡಿಸೆಂಬರ್ 31ರವರೆಗೆ ಚಾಲ್ತಿಯಲ್ಲಿರಲಿದೆ. ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದು, ಗಣತಿದಾರರು ಈ ಸಾರಿ ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಕೇಂದ್ರ ಪಶು ಸಂಗೋಪನಾ ಇಲಾಖೆಯಿಂದ 21ನೇ ಲೈವ್ ಸ್ಟಾಕ್ ಸೆನ್ಸ್‌ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಪಶುಸಂಗೋಪನಾ ಇಲಾಖೆಯು 4 ತಿಂಗಳ ಕಾಲ ನಡೆಯುವ ಬೃಹತ್ ಸಮೀಕ್ಷಾ ಕಾರ್ಯಕ್ಕೆ ಸಜ್ಜಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 3 ಜನ ಮಾಸ್ಟರ್‌ ಟ್ರೇನರ್‌ಗಳು ಫೆಬ್ರುವರಿ 12 ರಂದು ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡಿದ್ದು, ಗಣತಿದಾರರಿಗೆ, ಮೇಲ್ವಚಾರಕರಿಗೆ ತರಬೇತಿಯನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತಿದೆ. ಎಲ್ಲಾ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಜಿಲ್ಲಾ ಪಟ್ಟದಲ್ಲಿ ತರಬೇತಿಯನ್ನು ಪಶು ಆಸ್ಪತ್ರೆ, ತರಬೇತಿ ಕೋಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು ಎಂದಿದ್ದಾರೆ.

ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್ ನೆಟ್‌ವರ್ಕ್‌ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ. ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ಪ್ರತ್ಯೇಕವಾದ ಯೂಸರ್ ಐಡಿ ಮತ್ತು ಗುಪ್ತಪದ ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿಯೂ ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜಾನುವಾರು ಸಾಕಾಣಿಕೆದಾರರಿಂದ ಪಕ್ಷಿ ಮತ್ತು ಪ್ರಾಣಿಗಳ ಮಾಹಿತಿ ಪಡೆಯಲಾಗುತ್ತದೆ. ಸಾರ್ವಜನಿಕವಾಗಿ ಬಿಟ್ಟಿರುವ ಬಿಡಾಡಿ ದನ, ನಾಯಿಗಳ ಮಾಹಿತಿಯನ್ನೂ ಸೇರಿಸಲಾಗುತ್ತದೆ. ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಜಾಸ್ತಿ ದನಗಳಿದ್ದರೆ, 1000ಕ್ಕಿಂತ ಜಾಸ್ತಿ ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಾಣಿಕೆ ಇದ್ದರೆ, ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಗಣತಿ ಕಾರ್ಯ ನಿರ್ವಹಿಸಲು ಜಾನುವಾರು ಗಣತಿದಾರರು ಮನೆಮನೆಗೆ ಬಂದ ಸಮಯದಲ್ಲಿ ಸೂಕ್ತ ಮಾಹಿತಿಗಳನ್ನು ಗಣತಿದಾರರಿಗೆ ತಪ್ಪದೇ ಮಾಹಿತಿ ನೀಡಬೇಕು. ಜಾನುವಾರು ಸಾಕಾಣಿಕೆದಾರರು ಮತ್ತು ಸಾರ್ವಜನಿಕರು ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡಿ ಗಣತಿ ಕಾರ್ಯಗಳಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT