ಭಾನುವಾರ, ಸೆಪ್ಟೆಂಬರ್ 26, 2021
21 °C
ಡೆಂಗಿ ರೋಗದಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತೆ ಅಗತ್ಯ: ಡಾ.ಸೂರ್ಯಪ್ರಕಾಶ

ಡೆಂಗಿ ಹರಡದಂತೆ ಮನೆ ಸುತ್ತ ಸ್ವಚ್ಛತೆ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಾರಕವಾದ ಡೆಂಗಿ ರೋಗದಿಂದ ತಪ್ಪಿಸಿಕೊಳ್ಳಲು ಸ್ವಚ್ಛತೆಯೊಂದೇ ಪರಿಹಾರವಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಮುತ್ತ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತ್ಯಾಜ್ಯ ವಸ್ತು ಹಾಗೂ ಇನ್ನಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ ಮನವಿ ಮಾಡಿದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಾರ್ಯಾಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡೆಂಗಿ ವಿರೋಧಿ ಮಾಸಾಚರಣೆ-2020 ಕುರಿತಂತೆ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡೆಂಗಿ ವಿರೋಧಿ ಮಾಸಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ, ಆರೋಗ್ಯ ಉಪಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ, ನೀರು ಸಂಗ್ರಹಣ ತೊಟ್ಟಿಗಳನ್ನು ಪರೀಕ್ಷಿಸಿ ಲಾರ್ವಾ ಕಂಡುಬಂದಲ್ಲಿ ವಾರಕ್ಕೆರಡು ಬಾರಿ ಸ್ವಚ್ಛಗೊಳಿಸಲು ತಿಳಿಸುವ ಜೊತೆಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮಾರಕವಾದ ಡೆಂಗಿ ರೋಗವು ಈಡಿಸ್ ಈಜೀಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನೀರಿನಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಬೆಳೆಸುವ ಈ ಸೊಳ್ಳೆಯು 7 ದಿನಗಳಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ. ಡೆಂಗಿ ಹಾಗೂ ಚಿಕೂನ್‍ಗುನ್ಯಾ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳು. ಡೆಂಗಿ ಜ್ವರ ಮಾರಕವಾದರೆ, ಚಿಕೂನ್‍ಗುನ್ಯಾ ಮಾರಣಾಂತಿಕವಲ್ಲ. ರೋಗ ಖಚಿತಪಟ್ಟಲ್ಲಿ ಕೇವಲ ಪ್ಯಾರಾಸಿಟಮಲ್ ಮಾತ್ರೆಗಳನ್ನೇ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಅಸಪ್ರೀನ್, ಬ್ರೋಪಿನ್ ಮಾತ್ರೆಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು.

ಹಿರಿಯ ಆರೋಗ್ಯ ಸಹಾಯಕ ಶರಣಯ್ಯ ಸ್ವಾಮಿ, ಜಿಲ್ಲಾ ವಿಬಿಡಿ ಸಮಾಲೋಚಕ ಬಸವರಾಜ ಕಾಂತಾ ಇದ್ದರು.

***

ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ತೀವ್ರಜ್ವರ ಕಂಡುಬಂದಲ್ಲಿ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಬೇಕು

- ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು