ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಿತಿ ಮೀರಿದ ಪರ್ಸಂಟೇಜ್ ವ್ಯವಹಾರ: ವೆಂಕೋಬ ದೊರೆ

Last Updated 8 ಮೇ 2022, 3:21 IST
ಅಕ್ಷರ ಗಾತ್ರ

ಸುರಪುರ: ‘ಕೆಬಿಜೆಎನ್‍ಎಲ್, ಪಿಡಬ್ಲ್ಯೂಡಿ, ಸಣ್ಣ ನೀರಾವರಿ, ಆರ್‍ಡಿಪಿಆರ್, ವಾಟರ್ ಸಪ್ಲೈ ಇನ್ನಿತರ ಸರ್ಕಾರಿ ಇಲಾಖೆಗಳಲ್ಲಿ ಪರ್ಸಂಟೇಜ್ ವ್ಯವಹಾರ ಮೀತಿ ಮೀರಿದೆ. ಸರ್ಕಾರಿ ಯೋಜನೆಗಳ ವಿವಿಧ ಕಾಮಗಾರಿಗಳು ಪರ್ಸಂಟೇಜ್ ಇಲ್ಲದೆ ಇಂದು ಜಾರಿಯಾಗುತ್ತಿಲ್ಲ’ ಎಂದು ಕರ್ನಾಟಕ ಪರಿಶಿಷ್ಟ ಗುತ್ತೆದಾರರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕೋಬ ದೊರೆ ಆರೋಪಿಸಿದರು.

ಇಲ್ಲಿಯ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಗುತ್ತಿಗೆದಾರ ಸಂತೋಷ್ ಮತ್ತು ಇನ್ನೊಬ್ಬ ಗುತ್ತಿಗೆದಾರನ ಆತ್ಮಹತ್ಯೆಗೆ ಅಧಿಕಾರಿ ವರ್ಗದವರ ಶೋಷಣೆ ಕಾರಣ. ಎಲ್ಲ ಮತ ಕ್ಷೇತ್ರಗಳಲ್ಲಿ ಶಾಸಕರ ಹೆಸರಿನಲ್ಲಿ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ರಾಜಕಾರಣಿಗಳ ಬೆಂಬಲದಿಂದ ಕಾನೂನು ಉಲ್ಲಂಘಿಸಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಹುತೇಕ ಇಲಾಖೆಗಳ ಅಧಿಕಾರಿಗಳ ಕೈಕೆಳಗೆ ಹೊರ ಗುತ್ತಿಗೆ ಆಧಾರದ ಮೇಲೆ ಖಾಸಗಿ ಸಿಬ್ಬಂದಿಗಳು ಕಾಮಗಾರಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕಾಮಗಾರಿ ನೀಡುವಿಕೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಆದೇಶ ಪಾಲನೆಯಾಗುತ್ತಿಲ್ಲ. ಸಣ್ಣ ಗುತ್ತಿಗೆದಾರರನ್ನು ಕಡೆಗಣಿಸಿ ದೊಡ್ಡ ಗುತ್ತಿಗೆದಾರರಿಗೆ ಟೆಂಡರ್ ಹಾಕಲು ಅವಕಾಶ ನೀಡಲಾಗುತ್ತಿದೆ. ಪರಿಶಿಷ್ಟ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿಗಳೆ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಪರಿಶಿಷ್ಟ ಸಣ್ಣ ಗುತ್ತಿಗೆದಾರರಿಗೆ ಕಾಮಗಾರಿ ಸಿಗದ ಕಾರಣ ಬೇರೆ ಕ್ಷೇತ್ರಗಳಿಗೆ ಕಾಮಗಾರಿ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ರಕ್ಷಣೆ ಇಲ್ಲ, ಶೋಷಣೆ ಹೆಚ್ಚಾಗಿದೆ. ಪ್ಯಾಕೇಜ್ ವರ್ಕ್‍ಗಳನ್ನು ಮಾಡಿ ಕಾಮಗಾರಿಗಳಿಂದ ವಂಚಿಸಲಾಗುತ್ತಿದೆ’ ಎಂದು ಜರಿದರು.

‘₹56.88 ಕೋಟಿ ಟೆಂಡರ್ ಉಳಿತಾಯ ಹಣವನ್ನು ಬಬಲೇಶ್ವರಕ್ಕೆ ವರ್ಗಾವಣೆ ಮಾಡಿರುವ ಸಂಬಂಧ ನಾವು ದಾಖಲೆ ಸಮೇತವಾಗಿ ಲೋಕಾಯುಕ್ತ ಇಲಾಖೆಗೆ ದೂರು ಕೊಟ್ಟಾಗ ಎಫ್‍ಐಆರ್ ಆಗಿ ತನಿಖೆ ನಡೆಯುತ್ತಿದೆ. ಕೆಬಿಜೆಎನ್‍ಎಲ್ ಅಧಿಕಾರಿಗಳ ತಪ್ಪು ಸಾಬೀತು ಆಗಿದೆ. ಅಧಿಕಾರಿಗಳು ದಾರಿ ತಪ್ಪಿಸುವ, ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು’ ಎಂದು ಆಗ್ರಹಿಸಿದರು.

‘ಪರ್ಸಂಟೇಜ್ ಪಡೆಯುತ್ತಿರುವ ಅಧಿಕಾರಿಗಳ ಮೊಬೈಲ್ ಕಾಲರ್ ಹಿಸ್ಟರಿಯನ್ನು ಎಸಿಬಿ ಅಥವಾ ಸಿಐಡಿಯಿಂದ ತನಿಖೆ ಮಾಡಿಸಬೇಕು. ಇಲ್ಲ ಮಂಪರು ಪರೀಕ್ಷೆ ನಡೆಸಬೇಕು. ಆಗ ಅವರ ಬಣ್ಣ ಬಯಲಾಗುತ್ತದೆ. ಈಗ ಕರೆದಿರುವ ಕಾಮಗಾರಿಗಳನ್ನು ರದ್ದುಪಡಿಸಿ ಪುನಃ ಕರೆದು ಸಣ್ಣ ಗುತ್ತಿಗೆದಾರರಿಗೆ ಅವಕಾಶ ನೀಡಬೇಕು. ನಮ್ಮ ಮನವಿ ಪರಿಗಣಿಸದೆ ಹೋದಲ್ಲಿ ಮೇ 11 ರಂದು ಸುರಪುರ ಬಂದ್, ರಸ್ತೆ ಸಂಚಾರ ತಡೆ ಉಗ್ರ ಸ್ವರೂಪದ ಹೋರಾಟಕ್ಕೆ ಸಂಘ ತೀರ್ಮಾನಿಸಿದೆ’ ಎಂದರು.

ಮುಖಂಡರಾದ ಶಿವಶಂಕರ ಹೊಸ್ಮನಿ, ರಾಜೂ ದರಬಾರಿ, ಸುಭಾಸ ತೇಲ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT