ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಅನುದಾನ ಬಳಕೆಯಲ್ಲಿ ಶೇ 100ರಷ್ಟು ಗುರಿ ಸಾಧಿಸಲು ಸೂಚನೆ

ಎಸ್‍ಸಿಪಿ, ಟಿಎಸ್‍ಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 10 ಮಾರ್ಚ್ 2021, 1:59 IST
ಅಕ್ಷರ ಗಾತ್ರ

ಯಾದಗಿರಿ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಅನುದಾನ ಬಳಕೆಯಲ್ಲಿ ಶೇ 100ರಷ್ಟು ಗುರಿ ಸಾಧಿಸಬೇಕು. ಅನುದಾನ ಬಳಸಲು ಮಾರ್ಚ್ 31 ರವರೆಗೆ ಕಾಯದೇ ಕೂಡಲೇ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‍ಪಿ) ಮಾಸಿಕ, ದೌರ್ಜನ್ಯ ನಿಯಂತ್ರಣ, ಅಲೆಮಾರಿ ಕೋಶ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಫಲಾನುಭವಿಗಳ ಪಟ್ಟಿ ಸಿದ್ಧವಿರುವುದರಿಂದ ಅನುದಾನ ಬಳಸಬೇಕು. ಅಡಚಣೆ ಇದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಬೇಕು. ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಎಲ್ಲಾ ಇಲಾಖೆಯವರು ಕಟ್ಟುನಿಟ್ಟಾಗಿ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ಕೈತಪ್ಪಿ ಹೋಗಬಾರದು. ವರ್ಷದ ಕೊನೆಯವರೆಗೆ ಅನುದಾನ ವೆಚ್ಚ ಮಾಡಲು ಕಾಯದೆ ಅನುದಾನ ಬಂದ ನಂತರ ಅಥವಾ ಆಡಳಿತಾತ್ಮಕ ಮಂಜೂರಾತಿ ಸಿಕ್ಕ ತಕ್ಷಣ ಅನುಷ್ಠಾನಕ್ಕಾಗಿ ಕ್ರಮ ಕೈಗೊಂಡು ಸರ್ಕಾರದ ಆಶಯದಂತೆ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.

ಎಸ್‍ಸಿಪಿ ಹಾಗೂ ಟಿಎಸ್‍ಪಿಯ ಯೋಜನೆಯಡಿ ನೀಡಲಾದ ಕ್ರಿಯಾ ಯೋಜನೆಯಂತೆ ಆಯಾ ಇಲಾಖೆಯವರು ಅನುಷ್ಠಾನಕ್ಕೆ ಕ್ರಮ ಕೈಗೊಂಡು ಪ್ರಗತಿ ವರದಿಯನ್ನು ಪ್ರತಿ ತಿಂಗಳು ಸಮಾಜಕಲ್ಯಾಣ ಇಲಾಖೆಗೆ ಕಳುಹಿಸಬೇಕೆಂದು ಸೂಚನೆ ನೀಡಿದರು.

ಅಲೆಮಾರಿ ಕೋಶ ಸಭೆ: ಜಿಲ್ಲೆಯಲ್ಲಿ ಒಟ್ಟು 42,581 ಜನ ಅಲೆಮಾರಿ ಜನಸಂಖ್ಯೆ ಇದ್ದು, ಇವರಿಗೆ ನಿವೇಶನ ಹಂಚಿಕೆಗಾಗಿ ಜಿಲ್ಲೆಯ ಹಂಚಿನಾಳ, ಮುಡಬೂಳ, ಖಾನಾಪುರ ಹಾಗೂ ಬೇವಿನಹಳ್ಳಿ ಗ್ರಾಮಗಳಲ್ಲಿ ನಿವೇಶನ ರಹಿತ ಅಲೆಮಾರಿ ಜನಾಂಗದವರಿಗೆ ನಿವೇಶನಕ್ಕಾಗಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದರು.

ಜಿಲ್ಲೆಯಲ್ಲಿ ಗೊಲ್ಲ, ಹೆಳವ, ಜೋಗಿ, ಬೈಲತರ್, ಶಿಕ್ಕಲಿಗರ್, ಘಿಸಾಡಿ, ಗೊಂದಳಿ, ದುರ್ಗಮುರ್ಗ, ಕಟಬು, ದರ್ವೆಶ್, ಬುಡ್ಬುಕಿ ಜನಾಂಗದವರು ವಾಸವಾಗಿದ್ದಾರೆ ಎಂದು ವಿವರಿಸಿದರು.

ಅಲೆಮಾರಿ ವಿದ್ಯಾರ್ಥಿಗಳಿಗಾಗಿ 2 ರಿಂದ 10 ನೇ ತರಗತಿ ವರೆಗಿನ ಸುಮಾರು 1,563 ವಿದ್ಯಾರ್ಥಿಗಳಿಗೆ ₹33.26 ಲಕ್ಷ ಪ್ರೋತ್ಸಾಹ ಧನ ಜಮಾ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ ಸಭೆಯ ಗಮನಕ್ಕೆ ತಂದರು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ್ ಸೋನಾವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್‌.ಎಸ್‌.ಚನ್ನಬಸವ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಭು ದೊರೆ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ಶ್ವೇತಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಸೇರಿದಂತೆ ದೌರ್ಜನ್ಯ ತಡೆ ಸಮಿತಿಯ ನಾಮನಿರ್ದೇಶನ ಸದಸ್ಯರಾದ ಖಂಡಪ್ಪ ದಾಸನ್, ನಾಗಣ್ಣ ಬಡಿಗೇರ, ರಮೇಶ ದೊರೆ, ರಮಾದೇವಿ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಇದ್ದರು.

***

ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ತಡೆ ಕಾಯ್ದೆಯ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಸಲಾಯಿತು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂತ್ರಸ್ತರ ಸಮಸ್ಯೆ, ಅವರಿಗೆ ನೀಡಿರುವ ಪರಿಹಾರ, ನ್ಯಾಯಾಲಯ ಪ್ರಕರಣಗಳ ಕುರಿತಂತೆ ಅವರಿಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ದೌರ್ಜನ್ಯ ತಡೆ ಕಾಯ್ದೆ ನೊಂದ ಸಂತ್ರಸ್ತರಿಗೆ ಈಗಾಗಲೇ ₹128 ಲಕ್ಷ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲ ಸೌಲಭ್ಯ ತ್ವರಿತವಾಗಿ ನೀಡಲು ಕ್ರಮವಹಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT