ಶುಕ್ರವಾರ, ಜನವರಿ 24, 2020
28 °C
ಸೈದಾಪುರ: ಕ್ರಿಸ್‍ಮಸ್ ಹಬ್ಬದ ಸಂತಸ ಸಮಾರಂಭಕ್ಕೆ ಚಾಲನೆ

ಕ್ರಿಸ್‌ಮಸ್‌ ವಿಶ್ವಕ್ಕೆ ಶಾಂತಿ ನೀಡಲಿ: ಡಿಸೋಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ವಿಶ್ವದ ಜನರು ಆಚರಿಸುವ ಹಬ್ಬಗಳಲ್ಲಿ ಕ್ರಿಸ್‍ಮಸ್ ಹಬ್ಬ ಪ್ರಮುಖವಾಗಿದೆ. ಈ ಹಬ್ಬವು ದೇಶದ ಜನರಲ್ಲಿ ಶಾಂತಿ, ಸಾಮರಸ್ಯ ಮೂಡಿಸಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಐವಾನ್ ಡಿಸೋಜಾ ಹೇಳಿದರು.

ತಾಲ್ಲೂಕಿನ ಸೈದಾಪುರ ಪಟ್ಟಣದ ಚರ್ಚ್‌ನಲ್ಲಿ ಕ್ರೈಸ್ತ ಯುವ ಬಳಗ ಹಮ್ಮಿಕೊಂಡಿದ್ದ ಕ್ರಿಸ್‍ಮಸ್ ಹಬ್ಬದ ಸಂತಸ ಸಮಾರಂಭವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶ, ವಿಶ್ವದಲ್ಲಿಯೇ ವಿಶಿಷ್ಟವಾಗಿದೆ. ಇಲ್ಲಿ ಎಲ್ಲ ವರ್ಗದ ಜನರು ಶಾಂತಿಯುತವಾಗಿ ಬಾಳುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಪ್ರಸಕ್ತ ದಿನಗಳಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಧರ್ಮದ ಹೆಸರಿನಲ್ಲಿ ಗೊಂದಲ ಮೂಡಿಸಿ ಎಲ್ಲ ವರ್ಗದ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯದ ಎಲ್ಲ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ ಅರಿತಿದ್ದೇನೆ. ರಾಜ್ಯದಲ್ಲಿ ಈ ಹಿಂದೆ ಕ್ರೈಸ್ತ ಅಲ್ಪಸಂಖ್ಯಾತರಿಗೆ ಹೇಳಿಕೊಳ್ಳದಂತಹ ಯೋಜನೆಗಳು ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸದನದಲ್ಲಿ ಜನರ ಸಮಸ್ಯೆಗಳನ್ನು ವಿವರಿಸಿದ ಮೇಲೆ ಅವರು ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 200 ಕೋಟಿ ಅನುದಾನ ನೀಡಿದರು. ಇದರಿಂದ ಎಲ್ಲ ಕಡೆ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಚರ್ಚ್‌ಗಳ ದುರಸ್ತಿ ಕಾರ್ಯಗಳು ನಡೆದವು’ ಎಂದು ವಿವರಿಸಿದರು.

‘ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಬೇಕು. ಅವರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ’ ಎಂದು ಸಲಹೆ ನೀಡಿದರು.

‘ಬರುವ ದಿನಗಳಲ್ಲಿ ನಿಗಮದಿಂದ ಸಮಾಜದ ವಿದ್ಯಾವಂತ ಯುವಕರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ನಿರುದ್ಯೋಗ ಯುವಕರಿಗೆ ಸಣ್ಣ–ಪುಟ್ಟ ಉದ್ಯೋಗ ಮಾಡಲು ಆರ್ಥಿಕ ಸಹಾಯ ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಕ್ರೈಸ್ತರಿಗೆ ಎಲ್ಲೇ ಅನ್ಯಾಯವಾಗಲಿ ಅವರ ಪರವಾಗಿ ಸದನದಲ್ಲಿ ಧ್ವನಿ ಎತ್ತುತ್ತೇನೆ. ಸಮಾಜದಲ್ಲಿ ಎಲ್ಲ ವರ್ಗದ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಬಾಳುವ ಮೂಲಕ ಆರ್ಥಿಕ, ಶೈಕ್ಷಣಿಕವಾಗಿ ಬದಲಾವಣೆಯಾಗಬೇಕು’ ಎಂದರು.

ಶರಣಗೌಡ ವಣಿಕ್ಯಾಳ, ಜಾನ್ ವೆಸ್ಲಿ, ಕನಕ, ವಿಜಯ ಕುಮಾರ, ಫಾದರ್ ರಾಜು, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಅಭಿಮನ್ಯುಗೌಡ ನಗನೂರ, ಶೇಖಣ್ಣ ಹೋತಪೇಟ, ಸುರೇಶ ಆನಂಪಲ್ಲಿ, ಅರ್ಜುನ್ ಇದ್ದರು.

***

ಇಲ್ಲಿನ ಚರ್ಚ್‌ ಅಭಿವೃದ್ದಿಗೆ ವಿಧಾನ ಪರಿಷತ್‌ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯಲ್ಲಿ ₹ 2 ಲಕ್ಷ ಅನುದಾನ ನೀಡುತ್ತೇನೆ.
– ಐವಾನ್‌ ಡಿಸೋಜಾ, ವಿಧಾನ ಪರಿಷತ್‌ ಸದಸ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು