ಶನಿವಾರ, ಜನವರಿ 18, 2020
19 °C
ಇತ್ಯರ್ಥಯಾಗದ ಬೋರ್ವೆಲ್ ಸಮಸ್ಯೆಗಳು | ಅಧಿಕಾರಿಗಳು ಭೇಟಿ ನೀಡಿದರೂ ಪರಿಹಾರವಿಲ್ಲ

ಹಂಚಿನಾಳ ಗ್ರಾಮಕ್ಕಿಲ್ಲಾ ಮೂಲಸೌಕರ್ಯ, ಕುಡಿಯುವ ನೀರಿಗೂ ಪರದಾಟ

ದೇವಿಂದ್ರಪ್ಪ ಬಿ.ಕ್ಯಾತನಾಳ Updated:

ಅಕ್ಷರ ಗಾತ್ರ : | |

prajavani

ವಡಗೇರಾ: ಊರಲ್ಲಿ 11 ಕೊಳವೆ ಬಾವಿಗಳು ಇವೆ ಅವುಗಳಲ್ಲಿ 9 ಕೊಳವೆ ಬಾವಿಗಳು ನಮ್ಮದು ಅದು ನಮ್ಮ ಜಾಗದಲ್ಲಿ ಇದೆ ಅಂತ ಖಾಸಗಿ ವ್ಯಕ್ತಿಗಳು ಉಪಯೋಗಿಸಲು ಬಿಡುತ್ತಿಲ್ಲಾ. ಇದರಿಂದಾಗಿ ನಮಗೆ ಕುಡಿಯುವ ನೀರು ಸಿಗುತ್ತಿಲ್ಲಾ ಎಂದ ಗ್ರಾಮಸ್ಥರು ತಮ್ಮ ಅಳಲು ತೊಡಗಿಕೊಂಡರು.

ತಾಲ್ಲೂಕಿನ ಹಂಚಿನಾಳ ಗ್ರಾಮದ ಜನರ ಪರಿಸ್ಥಿತಿ ಇದು. ಸುಮಾರು 200 ಕುಟುಂಬಗಳು ವಾಸಿಸುವ ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೇವಲ ಎರಡು ಕೊಳವೆ ಬಾವಿಗಳು ಇವೆ. ಇದರಿಂದ ಗ್ರಾಮದ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.

ಗ್ರಾಮ ಪಂಚಾಯತಿ ವತಿಯಿಂದ ನಿರ್ಮಾಣ ಮಾಡಿದ ನೀರಿನ ನಲ್ಲಿಗಳು ನೀರು ಇಲ್ಲದೆ ತುಕ್ಕು ಹಿಡಿದುಕೊಂಡು ಹಾಳಾಗಿವೆ. ಪೈಪುಗಳು ಹೊಡೆದು ಹೊಗಿ ನೀರು ಸರಬರಾಜು ನಿಂತು ಹೋಯಿತು. ಗ್ರಾಪಂ ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಬೊರವೆಲ್‌ಗಳ ಜಾಗದ ಕುರಿತು ಪಿಡಿಒ, ತಹಶೀಲ್ದಾರರಿಗೆ, ಇಒ ಮತ್ತು ಸಿಇಒ ಅವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಬಂದು ಜಾಗ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸರಿ ಮಾಡುವಂತೆ ಸೂಚಿಸಿ ಹೋಗುತ್ತಾರೆ. ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಇದರಿಂದ ಬೇಸತ್ತು ಗ್ರಾಮಸ್ಥರು ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಶಪಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ಅತ್ತ ಗ್ರಾಮ ಪಂಚಾಯಿತಿ ಇಂದ ಸರಿಯಾಗಿ ನೀರು ಸರಬರಾಜು ಇಲ್ಲ, ಇತ್ತ ಖಾಸಗಿ ವ್ಯಕ್ತಿಗಳು ಬಂದ್ ಮಾಡಿದ ಕೊಳವೆ ಬಾವಿಯಿಂದ ಸಹ ನೀರು ಇಲ್ಲದೆ ಜನರು ತೊಂದರೆ ಅನುಭವಿಸುತ್ತಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ಕಂಡು ಕಂಡರಿಯದಂತೆ ವರ್ತಿಸುತ್ತಿದ್ದಾರೆ.

ಗ್ರಾಮಕ್ಕೆ ಇರುವ 3 ಪ್ರಮುಖ ರಸ್ತೆಗಳು ಹದಗೆಟ್ಟು ಸುಮಾರು ವರ್ಷಗಳು ಕಳೆದಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಎಂತಹ ತುರ್ತು ಪರಿಸ್ಥಿತಿ ಇದ್ದರೂ ಅದೇ ರಸ್ತೆಯಲ್ಲೇ ಹೋಗಬೇಕು. ಗರ್ಭಿಣಿಯರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಹೊಗುವಾಗಲೇ ಹೆರಿಗೆಯಾಗುವಂತೆ ಇರುವ ರಸ್ತೆಗಳಲ್ಲಿ ನಮ್ಮ ನಿತ್ಯ ಸಂಚಾರ ನಡುದಿದೆ ಎಂದು ಗ್ರಾಮದ ನಿವಾಸಿ ಹಣಮಂತ್ರಾಯ ದಾಳಿ ಹೇಳುತ್ತಾರೆ.

ಈ ಊರಲ್ಲಿ ಸರಿಯಾದ ಸಿಸಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆ ಮೇಲೆ ಹರಿದು ಕೊಳಚೆ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಪಾಯಕಾರಿ ಕಾಯಿಲೆಗಾಳಾದ ಕಾಲರಾ, ಮಲೇರಿಯಾ ರೋಗಗಳ ಭಯದಲ್ಲಿ ಜನರು ವಾಸಿಸುತ್ತಿದ್ದಾರೆ.

ಗ್ರಾಮದಲ್ಲಿ ವಿದ್ಯುತ್ ಕಂಬಗಳಿಗೆ ಎಳೆದ ವಿದ್ಯುತ್ ತಂತಿಗಳು ಜೋತು ಬಿದ್ದು ಸುಮಾರು ಎರಡು ವರ್ಷಗಳು ಕಳೆದಿವೆ. ಅದನ್ನು ಸರಿಪಡಿಸಲು ಅನೇಕ ಸಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ನಮಗೆ ಜೀವದ ಭಯ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು