ಯಾದಗಿರಿ: 2022-23 ಹಾಗೂ 2023-24ನೇ ಸಾಲಿನ ಕಲಬುರಗಿ ಸಂಸದರ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ವಹಿಸಿದ್ದ ಕಾಮಗಾರಿಗಳ ಅನುದಾನ ದುರ್ಬಳಕೆ ಆಗಿದೆ. ಇದರಿಂದ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ₹54.75 ಲಕ್ಷ ಹಣವನ್ನು ಅಧಿಕಾರಿಯೊಬ್ಬರು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
2022-23ರ ಎರಡು ಕಾಮಗಾರಿ ಹಾಗೂ 2023-24ರ 9 ಕಾಮಗಾರಿಗಳು ಸೇರಿದಂತೆ ಒಟ್ಟು 11 ಕಾಮಗಾರಿಗಳ ಹಣ ದುರ್ಬಳಕೆ ಆಗಿದೆ. ಬಹುತೇಕ ₹5 ಲಕ್ಷ ಮೊತ್ತದ ಸಮುದಾಯ ಭವನ ಹಾಗೂ ರಸ್ತೆ ಕಾಮಗಾರಿಗಳು ಮಾಡಲಾಗಿದೆ. ಅದರೆ, ಬಿಲ್ ಮಾಡದಿರುವುದರಿಂದ ಗುತ್ತಿಗೆದಾರರು ಹಣಕ್ಕಾಗಿ ಎದುರು ನೋಡುವಂತೆ ಆಗಿದೆ.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಶಾಖೆಯಲ್ಲಿ ವಿಷಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಾಂತಯ್ಯ ಮಠದ್ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ₹54.75 ಲಕ್ಷ ಹಣವನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಶಾಂತಯ್ಯ ಮಠದ್ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ₹54.75 ಲಕ್ಷ ಹಣವನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಅಮಾನತು ಆಗಿರುವಾಗಲೇ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ದುರ್ಬಳಕೆ ಮಾಡಿಕೊಂಡಿದ್ದ ಪ್ರಥಮ ದರ್ಜೆ ಸಹಾಯಕ ಶಾಂತಯ್ಯ ಮಠದ್ ಅವರು 2024ರ ಜೂನ್ 15ರಂದು ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಅವರ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಹಣ ದುರ್ಬಳಕೆ ಆಗಿರುವುದನ್ನು ಪತ್ತೆಹಚ್ಚಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆ ಮಾಡಿ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ. ಇದರಿಂದ ಹಣ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.
ಮಠದ್ ಅವರ ತಾಯಿ ಶಾಂತಮ್ಮ ಅವರ ಕರ್ನಾಟಕ ಬ್ಯಾಂಕ್ ಖಾತೆಗೆ ₹50 ಲಕ್ಷ ವರ್ಗಾಯಿಸಿರುವುದು ತನಿಖೆಯಿಂದ ಪತ್ತೆಯಾಗಿದೆ. ಈ ಹಣದಲ್ಲಿ ವೈಯಕ್ತಿಕ ಕಾರಣಕ್ಕೆ ₹ 6.16 ಲಕ್ಷ ಬಳಸಿಕೊಂಡಿದ್ದಾರೆ. ಬಾಕಿ ಉಳಿದ ₹43.83 ಲಕ್ಷ ಜಿಲ್ಲಾಧಿಕಾರಿ ಕಚೇರಿಯ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಜುಲೈ 26ರಂದು ಹಣವನ್ನು ವಾಪಸ್ ಜಮಾ ಮಾಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ, ಇನ್ನುಳಿದ ₹10.91 ಲಕ್ಷ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಸೆನ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಲೆಕ್ಕಾಧಿಕ್ಷಕರು ಕರ್ತವ್ಯ ಲೋಪ ಎಸಗಿದ್ದಾರೆ. ಇವರ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದು, ಸರ್ಕಾರದಿಂದ ಯಾವ ಕ್ರಮ ಆಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.
ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನ ಅನುದಾನ ದುರ್ಬಳಕೆ ಸಂಬಂಧಪಟ್ಟಂತೆ ಮೃತ ಅಧಿಕಾರಿ ಪತ್ನಿ ಈಗಾಗಲೇ ಪತ್ರ ಬರೆದಿದ್ದು ತಾಂತ್ರಿಕ ಸಮಸ್ಯೆಯಿಂದ ಅನುದಾನ ಇನ್ನೂ ಜಮೆಯಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಪತ್ರ ಬರೆಯಲಾಗಿದೆಡಾ.ಸುಶೀಲಾ ಬಿ. ಜಿಲ್ಲಾಧಿಕಾರಿ
ಯಾದಗಿರಿ ಜಿಲ್ಲೆಯಲ್ಲಿ ಸಂಸದರ ನಿಧಿಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವತಂಕ್ಕೆ ಬಳಕೆ ಮಾಡಿಕೊಳ್ಳುವುದು ಕಂಡು ಬಂದಿದ್ದು ಯಾರನ್ನು ಹಿಡಿದುಕೊಳ್ಳುವುದು ಎನ್ನುವ ಪರಿಸ್ಥಿತಿ ಸರ್ಕಾರದ್ದಾಗಿದೆಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಚೇರಿ ಮುಖ್ಯಸ್ಥರ ಖಾತೆಗೆ ಸರ್ಕಾರದ ಅನುದಾನ ಜಮೆ ಮಾಡಿಕೊಳ್ಳುವುದು ನಡೆದಿದೆ. ಇದರಿಂದ ಬ್ಯಾಂಕ್‌ಗಳಿಂದ ಬಡ್ಡಿ ಪಡೆಯತ್ತಾರೆ. ಇದು ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗುತ್ತದೆ. ಅವವ್ಯಹಾರ ನಡೆದಿದ್ದರೆ ಕ್ರಮ ಕೈಗೂಳ್ಳಬೇಕುಅಶೋಕ ಮಲ್ಲಾಬಾದಿ ರೈತ ಮುಖಂಡ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.