ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮೂರು ತಾಲ್ಲೂಕುಗಳಿಗಿಲ್ಲ ಅಗ್ನಿಶಾಮಕ ಠಾಣೆ

ಗುರುಮಠಕಲ್‌, ಹುಣಸಗಿ ತಾಲ್ಲೂಕುಗಳಲ್ಲಿ ನೀಗದ ಸರ್ಕಾರಿ ಜಾಗದ ಸಮಸ್ಯೆ
Last Updated 20 ಜನವರಿ 2021, 1:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹಳೆ ಮೂರು ತಾಲ್ಲೂಕು ಕೇಂದ್ರಗಳಾದ ಯಾದಗಿರಿ, ಶಹಾಪುರ, ಸುರಪುರ ನಗರದಲ್ಲಿ ಮಾತ್ರ ಅಗ್ನಿಶಾಮಕದಳ ಠಾಣೆಗಳಿದ್ದು, ನೂತನ ತಾಲ್ಲೂಕುಗಳಲ್ಲಿ ಜಾಗದ ಸಮಸ್ಯೆ ಎದುರಾಗಿದೆ.

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಜಿಲ್ಲೆಯ ವಿವಿಧೆಡೆ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ವಿಶೇಷವಾಗಿ ಭತ್ತದ ಬಣಿವೆಗಳಿಗೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸುತ್ತದೆ. ಆಗ ಹಳೆ ತಾಲ್ಲೂಕು ಕೇಂದ್ರದಿಂದ ಬೆಂಕಿ ನಂದಿಸುವ ವಾಹನ ಬರಬೇಕು. ವಾಹನ ಬರುವುದರೊಳಗಾಗಿ ಭಾಗಶಃ ಸುಟ್ಟು ಕರಕರಲಾಗಿರುತ್ತದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಇದ್ದರೆ ಶೀಘ್ರ ಬೆಂಕಿ ನಂದಿಸಲು ಸಾಧ್ಯವಾಗಲಿದೆ.

ಹುಣಸಗಿ, ಗುರುಮಠಕಲ್‌, ವಡಗೇರಾ ತಾಲ್ಲೂಕುಗಳನ್ನು ಕಳೆದ ಮೂರು ವರ್ಷಗಳ ಹಿಂದೆ ನೂತನ ತಾಲ್ಲೂಕು ಕೇಂದ್ರಗಳಾಗಿ ಘೋಷಣೆ ಮಾಡಲಾಗಿದೆ. ಆದರೆ, ಪ್ರಮುಖ ಇಲಾಖೆಗಳು ಸೇರಿದಂತೆ ಅಗ್ನಿಶಾಮಕ ದಳ ಕಚೇರಿಯೂ ಇಲ್ಲದಿದ್ದರಿಂದ ಬೆಂಕಿ ಅವಘಡಗಳಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಎರಡು ತಾಲ್ಲೂಕುಗಳಲ್ಲಿ ಜಾಗದ ಸಮಸ್ಯೆ: ಗುರುಮಠಕಲ್‌ ಮತ್ತು ಹುಣಸಗಿ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಜಾಗದ ಸಮಸ್ಯೆಯಿಂದ ಠಾಣೆಗಳನ್ನು ಸ್ಥಾಪನೆ ಮಾಡಲು ಸಾಧ್ಯವಾಗಿಲ್ಲ. ವಡಗೇರಾ ತಾಲ್ಲೂಕಿನಲ್ಲಿ ಕಂದಾಯ ಭೂಮಿಯನ್ನು ಗುರುತಿಸಲಾಗಿದೆ. ಆದರೆ, ಕಟ್ಟಡಕ್ಕೆ ಇನ್ನೂ ಮೂಹೂರ್ತ ಕೂಡಿ ಬಂದಿಲ್ಲ.

ವಡಗೇರಾ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಕ್ಕದಲ್ಲಿ ಒಂದೂವರೆ ಎಕರೆ ಜಮೀನು ಗುರುತಿಸಲಾಗಿದೆ. ಆದರೆ, ಕಟ್ಟಡ ಇನ್ನೂ ಆರಂಭಿಸಿಲ್ಲ ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

7 ಅಗ್ನಿಶಾಮಕ ವಾಹನಗಳು: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ 7 ಅಗ್ನಿಶಾಮಕ ವಾಹನಗಳಿವೆ. ಯಾದಗಿರಿಯಲ್ಲಿ 3, ಶಹಾಪುರ, ಸುರಪುರ ತಲಾ 2 ವಾಹನಗಳಿವೆ. ಯಾದಗಿರಿಯಲ್ಲಿ 32, ಶಹಾಪುರದಲ್ಲಿ 26, ಸುರಪುರದಲ್ಲಿ 17 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1991ರಲ್ಲಿ ಯಾದಗಿರಿ, 2005ರಲ್ಲಿ ಶಹಾಪುರ, 2008ರಲ್ಲಿ ಸುರಪುರದಲ್ಲಿ ಅಗ್ನಿಶಾಮಕದಳ ಕಚೇರಿ ಆರಂಭವಾಗಿದೆ.

ನೀರಿನ ಸಂಗ್ರಹ ಸಾಮಾರ್ಥ್ಯ: ಅಗ್ನಿಶಾಮಕ ಮಧ್ಯಮ ಗಾತ್ರದ ವಾಹನ 4500 ಲೀಟರ್‌, ದೊಡ್ಡ ಗಾತ್ರದ ವಾಹನ 15,000 ಲೀಟರ್‌ ಸಾಮಾರ್ಥ್ಯ ಹೊಂದಿದೆ. ಚಿಕ್ಕ ಗಾತ್ರದ ತ್ವರಿತ ಪ್ರತಿಕ್ರಿಯೆ ವಾಹನ (QRV) 1,000 ಲೀಟರ್‌ ನೀರಿನ ಸಂಗ್ರಹ ಹೊಂದಿದೆ.

ಅಗ್ನಿ ಅನಾಹುತ ಪ್ರಕರಣಗಳು: 2020ರ ಜನವರಿ ತಿಂಗಳಲ್ಲಿ 4, ಫೆಬ್ರವರಿ 18, ಮಾರ್ಚ್‌ 15, ಏಪ್ರಿಲ್‌ 8, ಮೇ 13, ಜೂನ್‌ 5, ಜುಲೈ 2, ಆಗಸ್ಟ್‌ 1, ಸೆಪ್ಟೆಂಬರ್ 0, ಅಕ್ಟೋಬರ್ 5, ನವೆಂಬರ್ 7, ಡಿಸೆಂಬರ್ 15 ಸೇರಿದಂತೆ ಒಟ್ಟಾರೆ 93 ಅಗ್ನಿ ಅನಾಹುತ ಕರೆಗಳು ಬಂದಿವೆ.

‘ನಮ್ಮ ಭಾಗದಲ್ಲಿ ಯಾವುದಾದರೂ ಬೆಂಕಿಯಿಂದ ಅವಘಡ ಸಂಭವಿಸಿದೆ 50 ಕಿ.ಮೀ ದೂರದ ಹಳೆ ತಾಲ್ಲೂಕು ಕೇಂದ್ರವಾದ ಶಹಾಪುರ ಪಟ್ಟಣದಿಂದ ವಾಹನ ಬರಬೇಕು. ಇದರಿಂದ ವಾಹನ ಬರುವ ಮುನ್ನವೇ ಬೆಂಕಿಯಿಂದ ವಸ್ತುಗಳು ಕರಕರಲಾಗಿರುತ್ತವೆ. ಹೀಗಾಗಿ ನಮ್ಮ ಭಾಗದಲ್ಲಿ ಠಾಣೆ ಸ್ಥಾಪನೆಯಾಗಬೇಕು’ ಎನ್ನುತ್ತಾರೆ ವಡಗೇರಾ ನಿವಾಸಿ ತಿಮ್ಮಣ್ಣ ಕಡೇಚೂರು.

‘ಗುರುಮಠಕಲ್‌, ಹುಣಸಗಿ ತಾಲ್ಲೂಕಿನಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲ. ನಾವು ಈ ಕುರಿತು ಸಂಬಂಧಿಸಿದವರಿಗೆ ಪತ್ರ ಬರೆದು ಠಾಣೆಗೆ ಜಾಗ ಮಂಜೂರು ಮಾಡಲು ವಿನಂತಿಸಿದ್ದೇವೆ. ವಡಗೇರಾರದಲ್ಲಿ ಕೊರೊನಾ ಕಾರಣದಿಂದ ಕಾಮಗಾರಿ ಇನ್ನೂ ಆರಂಭವಾಗಿಲ್ಲ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್‌ ಪಾಟೀಲ.

***

ಜಿಲ್ಲೆಯಲ್ಲಿ ನಡೆದ ಅಗ್ನಿ ಅನಾಹುತಗಳು

ವರ್ಷ; ಅಗ್ನಿ ಅನಾಹುತ

2017;101

2018;105

2019;97

2020;93

***

ಕೋವಿಡ್‌ ಕಾರಣದಿಂದ ನಿಂತ ‘ಜಾಗೃತಿ’

ಶಾಲಾ–ಕಾಲೇಜುಗಳಲ್ಲಿ ಅಗ್ನಿ ಶಾಮಕ ದಳದಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿತ್ತು. ಈ ಬಾರಿ ಕೋವಿಡ್‌ ಕಾರಣದಿಂದ ಜಾಗೃತಿ ಕಾರ್ಯಕ್ರಮ ಮಾಡಲು ಆಗಿಲ್ಲ. ಜೊತೆಗೆ ಶಾಲಾ–ಕಾಲೇಜು 2020ರಲ್ಲಿ ಆರಂಭವಾಗದ ಕಾರಣ ಅರಿವು ಮೂಡಿಸಲು ಆಗಿಲ್ಲ ಎನ್ನುತ್ತಾರೆ ಅಗ್ನಿಶಾಮಕ ದಳದ ಅಧಿಕಾರಿಗಳು.

‘ಶಾಲೆಗಳಲ್ಲಿ ಅಗ್ನಿ ಅನಾಹುತಗಳಾದರೆ ಯಾವ ರೀತಿ ಪಾರಾಗಬೇಕು ಎಂಬುದರ ಕುರಿತು ಅಣುಕು ಪ್ರದರ್ಶನ ಅಲ್ಲಲ್ಲಿ ಏರ್ಪಡಿಸಲಾಗುತ್ತಿತ್ತು. ಕೋವಿಡ್‌ ಕಾರಣದಿಂದ ಕಳೆದ ವರ್ಷ ಜಾಗೃತಿ ಕಾರ್ಯಕ್ರಮಗಳು ನಿಂತಿವೆ. ಆದರೆ, ಪ್ರವಾಹ ಸಂದರ್ಭದಲ್ಲಿ ನಮ್ಮ ಇಲಾಖೆ ವತಿಯಿಂದ ಹಲವಾರು ಕಾರ್ಯಚಟುವಟಿಕೆ ಮಾಡಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್‌ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT