ಗುರುವಾರ , ಸೆಪ್ಟೆಂಬರ್ 16, 2021
29 °C

ನಾಗರ ಪಂಚಮಿ; ಗ್ರಾಮೀಣ ಕ್ರೀಡೆ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವ ವೇಳೆಯಲ್ಲಿ ಯರಗೋಳ ಗ್ರಾಮಸ್ಥರು ನಾಗರ ಪಂಚಮಿಯ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು.

ಗ್ರಾಮದ ಪ್ರಮುಖ ದೇವಸ್ಥಾನಗಳನ್ನು ಬೆಳಿಗ್ಗೆ ಸ್ವಚ್ಛಗೊಳಿಸಿ ದೇವರ ಮೂರ್ತಿ, ವಿಗ್ರಹಗಳಿಗೆ ಬಿಲ್ವಪತ್ರೆ, ಹೂ, ಬಾಳೆ, ತೆಂಗಿನ ಗರಿಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.

ಮುಖ್ಯ ರಸ್ತೆ, ಮಂದಿರದ ಆವರಣ, ಸಾರ್ವಜನಿಕ ಸ್ಥಗಳಲ್ಲಿ ಜನಪದ ಕ್ರೀಡೆಗಳ ಸದ್ದು ಜೋರಾಗಿತ್ತು. ಯುವಕರು ಕಠಿಣ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡಿಸುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.

ಗ್ರಾಮದ ಸುತ್ತಲಿನ ಊರುಗಳಲ್ಲಿ ಒಂದೇ ಕೈಯಲ್ಲಿ ಭಾರವಾದ ಕಲ್ಲು ಹಿಡಿದುಕೊಂಡು ಗೊತ್ತುಪಡಿಸಿದ ಸ್ಥಳದಲ್ಲಿ ಇರಿಸುವುದು. ಕಬ್ಬಿಣದ ಸಲಾಕಿ ದೂರ ಎಸೆಯುವುದು. ನಿಂಬೆಹಣ್ಣು, ತೆಂಗಿನ ಕಾಯಿ ಗೊತ್ತುಪಡಿಸಿದ ಸ್ಥಳದವರೆಗೂ ಎಸೆಯುತ್ತು ಹೋಗುವುದು. ಕಣ್ಣು ಕಟ್ಟಿಕೊಂಡು ಯಾರ ಸಹಾಯೂ ಇಲ್ಲದೇ ಆಯ್ದ ಸ್ಥಳವನ್ನು ತಲುಪುವುದು. ಭಾರವಾದ ಜೋಳ, ತೊಗರಿ ಚಿಲ್ಲಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುವುದು. ಹಿಮ್ಮುಖವಾಗಿ ಟ್ರಾಕ್ಟರ್ ಚಲಾಯಿಸುವುದು. ಎತ್ತಿನ ಗಾಡಿ ಎಳೆಯುವಂತಹ ಸಾಹಸದ ಆಟಗಳನ್ನು ಬಾಜಿಕಟ್ಟಿ ಸಂಭ್ರಮಿಸಿದರು.

ಯುವತಿಯರು ಜೋಕಾಲಿ, ಕುಂಟೆಬಿಲ್ಲೆ, ಆಣೆಕಲ್ಲು ಆಟವಾಡಿದರೇ ಮಕ್ಕಳು ಗುಂಡು ಕೊಬ್ಬರಿಗೆ ದಾರ ಕಟ್ಟಿ ಚಕ್ರದಂತೆ ತಿರುಗಿಸಿ ಆಡಿದರು. ರಾತ್ರಿ ವೇಳೆ ಮಂದಿರಗಳಲ್ಲಿ ಹಿರಿಯರು ಭಜನೆ ಮಾಡುವರು.

ಗ್ರಾಮದ ಮಹಿಳೆಯರು ಹಾಗೂ ನವ ದಂಪತಿ ನಾಗರ ಕಲ್ಲಿಗೆ ಹಾಲು, ನೈವೇದ್ಯ ಅರ್ಪಿಸಿದರು. ಶೇಂಗಾ ಉಂಡೆ, ರವೆ ಉಂಡೆ, ಹುರಿದ ಅಳ್ಳು, ಕಡಲೆ ಉಂಡೆ, ಅಳ್ಳಿಟ್ಟಿನ ಉಂಡೆ, ಪಾಯಸ, ಹೋಳಿಗೆಯಂತಹ ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ನೈವೇದ್ಯ ಮಾಡಿ‌ ಸವಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.