ಮಂಗಳವಾರ, ಮಾರ್ಚ್ 28, 2023
23 °C
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಂಘಟನೆಗಳಿಗೆ ಗಂಗಾಧರಶ್ರೀ ಸಲಹೆ

‘ಜನೋಪಯೋಗಿ ಕಾರ್ಯ ಮಾಡಿ’: ಗಂಗಾಧರಶ್ರೀ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕನ್ನಡ ಪರ ಸೇರಿದಂತೆ ಯಾವುದೇ ಸಂಘಟನೆಗಳು ರಚನಾತ್ಮಕವಾಗಿದ್ದಾಗ ಅದಕ್ಕೆ ಬೆಲೆ ಬರುತ್ತದೆ ಎಂದು ಅಬ್ಬೆತುಮಕೂರು ವಿಶ್ವಾರಾಧ್ಯ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಅಭಿ‍ಪ್ರಾಯ ವ್ಯಕ್ತಪಡಿಸಿದರು.

ನಗರದ ಗಂಜ್‌ ಪ‍್ರದೇಶ ದ ಮೌನೇಶ್ವರ ದೇವಸ್ಥಾನ ಬಳಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಸೋಮವಾರ 5 ಜೋಡಿಗಳ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಲವಾರು ಸಂಘಟನೆಗಳು ಅದ್ಧೂರಿಯಾಗಿ ಗದ್ದಲ ಗಲಾಟೆಯಿಂದ ಮಾಡುತ್ತವೆ. ಇದು ಸರಿಯಲ್ಲ. ನಾಲ್ಕು ಜನಕ್ಕೆ ಉಪಯೋಗವಾಗುವ ಕೆಲಸಗಳು ಸಂಘಟನೆಗಳು ಆಗುವುದರಿಂದ ಜನತೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಜೈ ಕರವೇಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಸರಳ ಮತ್ತು ಸಾಮೂಹಿಕ ವಿವಾಹದಿಂದ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಎಂದರು.

ನವ ಜೋಡಿಗಳು ಅನ್ಯೋನ್ಯತೆ ಯಿಂದ ಜೀವಿಸಿದಾಗ ಮಾತ್ರ ದಾಂಪತ್ಯ ಉಳಿಯಲು ಸಾಧ್ಯ. ಹೀಗಾಗಿ ಪರಸ್ಪರ ಗೌರವದಿಂದ ಒಬ್ಬರನ್ನೊಬ್ಬರ ಪ್ರೀತಿಸಬೇಕು. ಹೆಚ್ಚು, ಕಮ್ಮಿ ಎಂದು ತಿಳಿದುಕೊಳ್ಳಬಾರದು. ಇಬ್ಬರು ಸಮಾ ನರು ಎಂದುಕೊಂಡಾಗ ಮಾತ್ರ ಹಡಗು ಶಾಂತವಾಗಿ ಸಾಗುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಸಾಮೂಹಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಕನ್ನಡ ಉಳಿಯಲು ಮನೆಯಲ್ಲಿ ಅಪ್ಪ, ಅಮ್ಮ ಎಂದು ಕರೆಸಿಕೊಳ್ಳಿ. ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಕೊಡುವುದರ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಜೈ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್‌ ಪಾಟೀಲ ಮಾತನಾಡಿ, ಬೆಂಗಳೂರಿನಂತ ಮಹಾನಗರದಲ್ಲಿ ಕನ್ನಡ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ತಮಿಳು, ತೆಲುಗು, ಹಿಂದಿ, ಮಲಿಯಾಳಿಗಳಿಂದ ಬೆಂಗಳೂರು ತುಂಬಿದೆ. ಶೇ 60 ರಷ್ಟು ಪರಭಾಷಿಕರು ಇದ್ದಾರೆ. ಹೀಗಾಗಿ ಸಂಘಟನೆಗಳಿಂದ ಮಾತ್ರ ಕನ್ನಡ ಕಟ್ಟಲು ಸಾಧ್ಯ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಭೀಮನಳ್ಳಿ ಪ್ರಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆ ಜನಪರ ಹೋರಾಟ ನಡೆಸುತ್ತಿದೆ. 371 (ಜೆ) ಸಂಪೂರ್ಣ ಜಾರಿಯಾಗಿ ಸ್ಥಳೀಯರಿಗೆ ಎಲ್ಲ ರೀತಿಯಿಂದ ಅನುಕೂ ಲವಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಡಾ.ಎಸ್‌.ಬಿ.ಕಾಮರೆಡ್ಡಿ, ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್‌, ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ಅವಿನಾಶ ಜಗನ್ನಾಥ, ಜೆಡಿಎಸ್‌ ಮುಖಂಡ ಮಲ್ಲಯ್ಯ ಗುಂಡಗುರ್ತಿ, ನಗರಸಭೆ ಮಾಜಿ ಸದಸ್ಯ ಮರೆಪ್ಪ ಚಟ್ಟರಕರ್‌, ನಾಗರಾಜ ಬಿರನೂರ, ವೆಂಕಟರೆಡ್ಡಿ ಮಾಲಿ ಪಾಟೀಲ, ರವಿ ಬಾಪೂರೆ, ರಮೇಶ ದೊಡಮನಿ, ರಾಜು ಯೆಂದೆ, ಬಾಪುಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.