ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಶೀತಲೀಕರಣ ಕೇಂದ್ರಕ್ಕೆ ಬೀಗ

ಪಶು ಸಂಗೋಪನೆ ಸಚಿವರ ಜಿಲ್ಲೆಯಲ್ಲೇ ನಡೆಯದ ಘಟಕ
Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಯಾದಗಿರಿ: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಅವರ ಉಸ್ತುವಾರಿ ಜಿಲ್ಲೆಯಲ್ಲಿಹಾಲು ಶೀತಲೀಕರಣ ಕೇಂದ್ರಕ್ಕೆ ಬೀಗ ಹಾಕಿದ್ದರೂ ಪುನಶ್ಚೇತನಕ್ಕೆಯಾವುದೇ ಕ್ರಮ ಕೈಗೊಂಡಿಲ್ಲ.

1997ರಲ್ಲಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಳ್ಳಿ ಹಾಲುಶೀತಲೀಕರಣ ಕೇಂದ್ರ ಆರಂಭಗೊಂಡಿದ್ದರೂ ಆಗಾಗ ನಿಲ್ಲುವುದರಿಂದ ಹೈನುಗಾರಿಕೆಗೆ ಹಿನ್ನೆಡೆ ಉಂಟಾಗಿದೆ.
ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ವಂಚಿತ ಶಹಾಪುರ, ಯಾದಗಿರಿ ಪ್ರದೇಶಗಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಆರಂಭಿಸಿದ ಹಾಲು ಶೀತಲೀಕರಣ ಕೇಂದ್ರ ಆಗಾಗ ಕೆಲ ದಿನ ನಡೆಯುವುದು– ಬಂದ್ ಆಗುವುದು ನಡೆಯುತ್ತಿದ್ದು, ಇದರಿಂದ ಹೈನುಗಾರಿಕೆ ಚಟುವಟಿಕೆಗೆ ಸಮಸ್ಯೆ ಉಂಟಾಗಿದೆ.

ಅಂದಿನ ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಎಚ್‌.ಡಿ.ರೇವಣ್ಣ ಈ ಘಟಕವನ್ನು ಉದ್ಘಾಟಿಸಿದ್ದರು. ಆರಂಭದ ಕೆಲ ತಿಂಗಳು ನಡೆದರೂ ಸಿಬ್ಬಂದಿ, ಮತ್ತಿತರ ಕೊರತೆಗಳಿಂದ ಈಗ ಘಟಕಕ್ಕೆ ಬೀಗ ಜಡಿಯಲಾಗಿದೆ. ನಿರ್ವಹಣೆ ಕೊರತೆಯಿಂದ ಕಟ್ಟಡ, ಯಂತ್ರೋಪಕರಣಗಳು ಹಾಳಾಗುತ್ತಿವೆ.

ಕೇಂದ್ರವು ಹತ್ತು ಸಾವಿರ ಲೀಟರ್‌ ಹಾಲು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಕೇಂದ್ರಕ್ಕೆ 700ರಿಂದ 800 ಲೀಟರ್‌ ಹಾಲು ಬರುತ್ತಿಲ್ಲ. ಹೀಗಾಗಿ ಕೇಂದ್ರವನ್ನು ಮುಚ್ಚಲಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಆದರೆ, ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಬೀಗ ಜಡಿಯಲಾಗಿದೆ ಎಂಬುದು ಗ್ರಾಮಸ್ಥರ ಆರೋಪ.

2012–13ರಲ್ಲಿ ಕೇಂದ್ರದ ಪುನಶ್ಚೇತನಕ್ಕಾಗಿ ₹22 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ನಂತರ ಮತ್ತೆ ನಿಂತಿದೆ.

‘ಜಿಲ್ಲೆಯಲ್ಲಿ ಹಾಲು ಉತ್ಪಾದಕರ 84 ಸಂಘಗಳು ನೋಂದಣಿಯಾಗಿವೆ. ಅದರಲ್ಲಿ 27 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹಾಲು ಹೆಚ್ಚು ಉತ್ಪಾದನೆಯಾದರೆ ಮಾತ್ರ ಕೇಂದ್ರಗಳು ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಕೆಎಂಎಫ್‌ ಅಧಿಕಾರಿಮನೋಹರ ಕುಲಕರ್ಣಿ ಹೇಳುತ್ತಾರೆ.

‘ಗ್ರಾಮಸ್ಥರು ಕೇಂದ್ರ ಆರಂಭಿಸಿ ನಮಗೆ ಆಕಳು ಒದಗಿಸಿಕೊಡಿ ಎಂದು ಹೇಳುತ್ತಿದ್ದಾರೆ. ಆದರೆ, ಅದು ನಮ್ಮ ಕೆಲಸ ಅಲ್ಲ. ಪಶು ಸಂಗೋಪನೆ ಇಲಾಖೆಯಿಂದ ಪಶುಗಳನ್ನು ಪಡೆಯಬೇಕು’ ಎನ್ನುತ್ತಾರೆ ಅವರು.

‘ಈ ಭಾಗದಲ್ಲಿ ಹೈನುಗಾರಿಕೆ ಬದಲಾಗಿ ಭತ್ತ ಬೆಳೆಯಲು ಆರಂಭಿಸಿದ್ದರಿಂದ ಹಾಲು ಉತ್ಪಾದನೆಗೆ ಹಿನ್ನಡೆಯಾಗಿದೆ. ರೈತರು ಭತ್ತ ಬೆಳೆಯಲು ಆಂಧ್ರವರಿಗೆ ಜಮೀನು ನೀಡಿದ್ದರಿಂದ ಹೈನುಗಾರಿಕೆಯತ್ತ ಯಾರೂ ಮನಸ್ಸು ಮಾಡುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT