ಸೋಮವಾರ, ಡಿಸೆಂಬರ್ 9, 2019
21 °C

ಮಾನವ ಹಕ್ಕುಗಳ ಉಲ್ಲಂಘನೆ ಸಲ್ಲದು: ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ: ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮ ಹಕ್ಕುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅದರಂತೆ ನಾವು ಕೂಡ ಬೇರೆಯವರ ಹಕ್ಕುಚ್ಯುತಿ ಮಾಡಬಾರದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಎಲ್ಲ ಸ್ಥಳಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಕಂಡುಬರುತ್ತಿವೆ. ಅದರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಕಿರುಕುಳ, ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅವರ ಆರ್ಥಿಕ ದುರ್ಬಲತೆ ಹಾಗೂ ಶಿಕ್ಷಣದ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ಶಿಕ್ಷಣದಿಂದ ನಿರ್ಮೂಲನೆ ಮಾಡಲು ಸಾಧ್ಯವಿದೆ’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ.ಸಾಲಮಂಟಪಿ ಮಾತನಾಡಿ,‘ಅಧಿಕಾರಿ ವರ್ಗವು ಸಾರ್ವಜನಿಕರ ಸೇವೆ ಮಾಡುವುದು ದೇವರು ನೀಡಿದ ಅವಕಾಶ ಎಂದು ತಿಳಿದು ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳಿಗೆ ತಮ್ಮ ಕೆಲಸಕ್ಕೆ ತಕ್ಕ ವೇತನವನ್ನು ಸರ್ಕಾರ ನೀಡುತ್ತದೆ. ಅದರಲ್ಲಿ ನೆಮ್ಮದಿ ಜೀವನ ನಡೆಸಬಹುದು. ಕಾರಣ ಅನ್ಯ ಮಾರ್ಗಗಳಿಂದ ಹಣ ಗಳಿಕೆಗೆ ಮುಂದಾಗಬಾರದು. ಈ ಮೂಲಕ ಮಾನವ ಹಕ್ಕುಗಳ ರಕ್ಷಣೆಯ ಜೊತೆಗೆ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ,‘ಹುಟ್ಟುವ ಮುನ್ನವೇ ಭ್ರೂಣಹತ್ಯೆಯಂತಹ ಹೀನಕೃತ್ಯಗಳು ನಡೆಯುತ್ತಿವೆ. ಆದ್ದರಿಂದ, ಸಮಾಜದಲ್ಲಿ ಮನುಷ್ಯ ಮನುಷ್ಯನಾಗಿ ಜೀವನ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಹತ್ತಿ ಕೀಳುವ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಹೊಲಕ್ಕೆ ಕಳುಹಿಸುತ್ತಾರೆ. ಅದನ್ನು ಟ್ರಾನ್ಸ್‌ಪೋರ್ಟ್ ಕಾಯ್ದೆಯ ಮೂಲಕ ತಡೆಯಬಹುದು. ಮಕ್ಕಳ ಸಮಸ್ಯೆಗಳನ್ನು ನಿವಾರಿಸಲು ಗ್ರಾಮಸಭೆಗಳನ್ನು ಆಯೋಜಿಸಬೇಕಿದೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿವಾಹ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡುವಾಗ ಮುದ್ರಣ ಮಾಲೀಕರು ಕಡ್ಡಾಯವಾಗಿ ವಧು-ವರರ ವಯಸ್ಸನ್ನು ಪರಿಶೀಲಿಸುವಂತೆ ಆದೇಶಿಸಲಾಗಿದೆ’ ಎಂದರು.

ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ಉಪನ್ಯಾಸ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ, ಹೆಚ್ಚುವರಿ ಸಿವಿಲ್ ನ್ಯಾಧೀಶ ಕಾಡಪ್ಪ ಹುಕ್ಕೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು